ADVERTISEMENT

ರಾಮನಗರ | ಮುಂದುವರಿದ ಮಳೆ; ತಗ್ಗಿದ ಅರ್ಕಾವತಿ ಹರಿವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:30 IST
Last Updated 24 ಅಕ್ಟೋಬರ್ 2024, 6:30 IST
ರಾಮನಗರದಲ್ಲಿ ಅರ್ಕಾವತಿ ನದಿಯ ಹರಿವು ಬುಧವಾರ ಸ್ವಲ್ಪ ಇಳಿಕೆಯಾಗಿದ್ದು ಕಂಡುಬಂತು
ರಾಮನಗರದಲ್ಲಿ ಅರ್ಕಾವತಿ ನದಿಯ ಹರಿವು ಬುಧವಾರ ಸ್ವಲ್ಪ ಇಳಿಕೆಯಾಗಿದ್ದು ಕಂಡುಬಂತು   

ರಾಮನಗರ: ಜಿಲ್ಲೆಯ ರಾಮನಗರ ಮತ್ತು ಮಾಗಡಿಯಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಸಂಜೆ ಹಾಗೂ ರಾತ್ರಿ ಆಗಾಗ ಮಳೆಯಾಗಿದೆ. ಹಿಂದಿನ ಮೂರ್ನಾಲ್ಕು ದಿನಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿದೆ. ಮಂಚನಬೆಲೆ ಜಲಾಶಯದಿಂದ ಬಿಡುಗಡೆಯಾಗುತ್ತಿದ್ದ ನೀರಿನ ಪ್ರಮಾಣ ಸ್ವಲ್ಪ ಇಳಿಕೆಯಾಗಿದ್ದು, ಮಾಗಡಿ ಮತ್ತು ರಾಮನಗರ ತಾಲ್ಲೂಕಿನಲ್ಲಿ ನದಿ ನೀರಿನ ಮಟ್ಟ ಕೊಂಚ ತಗ್ಗಿದೆ.

ಅರ್ಕಾವತಿ ನದಿಯ ಅಬ್ಬರದಿಂದಾಗಿ ಮುಳುಗಡೆಯಾಗಿದ್ದ ಸೇತುವೆಗಳು ಬುಧವಾರ ಕೆಲವೆಡೆ ಸಂಚಾರಕ್ಕೆ ಮುಕ್ತವಾಗಿವೆ. ನೀರಿನ ಮಟ್ಟ ಹೆಚ್ಚಾಗಿ ಜಲಾವೃತಗೊಂಡಿದ್ದ ಅರ್ಕಾವತಿ ನದಿಯಂಚಿನ ಜಮೀನುಗಳಲ್ಲಿ ನೀರು ಇಳಿಕೆಯಾಗಿದೆ. ಜಮೀನಿಗೆ ಹೋಗಲು ರೈತರು ನಿರ್ಮಿಸಿಕೊಂಡಿದ್ದ ಒಡ್ಡುಗಳು ಕೊಚ್ಚಿ ಹೋಗಿರುವುದರಿಂದ ಸುತ್ತಿ ಬಳಸಿ ಜಮೀನಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮಳೆಯಿಂದಾಗಿ ರಾಮನಗರದಲ್ಲಿ ಗುಂಡಿಬಿದ್ದು ಹದಗೆಟ್ಟಿರುವ ರಸ್ತೆಗಳಲ್ಲಿ ಮಳೆ ನೀರು ನಿಂತಿತು. ಕೆಲವೆಡೆ ಕೆಸರಿನ ರಾಡಿಯಾಗಿದ್ದರಿಂದ ವಾಹನಗಳ ಸವಾರರು ಮತ್ತು ಪಾದಚಾರಿಗಳು ಪರದಾಡಿದರು. ಮುಖ್ಯರಸ್ತೆ, ಮಂಡಿಪೇಟೆ, ರೈಲು ನಿಲ್ದಾಣ ರಸ್ತೆ, ರೈಲ್ವೆ ಕೆಳ ಸೇತುವೆ, ಬಾಲಗೇರಿ, ವಿನಾಯಕ ನಗರ, ಎಂ.ಎಚ್. ಕಾಲೇಜು ರಸ್ತೆ ಸೇರಿದಂತೆ ಹಲವೆಡೆ ಗುಂಡಿ ರಸ್ತೆಗಳು ಮಳೆ ನೀರಿನ ತಾಣಗಳಾದವು.

ADVERTISEMENT

ಹದಗೆಟ್ಟ ರಸ್ತೆಗಳಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ರಸ್ತೆ ಬದಿಯ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಹೋದರು. ಮಳೆ ಇಲ್ಲದೆ ಮೂಲೆ ಸೇರಿದ್ದ ಛತ್ರಿಗಳನ್ನಿಡಿದು ಓಡಾಡುತ್ತಿದ್ದ ಜನರು ಅಲ್ಲಲ್ಲಿ ಕಂಡುಬಂದರು.

ಮಳೆಯಿಂದಾಗಿ ರಾಮನಗರ ವಿವೇಕಾನಂದನಗರದ ಶಾಂತಿನಿಕೇತನ ಶಾಲೆ ರಸ್ತೆಯ ಗುಂಡಿಯಲ್ಲಿ ನಿಂತಿರುವ ನೀರು
ಸತತ ಮಳೆಗೆ ರಾಮನಗರದ ವಿವೇಕಾನಂದನಗರ ಮುಖ್ಯರಸ್ತೆಯಲ್ಲಿ ಬಾಯ್ದೆರೆದಿರುವ ಗುಂಡಿ
ಮಳೆಯಿಂದಾಗಿ ರಾಮನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿರುವ ಗುಂಡಿಯಲ್ಲಿ ನೀರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.