ADVERTISEMENT

ಕೇಂದ್ರ ಸರ್ಕಾರ ಸಮುದ್ರವಿದ್ದಂತೆ, ಬೇಕಾದ್ದನ್ನು ಕೇಳಿ ಪಡೆಯಬೇಕು: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:08 IST
Last Updated 27 ಡಿಸೆಂಬರ್ 2025, 5:08 IST
ಬಿಡದಿ ರೈಲು ನಿಲ್ದಾಣಕ್ಕೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ, ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರರು ಇದ್ದಾರೆ
ಬಿಡದಿ ರೈಲು ನಿಲ್ದಾಣಕ್ಕೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ, ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರರು ಇದ್ದಾರೆ   

ಬಿಡದಿ /ರಾಮನಗರ: ‘ರೈಲ್ವೆ ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಂದ್ರವು ಸಮುದ್ರವಿದ್ದಂತೆ. ಅದನ್ನು ಸುಮ್ಮನೆ ಟೀಕಿಸುವ ಬದಲು, ಅಲ್ಲಿ ಏನು ಸಿಗುತ್ತದೊ ಅದನ್ನು ಕೇಳಿ ಪಡೆಯಬೇಕು’ ಎಂದು‌ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಪಟ್ಟಣದ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ನವೀಕರಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನೆಗುದಿಗೆ ಬಿದ್ದಿರುವ ಹೆಜ್ಜಾಲ–ಚಾಮರಾಜನಗರ ರೈಲು ಮಾರ್ಗದ ಯೋಜನೆಯ ಫೈಲ್ ಕೊಡಿ ಎಂದು ನಾನು ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಕೇಳಿದರೂ ಸ್ಪಂದಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಚಾಮರಾಜನಗರದ ಹಿಂದಿನ ಸಂಸದ ಧ್ರುವ ನಾರಾಯಣ್ ಇಲಾಖೆಗೆ ಈ ಯೋಜನೆಯ ಪ್ರಸ್ತಾವ ಕಳಿಸಿದ್ದರು. ಆಗ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿದ್ದರು. ನಾನೂ ಕನಕಪುರದವನಾಗಿದ್ದು, ನನ್ನ ತಲೆ ತುಂಬಾ ಅದೇ ಇದೆ. ಯೋಜನೆ ಜಾರಿಗೆ ನಾನೀಗ ಸಿದ್ದನಿದ್ದೇನೆ. ಅದಕ್ಕೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿ’ ಎಂದರು.

ADVERTISEMENT

‘ಯೋಜನೆ ಕುರಿತು ನಾನೀಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವರಿಗೆ ಪತ್ರ ಬರೆದೆ. ಇದುವರೆಗೆ ಯಾರೂ ಸ್ಪಂದಿಸಿಲ್ಲ. ನೀವಾದರೂ ಸಿದ್ದರಾಮಯ್ಯ ಅವರಿಗೆ ಹೇಳಿ ಭೂಮಿ ಕೊಡಿಸಿ. ನಾವು ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದು ಪಕ್ಕದಲ್ಲಿದ್ದ ಶಾಸಕ ಬಾಲಕೃಷ್ಣ ಅವರತ್ತ ನೋಡಿ ಹೇಳಿದರು.

‘ಹೆಜ್ಜಾಲದಿಂದ ಚಾಮರಾಜನಗರಕ್ಕೆ 142 ಕಿ.ಮೀ. ಇದೆ. ಹೆಜ್ಜಾಲದಿಂದ ಕಗ್ಗಲೀಪುರ, ಹಾರೋಹಳ್ಳಿ, ಕನಕಪುರ, ಸಾತನೂರು, ಹಲಗೂರು, ಮಳವಳ್ಳಿ, ಕೊಳ್ಳೇಗಾಲ, ಸಂತೆಮಾರನಹಳ್ಳಿ, ಯಳಂದೂರು ಹಾಗೂ ಚಾಮರಾಜನಗರದ ನಡುವೆ ಸುಮಾರು 9 ನಿಲ್ದಾಣಗಳು ಬರಲಿವೆ’ ಎಂದು ತಿಳಿಸಿದರು.

ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ‘ನಾವು ಭೂಮಿ ಕೊಡುತ್ತೇವೆ. ಭೂ ಸ್ವಾಧೀನ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಿ’ ಎಂದು ಒತ್ತಾಯಿಸಿದರು. ಅದಕ್ಕೆ ಸೋಮಣ್ಣ, ‘ಇವೆಲ್ಲಾ ದೊಡ್ಡ ಯೋಜನೆಗಳಾಗಿದ್ದು, ಇದಕ್ಕೆ ಹಣದ ವಿಷಯವೇ ದೊಡ್ಡ ಗ್ರಹಚಾರವಾಗಿದೆ’ ಎಂದರು. ಆಗ ಬಾಲಕೃಷ್ಣ, ‘ಇದ್ಯಾವ ದೊಡ್ಡ ಯೋಜನೆ ಸರ್. ನಿಮಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧ್ಯವಾಗದು ಎಂಬುದನ್ನೆಲ್ಲಾ ಸಾಧ್ಯ ಮಾಡಿದವರು ನೀವು’ ಎಂದಾಗ, ಸಚಿವರು ನಕ್ಕು ಸುಮ್ಮನಾದರು.

‘ವಂಡರ್‌ಲಾಗೆ ಹೋಗುವ ಮಾರ್ಗದಲ್ಲಿರು ರೈಲ್ವೆ ಮೇಲ್ಸೇತುವೆ ಕಿರಿದಾಗಿದ್ದು, ಅದನ್ನು ಅಗಲ ಮಾಡಬೇಕು’ ಎಂದು ಬಾಲಕೃಷ್ಣ ಒತ್ತಾಯಿಸಿದರು. ಅದಕ್ಕೆ ಸಚಿವರು, ‘ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮೊದಲ ಭೇಟಿ: ಸೋಮಣ್ಣ ಅವರು ರೈಲ್ವೆ ಸಚಿವರಾದ ಬಳಿಕ ಮೊದಲ ಬಾರಿಗೆ ರಾಮನಗರ ಮತ್ತು ಬಿಡದಿಗೆ ಭೇಟಿ ನೀಡಿದರು. ಹಾಗಾಗಿ, ಸ್ಥಳೀಯ ಶಾಸಕರು, ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಸಚಿವರಿಗೆ ನಿಲ್ದಾಣದಲ್ಲೇ ಹಾರ ಹಾಕಿ ಬರ ಮಾಡಿಕೊಂಡರು. ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಅಭಿಮಾನ ಮೆರೆದರು.

ರೈಲಿನಲ್ಲೇ ಬಂದ ಸಚಿವ: ಬಿಡದಿ ಮತ್ತು ರಾಮನಗರ ನಿಲ್ದಾಣಗಳ ಕಾಮಗಾರಿ ವೀಕ್ಷಣೆಗಾಗಿ ಸೋಮಣ್ಣ ಅವರು, ಬೆಂಗಳೂರಿನಿಂದ ಕಾಮಗಾರಿ ಪರಿವೀಕ್ಷಣೆ ರೈಲಿನಲ್ಲಿ (ರೈಲ್ವೆ ಇನ್‌ಸ್ಪೆಕ್ಷನ್ ಕಾರ್‌) ಬಂದಿದ್ದು ವಿಶೇಷ. ರಾಜಧಾನಿಯಿಂದ ಬಿಡದಿ ಬಂದ ಅವರು, ನಿಲ್ದಾಣ ಪರಿಶೀಲನೆ ಬಳಿಕ ವಾಹನದಲ್ಲಿ ಟೊಯೊಟಾ ಕಂಪನಿಗೆ ತೆರಳಿದರು. ಬಳಿಕ ಮತ್ತೆ ನಿಲ್ದಾಣಕ್ಕೆ ಬಂದು ಮತ್ತೆ ರೈಲು ಹತ್ತಿ ರಾಮನಗರಕ್ಕೆ ಬಂದರು.

