
ರಾಮನಗರ: ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ರಚಿಸಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲ್ಲೂಕು ಮಟ್ಟದ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾಮಟ್ಟದ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಜಿ ಶಾಸಕ ಕೆ. ರಾಜು ಅವರನ್ನು ನೇಮಿಸಲಾಗಿದೆ. ಉಪಾಧ್ಯಕ್ಷರಾಗಿ ಕೆ.ಎಂ. ಮಹದೇಶ್, ಎಚ್.ಸಿ. ಶೇಖರ್, ಶಿವಪ್ರಸಾದ್, ಸಿದ್ದೇಗೌಡ ಹಾಗೂ ಶಂಕರ್ ನೇಮಕವಾಗಿದ್ದಾರೆ.
ರಾಮನಗರ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ವಿ.ಎಚ್. ರಾಜು, ಮಾಗಡಿ ಅಧ್ಯಕ್ಷರಾಗಿ ಕೆ.ಆರ್. ಶಿವಣ್ಣ, ಚನ್ನಪಟ್ಟಣ ಅಧ್ಯಕ್ಷರಾಗಿ ರಂಗನಾಥ ಹೊಂಗನೂರು, ಕನಕಪುರಕ್ಕೆ ಕೆ.ಎನ್. ದಿಲೀಪ್ ಹಾಗೂ ಹಾರೋಹಳ್ಳಿಗೆ ಕೆ.ಟಿ. ಶಿವಮಾದಯ್ಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಶೋಭಾ, ಕಾಳಮ್ಮ, ಸ್ವಾಮಿ ಆರ್, ರಮೇಶ, ವನಜಾ, ಜಯಣ್ಣ, ಧನಲಕ್ಷ್ಮಿ, ಮುರುಳಿ ಎಸ್.ಬಿ ಹಾಗೂ ಚಿಕ್ಕಣ್ಣ ಸದಸ್ಯರಾಗಿದ್ದಾರೆ.
ತಾಲ್ಲೂಕು ಸಮಿತಿ ಅಧ್ಯಕ್ಷರು ಸಹ ಜಿಲ್ಲಾ ಪ್ರಾಧಿಕಾರದ ಸದಸ್ಯರಾಗಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಇವರ ಅಧಿಕಾರಾವಧಿ ಎರಡು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಕಾರ್ಯದರ್ಶಿ ಡಾ. ಪ್ರಕಾಶ್ ಜಿ.ಸಿ ಆದೇಶದಲ್ಲಿ ತಿಳಿಸಿದ್ದಾರೆ.
‘ಗ್ಯಾರಂಟಿಯಲ್ಲೂ ಅನ್ಯಾಯ’
‘ಈಗಾಗಲೇ ಐದು ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯಂತೆ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದಲ್ಲೂ ದಲಿತ ಹಿಂದುಳಿದ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯತೆ ಕೊಟ್ಟಿಲ್ಲ. ಇಲ್ಲೂ ಒಕ್ಕಲಿಗರನ್ನೇ ನೇಮಿಸಿರುವ ಪಕ್ಷದ ನಾಯಕರು ಎಲ್ಲಾ ವರ್ಗಗಳಿಗೂ ಅಧಿಕಾರ ಹಂಚಬೇಕೆಂಬ ಸಾಮಾಜಿಕ ನ್ಯಾಯದ ತತ್ವವನ್ನು ಗಾಳಿಗೆ ತೂರಿದ್ದಾರೆ. ಈ ತಾರತಮ್ಯವು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ಬೇಸರ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.