ರಾಮನಗರ: ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಅ. 1ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅದಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಮತ್ತು ಭತ್ತ ಖರೀದಿಗೆ ನಿಗದಿಯಾಗಿರುವ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರತಿ ಕ್ವಿಂಟಲ್ ರಾಗಿಗೆ ₹4,886 ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಅದಕ್ಕೆ ಅ. 1ರಿಂದ ಡಿ. 15ರವರೆಗೆ ರೈತರ ನೋಂದಣಿ ಕಾರ್ಯ ನಡೆಸಲಾಗುತ್ತದೆ’ ಎಂದರು.
‘ಭತ್ತ ಖರೀದಿಗೆ ಈಗಾಗಲೇ ನೋಂದಣಿ ಕಾರ್ಯ ಆರಂಭಗೊಂಡಿದ್ದು, ರೈತರು ಅ. 31ರವರೆಗೆ ನೋಂದಣಿ ಮಾಡಬಹುದು. ಭತ್ತ ಖರೀದಿ ಕಾರ್ಯ ನ. 1ರಿಂದ 2026ರ ಫೆ. 28ರವರೆಗೆ ಹಾಗೂ ರಾಗಿ ಖರೀದಿ ಕಾರ್ಯ ಜ. 1ರಿಂದ ಮಾರ್ಚ್ 31ರವರೆಗೆ ನಡೆಯಲಿದೆ. ಖರೀದಿ ಕೇಂದ್ರಗಳಲ್ಲಿ ದಲ್ಲಾಳಿ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು’ ಎಂದು ಸೂಚಿಸಿದರು.
‘ಖರೀದಿಯಾಗುವ ಭತ್ತ ಮತ್ತು ರಾಗಿ ದಾಸ್ತಾನನ್ನು ಗೋದಾಮುಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ರಾಗಿ ಹಾಗೂ ಭತ್ತ ನೀಡಿದ ರೈತರಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿಸಬೇಕು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಕುಡಿಯುವ ನೀರು ಹಾಗೂ ಮೂಲಸೌಲಭ್ಯ ಒದಗಿಸಬೇಕು’ ಎಂದು ಹೇಳಿದರು.
‘ರೈತರಿಂದ ರಾಗಿ ಖರೀದಿಸುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಬೇಕು. ರೈತರು ಖರೀದಿ ಕೇಂದ್ರಕ್ಕೆ ತರುವ ರಾಗಿಯನ್ನು ಗುಣಮಟ್ಟ ಪರಿವೀಕ್ಷಕರು ಸಮರ್ಪಕವಾಗಿ ಪರಿಶೀಲಿಸಿ, ರೈತರಿಂದ ಉತ್ತಮ ಗುಣಮಟ್ಟದ ರಾಗಿಯನ್ನೇ ಖರೀದಿಸಬೇಕು’ ಎಂದು ತಿಳಿಸಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಶಿಲ್ಪ ಎ.ಇ ಮಾತನಾಡಿ, ‘ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ನಿಗಮದ ವತಿಯಿಂದ ನೇಮಿಸಲಾಗುವ ಉಪ ಏಜೆನ್ಸಿಗಳಾದ ಟಿಎಪಿಸಿಎಂಎಸ್, ಪಿಎಸಿಎಸ್, ಎಫ್‌ಪಿಒಎಸ್, ಎಸ್‌ಎಚ್‌ಜಿಎಸ್‌ನಡಿ ಪ್ರತಿ ಹೋಬಳಿ ಮಟ್ಟದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ, ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು, ಕಾನೂನು ಮಾಪನಾಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು, ಎಲ್ಲಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.