ಚನ್ನಪಟ್ಟಣ ಭೇಟಿ ರದ್ದು: ರಾಮನಗರ ಭೇಟಿ ಬಳಿಕ ಚನ್ನಪಟ್ಟಣದ ಎಲೆಕೇರಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಸೋಮಣ್ಣ ವೀಕ್ಷಿಸಬೇಕಿತ್ತು. ಆದರೆ, ಕಡೆ ಗಳಿಗೆಯಲ್ಲಿ ಭೇಟಿ ರದ್ದಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ‘ಎಲೆಕೇರಿಯ ರೈಲ್ವೆ ಮೇಲ್ಸೇತುವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಅದರ ಉದ್ಘಾಟನೆ ಯೋಜನೆಯೂ ಇತ್ತು. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಕರೆದಿಲ್ಲ ಎಂಬ ಮಾತುಗಳು ಕೇಳಿ ಬಂದವು. ಈ ವಿಷಯದಲ್ಲಿ ಗೊಂದಲ ಬೇಡವೆಂದು, ಅಲ್ಲಿನ ಭೇಟಿ ನಾನು ಮತ್ತು ಸಂಸದರು ಮುಂದೂಡಿದ್ದೇವೆ’ ಎಂದರು.

ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಶಾಸಕ ಎ. ಮಂಜುನಾಥ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ತಹಶೀಲ್ದಾರ್ ತೇಜಸ್ವಿನಿ, ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪೂರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೌಲಗಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ, ಉಪ ಮುಖ್ಯ ಯೋಜನಾಧಿಕಾರಿ (ಗತಿಶಕ್ತಿ) ಶುಭಂ ಶರ್ಮ, ಹಿರಿಯ ವಿಭಾಗೀಯ ಎಂಜಿನಿಯರ್‌ ರಾಜೀವ್ ಶರ್ಮ ಇದ್ದರು.

‘2026ರೊಳಗೆ ಬಿಡದಿ ನಿಲ್ದಾಣ ಮೇಲ್ದರ್ಜೆಗೆ’

‘ಬಿಡದಿ ನಿಲ್ದಾಣಕ್ಕೆ ಮೂಲಸೌಕರ್ಯ ಒದಗಿಸಿದಷ್ಟು ಬೆಂಗಳೂರಿಗೆ ಪ್ರಯಾಣಿಕರ ದಟ್ಟಣೆ ತಗ್ಗಲಿದೆ. ಹಾಗಾಗಿ 2026ರೊಳಗೆ ಬಿಡದಿ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು. ಇಲ್ಲಿನ ಪ್ಲಾಟ್‌ಫಾರಂ 16 ಮೀ. ವಿಸ್ತರಣೆ ಶೀಘ್ರ ಮುಗಿಯಲಿದೆ. ನಿಲ್ದಾಣಕ್ಕೆ ಮೂರ್ನಾಲ್ಕು ಸಂಪರ್ಕ ರಸ್ತೆಗಳ ಒದಗಿಸಬೇಕಿದೆ. ಆ ಕುರಿತು ನಾನು ಸಂಸದ ಡಾ. ಮಂಜುನಾಥ್ ಹಾಗೂ ಶಾಸಕ ಬಾಲಕೃಷ್ಣ ಸಂಕ್ರಾಂತಿ ಬಳಿಕ ಅಧಿಕಾರಿಗಳ ಸಭೆ ನಡೆಸಲಿದ್ದೇವೆ. ಸಂಸದ ಮನವಿ ಮೇರೆಗೆ ಬಿಡದಿ ಮತ್ತು ರಾಮನಗರದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡುವೆ. ಬೆಂಗಳೂರು ಸುತ್ತಮುತ್ತ 101 ಲೆವೆಲ್ ಕ್ರಾಸಿಂಗ್ ಸೇತುವೆಗಳ ನಿರ್ಮಾಣಕ್ಕೆ ಸರ್ವೆ ಮಾಡಿಸಿದ್ದೇನೆ. ಒಮ್ಮೆಲೆ ಕೆಲಸ ಆರಂಭಿಸುವುದಕ್ಕಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸುವೆ’ ಎಂದು ಸೋಮಣ್ಣ ಹೇಳಿದರು.

