ADVERTISEMENT

ಮಳೆ ಹಾನಿ: ನಿರ್ಲಕ್ಷ್ಯ ತೋರಿದರೆ ಕ್ರಮ

ಅಧಿಕಾರಿಗಳಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 4:42 IST
Last Updated 29 ಜುಲೈ 2023, 4:42 IST
ರಾಮನಗರದಲ್ಲಿ ಕಳೆದ ವರ್ಷ ಪ್ರವಾಹ ಸಂಭವಿಸಿದ್ದ ಸ್ಥಳದಲ್ಲಿರುವ ರಾಜ ಕಾಲುವೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಮನಗರದಲ್ಲಿ ಕಳೆದ ವರ್ಷ ಪ್ರವಾಹ ಸಂಭವಿಸಿದ್ದ ಸ್ಥಳದಲ್ಲಿರುವ ರಾಜ ಕಾಲುವೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ರಾಮನಗರ: ‘ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಳೆ ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸಕಲ ಸಿದ್ದತೆಗಳನ್ನು ಮಾಡಿಕೊಂಡಿರಬೇಕು. ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ವಿಷಯಗಳು, ಮುಂಗಾರು ಹಂಗಾಮಿನ ಹವಾಮಾನ ಅವಲೋಕನಾ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜೋರು ಮಳೆ ಬಂದಾಗ, ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆ ಸಂದೇಶ ನೀಡಬೇಕು. ಚರಂಡಿ ಮತ್ತು ಕಾಲುವೆಗಳನ್ನು ನೀರು ಕೊಟ್ಟಿಕೊಂಡು ಮನೆಗಳಿಗೆ ನುಗ್ಗದಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ಸಮಸ್ಯೆ ಇದ್ದರೆ, ತಕ್ಷಣ ದುರಸ್ತಿ ಕಾರ್ಯ ನಡೆಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ಖುದ್ದು ಭೇಟಿ ನೀಡಿ’: ‘ಅರ್ಕಾವತಿ ನದಿ ದಂಡೆ, ಮಂಚನಬೆಲೆ ಅಣೆಕಟ್ಟೆ ಸೇರಿದಂತೆ ಮಳೆ ಹಾನಿ ಸಂಭವನೀಯ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿರುವೆಡೆ ಕಾಳಜಿ ಕೇಂದ್ರ ತೆರೆದು ಪುನರ್‌ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಬೆಳೆ ನಷ್ಟ ಪರಿಹಾರಕ್ಕೆ ಪಲಾನುಭವಿಗಳ ಮಾಹಿತಿಯನ್ನು ಡಾಟಾ ಎಂಟ್ರಿ ಆಪರೇಟರ್‌ಗಳು ಎಚ್ಚರಿಕೆಯಿಂದ ದಾಖಲಿಸಬೇಕು. ಸಣ್ಣ ಪ್ರಮಾದ ಮಾಡಿದರೂ ಪರಿಹಾರ ಮತ್ಯಾರಿಗೊ‌ ಹೋಗುತ್ತದೆ. ಅಂತಹ ಪ್ರಮಾದಕ್ಕೆ ಕ್ರಿಮಿನಲ್ ಕೇಸ್ ದಾಖಲಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಪ್ರಮಾದವಾಗದಂತೆ ತಹಶೀಲ್ದಾರ್‌ಗಳು ಮತ್ತು ಉಪ ವಿಭಾಗಾಧಿಕಾರಿ ಎಚ್ಚರಿಕೆ ವಹಿಸಬೇಕು’ ಎಂದರು.

‘ಮಾಹಿತಿಗೆ ಸ್ವರ್ಣಮಿತ್ರ’: ‘ಹವಾಮಾನದ ಕುರಿತು ರೈತರು ಸ್ವರ್ಣಮಿತ್ರ ಸಹಾಯವಾಣಿಗೆ ಕರೆ ಮಾಡಿ ನಿಖರ ಮಾಹಿತಿ ಪಡೆಯಬಹುದು. ಈ ಕುರಿತು ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸಬೇಕು. ಸರ್ಕಾರದ ಸೌಲಭ್ಯಗಳ ಕುರಿತು ರೈತರಿಗೆ ಅರಿವು ಮೂಡಿಸಿ, ಸಕಾಲದಲ್ಲಿ ತಲುಪುವಂತೆ ಮಾಡಬೇಕು’ ಎಂದು ಹೇಳಿದರು.

‘ಮದುವೆ ನೋಂದಣಿ ಪ್ರಮಾಣಪತ್ರಕ್ಕಾಗಿ ನೋಂದಣಿ ಕಚೇರಿಗೆ ಬರಲು ಸಾಧ್ಯವಾಗದವರು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶವಿದೆ. ಈ ಬಗ್ಗೆ ಅರಿವು ಮೂಡಿಸಬೇಕು. ಆಸ್ಪತ್ರೆ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚತೆ ಕಾಪಾಡಬೇಕು. ಅಗತ್ಯ ಇರುವೆಡೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಶಾಶ್ವತ ಪರಿಹಾರ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ನೋಟಿಸ್‌ ಕೊಡಿ: ‘ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡದ ಅಧಿಕಾರಿಗಳಿಗೆ ನೋಟಿಸ್ ಕೊಡಬೇಕು’ ಎಂದು ರಶ್ಮಿ  ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದಿ ಡಿ.ಸಿ, ‘ಈ ಕುರಿತು ಎಚ್ಚರಿಕೆ ನೀಡಿ ಆಗಸ್ಟ್‌ವರೆಗೆ ಕಾಲಾವಕಾಶ ನೀಡಲಾಗಿದೆ’ ಎಂದರು.

