
ರಾಮನಗರ: ವನ್ಯಜೀವಿ ಹಾವಳಿಗೆ ತಡೆ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಬಗರ್‌ಹುಕುಂ ಸಾಗುವಳಿದಾರರರನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸುವುದು, ಡಿ.ಸಿ ಕಚೇರಿ ಬಳಿ ನಿಷೇಧಾಜ್ಞೆ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರೈತ ಸಂಘವು ವಿವಿಧ ಸಂಘ–ಸಂಘಟನೆಗಳೊಂದಿಗೆ ಅ. 11ರಂದು ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಈ ಕುರಿತು ನಗರದ ರೈತ ಭವನದಲ್ಲಿ ಮಂಗಳವಾರ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ, ‘ನಾಡಹಬ್ಬ ದಸರಾದ ವಿಜಯದಶಮಿ ದಿನದಂದು ರೈತ ಸಂಘವು ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಮನಗರದ ಐಜೂರು ವೃತ್ತದಲ್ಲಿ ರಸ್ತೆ ತಡೆ ನಡೆಸಲಿದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ನಾವು ನಡೆಸಿರುವ ಧರಣಿ ಹಾಗೂ ಮನವಿಗೆ ಅಧಿಕಾರಿಗಳು ಹಾಗೂ ಸಚಿವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.
‘ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿವಿಗೊಡದವರ ಗಮನ ಸೆಳೆಯುವುದಕ್ಕಾಗಿ, ರೈತ ಸಂಘದ ಮೇರು ನಾಯಕ ನಂಜುಂಡಸ್ವಾಮಿ ಅವರು ನಾಡಹಬ್ಬ ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಸಂಬಂಧಪಟ್ಟವರು ರೈತರ ಅಳಲು ಕೇಳುತ್ತಿದ್ದರು. ರೈತ ವಿರೋಧಿಯಾಗಿರುವ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಇದೀಗ, ನಾವು ಸಹ ಅದೇ ಮಾರ್ಗ ಅನುಸರಿಸುತ್ತಿದ್ದೇವೆ’ ಎಂದರು.
ಕಪ್ಪು ಬಾವುಟ ಪ್ರದರ್ಶನ: ಜಯ ಕರ್ನಾಟಕ ಜನಪರ ಸಂಘಟನೆಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ‘ಕಳೆದ ತಿಂಗಳು ಡಿ.ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದರು. ಬಳಿಕ ನಾವು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಎರಡು ವಾರದೊಳಗೆ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ನೀಡಿದ್ದ ಭರವಸೆ ಸುಳ್ಳಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ತಿಂಗಳಾದರೂ ಸಚಿವರು ಕೊಟ್ಟ ಮಾತಿನಂತೆ ಸಭೆ ನಡೆದಿಲ್ಲ ಮತ್ತು ನಿಷೇಧಾಜ್ಞೆ ಹಿಂಪಡೆದಿಲ್ಲ. ಜಿಲ್ಲೆ ಹಾಗೂ ಇಲ್ಲಿನ ರೈತರ ಬಗ್ಗೆ ಸಚಿವರಿಗೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಅವರ ಹುಸಿ ಭರವಸೆಯೇ ಸಾಕ್ಷಿ. ಕಾಟಾಚಾರಕ್ಕೆ ಉಸ್ತುವಾರಿ ಸಚಿವರಾಗಿರುವ ಅವರು, ಇನ್ನು ಮುಂದೆ ಜಿಲ್ಲೆಗೆ ಭೇಟಿ ನೀಡದಾಗಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸಲಾಗುವುದು’ ಎಂದು ಹೇಳಿದರು.
ಸಂಘದ ಯುವ ಘಟಕದ ಸಂಚಾಲಕ ಚೀಲೂರು ಮುನಿರಾಜು, ‘ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದೆ ರಾಜ್ಯಮಟ್ಟದ ಹೋರಾಟವನ್ನು ಡಿ.ಸಿ ಕಚೇರಿ ಎದುರೇ ಹಮ್ಮಿಕೊಳ್ಳಲಾಗುವುದು. ವಿವಿಧ ಜಿಲ್ಲೆಗಳಿಂದ ರೈತ ಸಂಘದವರು ಇಲ್ಲಿಗೆ ಬರಲಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯಪರವಾಗಿ ಹೋರಾಡುವ ಎಲ್ಲಾ ಸಂಘಟನೆಗಳು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ಪ್ರಶಾಂತ್, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ಶಿಲ್ಪಾ, ರಾಮೇಗೌಡ, ನಾಗರಾಜು, ಲೋಕೇಶ್, ಶಿವಣ್ಣ, ಸಿದ್ದರಾಜು, ಕೋದಂಡರಾಮ, ಕೃಷ್ಣಯ್ಯ ಹಾಗೂ ಇತರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.