
ಕನಕಪುರ: ಕನ್ನಡ ನಾಡು, ನುಡಿ ಅಭಿವೃದ್ಧಿಗಾಗಿ ಶ್ರಮಿಸುವವರನ್ನು ಕನ್ನಡ ಭಾಷೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಆದರೆ, ರಾಜ್ಯ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡುವ ಮೂಲಕ ಪ್ರಶಸ್ತಿಗೆ ಅವಮಾನ ಮಾಡಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು.
ಇಲ್ಲಿನ ರೋಟರಿ ಭವನದಲ್ಲಿ ಕಿಡ್ಸ್ ಕ್ಯೂಬ್ ಇಂಟರ್ ನ್ಯಾಷನಲ್ ಪ್ರಿ ಸ್ಕೂಲ್ ವತಿಯಿಂದ ಸೋಮವಾರ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷಾ ಪರಂಪರೆಯಲ್ಲೇ ವೈಜ್ಞಾನಿಕವಾಗಿ ಪರಿಪೂರ್ಣ ಭಾಷೆಯಂದೇ ಖ್ಯಾತಿ ಗಳಿಸಿದೆ. ಕನ್ನಡವು ಗಳಿಸಿದಷ್ಟು ಜ್ಞಾನಪೀಠ ಪ್ರಶಸ್ತಿ ಯಾವ ಭಾಷೆಯೂ ಗಳಿಸಿಲ್ಲ. ಈ ಕಾರಣದಿಂದಲೇ ಉತ್ತರ ಭಾರತೀಯರು ಕನ್ನಡವನ್ನು ನಾಶಪಡಿಸಲು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ದೂರಿದರು.
ಕನ್ನಡ ಪರ ಹೋರಾಟಗಾರರ ಸ್ವಾಭಿಮಾನ ಹೋರಾಟದಿಂದ ಈ ಹಾವಳಿ ತಡೆಯಲು ಸಾಧ್ಯವಾಗುತ್ತಿದೆ. ಇತ್ತ ಹೊಣೆಗೇಡಿ ಸರ್ಕಾರ ಇತರ ಭಾಷೆಗಳಿಗೆ ಅನುದಾನ ಹೆಚ್ಚಳ ನೀಡಿ ಕನ್ನಡ ಭಾಷೆಯನ್ನೇ ಕಡೆಗಣಿಸುತ್ತಿದೆ ಬೇಸರ ವ್ಯಕ್ತಪಡಿಸಿದರು.
ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ಅರ್ಹರಿಗೆ ನೀಡಬೇಕು. ಅನರ್ಹರು, ರಾಜಕೀಯ ಹಿಂಬಾಲಕರಿಗೆ ನೀಡುವ ಮೂಲಕ ಕನ್ನಡದ ಮಾನ ಹರಾಜು ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಈ ಬಾರಿ ಅಂತಹ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ರಾಜಕೀಯ ಹಿಂಬಾಲಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಜಿಲ್ಲೆಗೆ ಎಸಗಿರುವ ಮಹಾದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಲವಂತ ಸಿದ್ದಪ್ಪ ಮೋರಟಗಿ ಮಾತನಾಡಿ, ಕನ್ನಡ ನಾಡಿನ ಇತಿಹಾಸದ ಬಗ್ಗೆ ಮಾತನಾಡಿದರು.
ಶಾಲಾ ಮಕ್ಕಳು ಮನ ಮೋಹಕ ನೃತ್ಯ ಮಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮಕ್ಕಳಿಂದ ವಸ್ತು ಪ್ರದರ್ಶನ ಆಯೋಜಿಸಿಲಾಗಿತ್ತು.
ಕಿಡ್ಸ್ ಶಾಲಾ ಸಂಸ್ಥಪಕ ಗಿರೀಶ್, ಮಲೆ ಮಹದೇಶ್ವರ ಟ್ರಸ್ಟಿಗಳಾದ ಮಾದೇಗೌಡ, ರತ್ನಮ್ಮ, ಶಾಲಾ ಪ್ರಾಂಶುಪಾಲ ಮೇಘ ಗಿರೀಶ್, ಸಾಹಿತಿ ಕೂಗಿ ಗಿರಿಯಪ್ಪ, ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.