‘ರಾಮನಗರ ನಿಲ್ದಾಣ ಶೀಘ್ರ ಲೋಕಾರ್ಪಣೆ’

‘ರಾಮನಗರ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಿ ಮೇಲ್ದರ್ಜೆಗೇರಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕಾಯುವಿಕೆ ಕೊಠಡಿ ಪಾರ್ಕಿಂಗ್ ಜಾಗ ಸ್ಕೈವಾಕ್‌ ಸೇತುವೆ ಲಿಫ್ಟ್‌ ಶೌಚಾಲಯ ಪ್ಲಾಟ್‌ಫಾರಂ ಅಭಿವೃದ್ಧಿ ಸೇರಿದಂತೆ ಶೇ 90ರಷ್ಟು ಕೆಲಸಗಳು ಮುಗಿದಿದ್ದು ಒಂದೂವರೆ ತಿಂಗಳಲ್ಲಿ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುವುದು’ ಎಂದು ರೈಲ್ವೆ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ನಗರದ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು ‘ಸುಮಾರು ₹20.96 ಕೋಟಿ ವೆಚ್ಚದಲ್ಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲಾ ಕೇಂದ್ರವಾಗಿರುವ ರಾಮನಗರದಲ್ಲಿ ಜನಪ್ರತಿನಿಧಿಗಳು ಹಾಗೂ ಪ್ರಯಾಣಿಕರ ಬೇಡಿಕೆಯಂತೆ ಮೈಲಾಡುತುರೈ ಒಡೆಯರ್ ಭಾಗಮತಿ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳ ನಿಲುಗಡೆಗೆ ಕ್ರಮ ವಹಿಸಲಾಗುವುದು’ ಎಂದರು.

‘ಚನ್ನಪಟ್ಟಣ ಮತ್ತು ಬಿಡದಿ ನಿಲ್ದಾಣವನ್ನು ಸಹ ₹20 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು. ನಿಲ್ದಾಣದ ಪಕ್ಕದ ಟ್ರೂಪ್‌ಲೇನ್‌ ಪ್ರದೇಶಕ್ಕೆ ಹೋಗುವ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಿಂತು ಹೋಗಿರುವ ಕುರಿತು ಶಾಸಕರು ಮತ್ತು ಇತರರು ಗಮನಕ್ಕೆ ತಂದಿದ್ದಾರೆ. ಅದನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವೆ’ ಎಂದು ತಿಳಿಸಿದರು.

‘ಹನ್ನೊಂದು ವರ್ಷದ ಹಿಂದೆ ಶೇ 27ರಷ್ಟಿದ್ದ ರೈಲ್ವೆ ಹಳಿಗಳ ವಿದ್ಯುದೀಕರಣ ಈಗ ಶೇ 98ರಷ್ಟಾಗಿದೆ. ಕರ್ನಾಟಕದಲ್ಲಿ ಕಳೆದ 25 ವರ್ಷಗಳಿಂದ ಬಾಕಿಯಿದ್ದ ₹45 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ₹11 ಸಾವಿರ ಕೋಟಿ ಮೊತ್ತದ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆ. ಎಂದರು.

ಸಂಸದ ಡಾ. ಸಿ.ಎನ್. ಮಂಜುನಾಥ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ರಾಮನಗರ ರೈಲ್ವೆ ಸ್ಟೇಷನ್ ಮಾಸ್ಟರ್ ಕೆ.ಟಿ. ತಗಡಯ್ಯ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮುಖಂಡರಾದ ಗೌತಮ್ ಗೌಡ ಹಾಗೂ ಇತರರು ಇದ್ದರು.

