ADVERTISEMENT

 ರಾಮನಗರ: ವಿವಿಧೆಡೆ ಸಂಭ್ರಮದ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:00 IST
Last Updated 1 ನವೆಂಬರ್ 2019, 15:00 IST
ಎರಡು ಕೆಎಸ್‌ಆರ್‌ಟಿಸಿ ಬಸ್‌ಗೆ ಶುಕ್ರವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಎರಡು ಕೆಎಸ್‌ಆರ್‌ಟಿಸಿ ಬಸ್‌ಗೆ ಶುಕ್ರವಾರ ವಿಶೇಷ ಅಲಂಕಾರ ಮಾಡಲಾಗಿತ್ತು   

ರಾಮನಗರ: 64ನೇ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.

ಶಾಲೆ–ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮಗಳು ನಡೆದವು. ಸರ್ಕಾರಿ ಕಚೇರಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಆಟೊ ನಿಲ್ದಾಣಗಳಲ್ಲೂ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.

ನಗರದಲ್ಲಿ ಇರುವ ಕೆಎಸ್ಆರ್‌ಟಿಸಿ ಬಸ್ ಘಟಕದ ಸಿಬ್ಬಂದಿ ತಾವು ಪ್ರತಿನಿತ್ಯ ಕರ್ತವ್ಯ ನಿರ್ವಹಿಸುವ ವಾಹನಗಳನ್ನು ಸಿಂಗರಿಸಿ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.

ADVERTISEMENT

ರಾಮನಗರ-ರಿಂದ ಎರೇಹಳ್ಳಿ-, ಮಾಗಡಿ ಮಾರ್ಗದಲ್ಲಿ ಸಂಚರಿಸುವ ಎರಡು ಬಸ್‍ ಗಳನ್ನು ಚಾಲಕ ಮತ್ತು ನಿರ್ವಾಹಕರು ತಮ್ಮ ಸ್ವಂತ ಖರ್ಚಿನಲ್ಲಿ ಹೂವುಗಳಿಂದ ಅಲಂಕರಿಸಿ, ಧ್ವನಿವರ್ಧಕ ಅಳವಡಿಸಿ, ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪ್ರಯಾಣಿಕರಿಗೆ ಸಿಹಿ ಹಂಚಿದರು.

ಸಾರಿಗೆ ಸಂಸ್ಥೆಯ ಬಸ್‍ ಗಳಲ್ಲಿ ಬಹುತೇಕ ಶಾಲಾಕಾಲೇಜು ವಿದ್ಯಾರ್ಥಿಗಳು ಸಂಚರಿಸುವುದರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ದೃಷ್ಟಿಯಿಂದ ವಾಹನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು, ಐತಿಹಾಸಿಕ ಸ್ಥಳಗಳ ಮತ್ತು ಕನ್ನಡ ನಾಡು-ನುಡಿಗಾಗಿ ಹೋರಾಡಿ ವೀರಮರಣ ಅಪ್ಪಿದ ಪುಣ್ಯ ಪುರುಷರ ಚಿತ್ರಗಳನ್ನು ಹಾಕುವ ಮೂಲಕ ಕನ್ನಡ ನಾಡಿನ ಮಹನೀಯರ ನೆನಪು ಮಾಡುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಕನ್ನಡದ ಕಂಪನ್ನು ಜನರಿಗೆ ತಿಳಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ಬಸ್ಸಿನ ನಿರ್ವಾಹಕರಾದ ಜೆ.ರವಿ ಮತ್ತು ನಾಗರಾಜು ತಿಳಿಸಿದರು.

ಬಸ್ಸಿನ ಚಾಲಕರಾದ ಶರಣಪ್ಪ ಕಲ್ಗುಡಿ, ಗಿರೀಶ್, ನಿರ್ವಾಹಕರಾದ ಜೆ.ರವಿ, ನಾಗರಾಜು ವಿಶಿಷ್ಟ ರೀತಿಯ ಆಚರಣೆ ಪ್ರಯಾಣಿಕರ ಮತ್ತು ಸಂಸ್ಥೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಜಿಎಸ್ ಅಂಧರ ಶಾಲೆ: ಇಲ್ಲಿನ ಬಿಜಿಎಸ್ ಅಂಧರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ಶಾಲೆಯ ಮುಖ್ಯಶಿಕ್ಷಕ ಪಿ. ಶಿವರಾಮಯ್ಯ, ಮುಖಂಡರಾದ ಸುಪ್ರಿಯಾ ಕುಮಾರ್, ಸುರೇಶ್ ಇದ್ದರು.

ಪಟೇಲ್ ಶಾಲೆ: ಪಟೇಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು, ಶಾಲೆಯ ಮುಖ್ಯಶಿಕ್ಷಕ ಜಿ.ಆರ್. ವಿನೋದ್, ಬಿ.ಸಿ. ರತ್ನ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ನೇತಾಜಿ ಪಾಪ್ಯುಲರ್ ಶಾಲೆ : ಇಲ್ಲಿನ ನೇತಾಜಿ ಪಾಪ್ಯುಲರ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲೆಯ ಮಾರ್ಗದರ್ಶಕ ರಾಜಶೇಖರಯ್ಯ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ದೈಹಿಕ ಶಿಕ್ಷಕ ಚಾಮಶೆಟ್ಟಿ, ಭಂಡಾರಿ, ಶಿಕ್ಷಕರಾದ ಶೋಭ, ಬಸವರಾಜು, ಆಶಾ, ಗಂಗರತ್ನ, ಪವಿತ್ರ, ಶಾಲೆಯ ಕಾರ್ಯದರ್ಶಿಗಳಾದ ವಸಂತವೀರೇಗೌಡ, ವಿ. ನವೀನ್, ವಿ. ಪ್ರವೀಣ್ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಎಂ.ಎಚ್.ಸಮೂಹ ಶಿಕ್ಷಣ ಸಂಸ್ಥೆಗಳು: ಇಲ್ಲಿನ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಎಚ್. ಚಂದ್ರಶೇಖರ್, ನಿರ್ದೇಶಕಿ ಎಚ್.ಸಿ. ಅಮಿತಾ, ಪ್ರಾಚಾರ್ಯರಾದ ಎಚ್.ಆರ್. ಕುಮಾರಸ್ವಾಮಿ, ಅಂಬಿಕಾ, ಬಿ.ಕೆ. ಪುಟ್ಟಸ್ವಾಮಿಗೌಡ, ಕೆ.ಎಂ. ಗಂಗರಾಜ, ಪಿಂಟೂ ಇದ್ದರು. ಪ್ರಶಿಕ್ಷಣಾರ್ಥಿ ಶ್ವೇತಾಕುಮಾರಿ ಸ್ವಾಗತಿಸಿದರು. ಎಸ್. ಪ್ರಮೀಳಾ ಅತಿಥಿಗಳನ್ನು ಪರಿಚಯಿಸಿದರು. ಕೆ.ಎನ್. ಗೀತಾ ವಂದಿಸಿದರು. ವಿದ್ಯಾರ್ತಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಹೋಲಿ ಕ್ರೆಸೆಂಟ್ ಶಾಲೆ: ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಅಲ್ತಾಫ್ ಅಹಮದ್, ಎಂ.ಕೆ. ವಾಣಿ, ಡಾ. ಶಾಜಿಯಾ, ಡಾ. ಬಿ.ಎಲ್. ಸೌಮ್ಯ, ಆರ್.ಸಿ. ಬೀರೇಂದ್ರ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.