‘ಮಳೆಯಿಂದ ಹಾನಿಗೀಡಾಗುವ ಮನೆಗಳ ವರ್ಗೀಕರಣ ಹಾಗೂ ಪರಿಹಾರಕ್ಕೆ ಅನುಸರಿಸುವ ಮಾನದಂಡಗಳ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ವರದಿ ಕೊಡಬೇಕು’ ಎಂದು ರಶ್ಮಿ ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ  ಪಂಚಾಯಿತಿ ಕಚೇರಿಗೆ ಸರ್ಕಾರ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಮಾತನಾಡಿದರು

ಸಿಬ್ಬಂದಿ ಕೊರತೆಯ ಅಳಲು

ಸಭೆಯಲ್ಲಿ ಕೆಲ ಇಲಾಖೆಗಳ ಪ್ರಗತಿ ಕುರಿತು ಮಾಹಿತಿ ಪಡೆಯುತ್ತಿದ್ದ ರಶ್ಮಿ ಅವರು ಕೆಲ ಯೋಜನೆಗಳ ಅನುಷ್ಠಾನದಲ್ಲಿ ಮಂದಗತಿಯ ಕುರಿತು ಪ್ರಶ್ನಿಸಿದರು. ಆಗ ಅಧಿಕಾರಿಗಳು ತಮ್ಮ ಇಲಾಖೆಯು ಎದುರಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯ ಬಗ್ಗೆ ಅಳಲು ತೋಡಿಕೊಂಡರು. ‘ಹಲವರು ನಿವೃತ್ತರಾಗಿದ್ದಾರೆ. ಹೊಸ ನೇಮಕಾತಿ ನಡೆಯದೆ ವರ್ಷಗಳಾಗಿವೆ. ಹಾಗಾಗಿ ತಳಮಟ್ಟದಿಂದಿಡಿದು ಮೇಲಿನ ಹಂತದವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ. ಇದೆ. ಇರುವವರನ್ನೇ ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಕೆಲ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗಿದೆ’ ಎಂದು ಪರಿಸ್ಥಿತಿ ಬಿಚ್ಚಿಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ರಶ್ಮಿ ‘ಅನ್ಯ ಕರ್ತವ್ಯದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವಾಪಾಸ್ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಮಳೆಗಾಲ ಬಂದರೂ ಕೆಲಸ ಮುಗಿಸಿಲ್ಲ’

ಬೆಳಿಗ್ಗೆ 9.30ರ ಹೊತ್ತಿಗೆ ಡಿ.ಸಿ ಕಚೇರಿಗೆ ಬಂದ ರಶ್ಮಿ ಅವರು ಅಲ್ಲಿಂದ ಜಿಲ್ಲಾಧಿಕಾರಿ ಜಿ.ಪಂ ಸಿಇಒ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ರಾಮನಗರದಲ್ಲಿ ಕಳೆದ ವರ್ಷ ಪ್ರವಾಹಕ್ಕೀಡಾಗಿದ್ದ ಭಕ್ಷೀಕೆರೆ ಮತ್ತು ಗೌಸಿಯಾ ನಗರ ಬಳಿ ಇರುವ ರಾಜಕಾಲುವೆ ಪ್ರದೇಶಕ್ಕೆ ರಶ್ಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲುವೆಯ ಹೂಳು ತೆರವು ಸೇರಿದಂತೆ ಇನ್ನಿತರ ದುರಸ್ತಿ ಕಾರ್ಯವನ್ನು ಸರಿಯಾಗಿ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ‘ಮಳೆಗಾಲ ಬಂದರೂ ಇನ್ನು ಕಾಮಗಾರಿ ಮಾಡುತ್ತಿದ್ದೀರಲ್ಲಾ? ಯಾವಾಗ ಮುಗಿಸುತ್ತೀರಿ? ಮತ್ತೇನಾದರೂ ಸಮಸ್ಯೆಯಾದರೆ ಯಾರು ಹೊಣೆ?. ಆದಷ್ಟು ಬೇಗ ಕೆಲಸ ಮುಗಿಸಿ’ ಎಂದು ಸೂಚಿಸಿದರು.

ಶಾಲೆ ಗ್ರಾಮ ಒನ್‌ ಪಂಚಾಯಿತಿಗೆ ಭೇಟಿ

ಸಭೆ ಬಳಿಕ ರಶ್ಮಿ ಅವರು ತಾಲ್ಲೂಕಿನ ಮಾಯಗಾನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಲಿಕಾ ವಾತಾವರಣದ ಕುರಿತು ಮಾಹಿತಿ ಪಡೆದರು. ನಂತರ ಮಂಚನಾಯಕನಹಳ್ಳಿ ಗ್ರಾಮ ಒನ್ ಕೇಂದ್ರ ಹಾಗೂ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದರು. ಗೃಹ ಲಕ್ಷ್ಮಿ ನೋಂದಣಿ ಪ್ರಕ್ರಿಯೆ ಹಾಗೂ ಪಂಚಾಯಿತಿ ಸಿಬ್ಭಂದಿ ಕಾರ್ಯವೈಖರಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಜಿ. ಪಂ. ಸಿಇಒ ಹಾಗೂ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.