ಮಾಗಡಿ: ಪಟ್ಟಣದ ತಿರುಮಲೆ ಮುಖ್ಯರಸ್ತೆಯಲ್ಲಿರುವ ಗುರು ರಾಘವೇಂದ್ರ ಸ್ವಾಮಿಗಳ 353ನೇ ಮಧ್ಯಾರಾಧನೆ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಗುರು ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಮಂಗಳವಾದಿಂದ ಆರಂಭವಾಗಿದ್ದು ಗುರುವಾರದವರೆಗೂ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ 6ಕ್ಕೆ ಧ್ವಜಾರೋಹಣ, ಅಂಕುರಾರ್ಪಣೆ, ಗೋಪೂಜೆ, ಅಶ್ವಪೂಜೆ, ಗಜ ಪೂಜೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಬೆಳ್ಳಿ ಕವಚವನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಧ್ಯಾಹ್ನ ಮಹಾಮಂಗಳಾರತಿ ಮಾತಾ ಮಹಿಳಾ ಮಂಡಳಿ ವತಿಯಿಂದ ದೇವರ ಭಜನೆ ಮಾಡಲಾಯಿತು. ರಾಘವೇಂದ್ರ ಸ್ವಾಮಿಗಳ ಮೂರ್ತಿಯನ್ನು ಚಿಕ್ಕ ರಥದಲ್ಲಿ ಇಟ್ಟು ಮಠದಲ್ಲೇ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ರಥೋತ್ಸವ ನೆರವೇರಿಸಲಾಯಿತು. ಸಂಜೆ ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗುರುವಾರ ಉತ್ತರಾದನೆ ನಡೆಯಲಿದ್ದು ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ರಾಯರ ಮಠದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಆಚಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.