
ರಾಮನಗರ: ರೈಲ್ವೆ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲದಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಇಲಾಖೆಯು ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಮಾತ್ರ ಅವಕಾಶ ನೀಡುವ ಮೂಲಕ ಕನ್ನಡಿರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ವೇದಿಕೆಯ ರಾಜ್ಯ ಉಸ್ತುವಾರಿ ಶಿವುಗೌಡ ಮಾತನಾಡಿ, ‘ರೈಲ್ವೆ ಇಲಾಖೆಯು ಉದ್ಯೋಗ ವಿಚಾರವಾಗಿ ಮೊದಲಿನಿಂದಲೂ ಕನ್ನಡಿಗರನ್ನು ವಂಚಿಸುತ್ತಾ ಬಂದಿದೆ. ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುವ ಮೂಲಕ ಉನ್ನತ ಹುದ್ದೆಗಳನ್ನು ಕನ್ನಡಿಗರಿಗೆ ತಪ್ಪಿಸುತ್ತಿದೆ’ ಎಂದರು.
‘ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕನ್ನಡಿಗರನ್ನು ಅಪಮಾನ ಮಾಡುವುದು ತಪ್ಪಿಲ್ಲ. ನಮ್ಮ ಮಾತೃಭಾಷೆಯಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯುವ ಹಕ್ಕನ್ನು ಕೇಂದ್ರ ಸರ್ಕಾರವೇ ಕಿತ್ತುಕೊಳ್ಳುತ್ತಿದೆ. ಕನ್ನಡಿಗರಾದ ವಿ. ಸೋಮಣ್ಣ ಅವರೇ ರೈಲ್ವೆ ಖಾತೆ ರಾಜ್ಯ ಸಚಿವರಾದರೂ ಈ ಅನ್ಯಾಯ ತಪ್ಪಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಬಡ್ತಿ ಪರೀಕ್ಷೆಗಳನ್ನೂ ಕನ್ನಡದಲ್ಲಿ ಬರೆಯುವ ಅವಕಾಶ ಕಿತ್ತುಕೊಳ್ಳಲಾಗಿದೆ. ಕನ್ನಡದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಸಚಿವ ಸೋಮಣ್ಣ ಅವರೇ ಆದೇಶ ಮಾಡಿದ್ದರೂ, ಇಲಾಖೆ ಕಿಮ್ಮತ್ತು ನೀಡಿಲ್ಲ. ಈ ವಿಚಾರವಾಗಿ ಸೋಮಣ್ಣ ಸೇರಿದಂತೆ ರಾಜ್ಯದ ಸಚಿವರು ಹಾಗೂ ಸಂಸದರು ದನಿ ಎತ್ತಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗಳಲ್ಲಿ ಕೇವಲ ಹಿಂದಿ ಹಾಗೂ ಇಂಗ್ಲಿಷ್‌ಗೆ ಒತ್ತು ನೀಡುವ ಮೂಲಕ, ಪ್ರಾದೇಶಿಕ ಭಾಷೆಗಳನ್ನು ಹೊಂದಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಪದೇ ಪದೇ ಹಿಂದಿ ಹೇರಿಕೆ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ಮುಖಂಡರಾದ ಕಿರಣ್ ಗೌಡ, ರಾಜು ಚನ್ನಮಾನಹಳ್ಳಿ, ಅದ್ದೂರಿ ಲಿಂಗೇಶ್, ಸಿದ್ದರಾಜು, ಸ್ವಾಮಿ, ಪ್ರಶಾಂತ್, ಮಯೂರ, ಮಧು, ಕಾರ್ತಿಕ. ಅರುಣ, ಚಂದು, ರೋಹನ್, ಶರತ್, ನಿತೀನ್, ನಂದೀಶ್, ವಿನೋದ, ಚೇತು ಸ್ವಾಮಿ, ರಮೇಶ್, ರಾಮು, ಲಕ್ಷ್ಮೀಶ್, ಸುನೀಲ್, ಬಾಬು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.