ಶಾಸಕ– ನಗರಸಭೆ ಅಧ್ಯಕ್ಷ ಮಾತಿನ ಚಕಮಕಿ

ರಾಮನಗರದ ಲೂರ್ದ್ ಚರ್ಚ್ ಬಳಿ ಟ್ರೂಪ್‌ಲೇನ್ ಕಡೆಗೆ ಜನ ಹಳಿ ದಾಟಿಕೊಂಡು ಹೋಗುವ ಸ್ಥಳದ ಪರಿಶೀಲನೆಗೆ ಸಚಿವ ಸೋಮಣ್ಣ ಭೇಟಿ ನೀಡಿದಾಗ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹಾಗೂ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಚಿವರೇ ಇಬ್ಬರನ್ನೂ ಸಮಾಧಾನಪಡಿಸಿದರು. ಕೆಳ ಸೇತುವೆ ಇಲ್ಲದೆ ಜನ ಅನುಭವಿಸುತ್ತಿರುವ ಸಮಸ್ಯೆ ಕುರಿತು ವಾರ್ಡ್‌– 11ರ ಜೆಡಿಎಸ್ ಸದಸ್ಯ ಗ್ಯಾಬ್ರಿಯಲ್ ಸಚಿವರಿಗೆ ಮನವರಿಕೆ ಮಾಡಿಕೊಡಲು ಮುಂದಾದರು. ಆಗ ಶಾಸಕರು ‘ಸುಮ್ಮನೆ ನಿಂತುಕೊ. ನನಗೆಲ್ಲಾ ಗೊತ್ತು’ ಎಂದು ಏಕವಚನದಲ್ಲಿ ಹೇಳಿದರು. ಆದರೂ ಗ್ಯಾಬ್ರಿಯಲ್ ‘ಇಲ್ಲಿರುವವರೆಲ್ಲರೂ ಬಡವರು. ನಮಗೆ ಓಡಾಡಲು ಅನುಕೂಲ ಕಲ್ಪಿಸಿ’ ಎಂದರು.

ಅದಕ್ಕೆ ಶಶಿ ಸಹ ದನಿಗೂಡಿಸಿದರು. ಆಗ ಶಾಸಕರು ‘ಇವನೊಬ್ಬನೇನಾ ಬಡವ ನಡೀರಿ?’ ಎಂದು ಶಶಿ ಅವರಿಗೆ ಹೇಳಿದರು. ಆಗ ಶಶಿ ‘ಅವರ ಸಮಸ್ಯೆ ಹೇಳಿಕೊಳ್ಳಲು ಬಿಡ್ರಿ. ಅದಕ್ಕೆ ಯಾಕೆ ಹಾಗಂತಿರಿ’ ಎಂದಾಗ ಶಾಸಕ ಮತ್ತು ಶಶಿ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಸೋಮಣ್ಣರು ಜಿಲ್ಲಾಧಿಕಾರಿ ಸೇರಿದಂತೆ ಇತರರು ಇಬ್ಬರನ್ನೂ ಸಮಾಧಾನಪಡಿಸಿ ಕರೆದೊಯ್ದರು. ಕಾರಿನತ್ತ ಬಂದ ಸಚಿವರು ಶಶಿ ಹಾಗೂ ಇತರರನ್ನು ಕಾರು ಹತ್ತಿಕೊಂಡರು. ಶಾಸಕ ಹುಸೇನ್ ಅವರಿಗೂ ಬನ್ನಿ ಇದೇ ಕಾರಲ್ಲಿ ಹೋಗೋಣ ಎಂದು ಕರೆದರು. ಅದಕ್ಕೆ ಹುಸೇನ್ ನನ್ನ ಕಾರಿನಲ್ಲೇ ಬರುತ್ತೇನೆ. ನೀವು ಹೋಗಿ ಎಂದು ಕೈ ಸನ್ನೆ ಮಾಡಿದರು.

ರಾಮನಗರ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ವೀಕ್ಷಣೆ ಬಳಿಕ ರೈಲ್ವೆ ಸಚಿವ ಸೋಮಣ್ಣ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಂಸದ ಡಾ. ಸಿ.ಎನ್. ಮಂಜುನಾಥ್ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಹಾಗೂ ಇತರರು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.