ಮಾಗಡಿ ತಾಲ್ಲೂಕಿನ ಬಸವನಪಾಳ್ಯದ ಗ್ರಾಮದಲ್ಲಿ ಕಾಫಿ, ಕಾಳು ಮೆಣಸು, ಏಲಕ್ಕಿ, ಬಾಳೆ, ಅಡಿಕೆ ಬೆಳೆದಿರುವ ತಮ್ಮ ತೋಟದಲ್ಲಿ ಬಿ.ಆರ್.ಸಿದ್ದರಾಜು
ಮಾಗಡಿ: ಮಲೆನಾಡಿನಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳನ್ನು ಬಯಲುಸೀಮೆಯಲ್ಲೂ ಬೆಳೆದು ಆದಾಯ ಪಡೆಯುತ್ತಿರುವ ರೈತರೊಬ್ಬರ ಯಶೋಗಾಥೆ ಇದು.
ತಾಲ್ಲೂಕಿನ ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಪಾಳ್ಯದ ಬಿ.ಆರ್.ಸಿದ್ದರಾಜು ಮಲೆನಾಡಿನ ಬೆಳೆಗಳನ್ನು ತೋಟದಲ್ಲಿ ಬೆಳೆಯುತ್ತಿದ್ದಾರೆ.
ನೀರಾವರಿ ಅಳವಡಿಸಿಕೊಂಡಿರುವ ಅವರು ಪರ್ಯಾಯ/ಮಿಶ್ರ ಬೇಸಾಯ ಪದ್ಧತಿಯಲ್ಲಿ ರಾಗಿ, ತೆಂಗು, ಕಬ್ಬು, ಅವರೆಕಾಯಿ, ತೊಗರಿ ಜೊತೆ ಮಲೆನಾಡಿನಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳನ್ನೂ ಬೆಳೆಯುತ್ತಿದ್ದಾರೆ. ಒಂದೇ ವರ್ಷದಲ್ಲಿ ನಾನಾ ಬೆಳೆ ಬೆಳೆಯುವ ಮೂಲಕ ಕೈತುಂಬಾ ಹಣ ಗಳಿಸುತ್ತಿದ್ದಾರೆ.
ಮಿಶ್ರ ಬೇಸಾಯದಲ್ಲಿ ಆದಾಯ: ವರ್ಷಕ್ಕೆ ಒಂದು ಬೆಳೆ ಬೆಳೆದರೆ ರೈತರು ಹೆಚ್ಚಿನ ಆದಾಯಗಳಿಸಲು ಸಾಧ್ಯವಿಲ್ಲ. ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ತಿಂಗಳಿಗೊಮ್ಮೆ ಹಣ ಗಳಿಸುವ ಮಾರ್ಗ ಕಂಡುಕೊಳ್ಳಬಹುದು ಎಂಬುದು ಸಿದ್ದರಾಜು ಅಭಿಪ್ರಾಯ.
ಎಂಟು ಎಕರೆ ಜಮೀನ ಪೈಕಿ ಮನೆ ಹತ್ತಿರದ ಒಂದು ಎಕರೆಯಲ್ಲಿ ಅಡಿಕೆ, ಬಾಳೆ, ಏಲಕ್ಕಿ, ಜಾಕಾಯಿ, ಕಾಳು ಮೆಣಸು, ತೆಂಗು, ಮೆಕಡೋಮಿಯಾ(ಡ್ರೈ ಫ್ರೂಟ್ಸ್) ಇಂಗು, ಚಕ್ಕೆ ಬೆಳೆದಿದ್ದಾರೆ.
ಈಗ ಎರಡು ಎಕರೆಯಲ್ಲಿ ಒಂದು ಸಾವಿರ ಕಾಫಿ, ಏಲಕ್ಕಿ, ಕಾಳು ಮೆಣಸು, ಹಲಸು, ಪಪ್ಪಾಯಿ, ನೇರಳೆ ಗಿಡ ಬೆಳೆದಿದ್ದಾರೆ. ಕಾಫಿಯಲ್ಲೂ ಕೂಡ ಹೆಚ್ಚಿನ ಆದಾಯಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಇನ್ನುಳಿದ ಎರಡು ಎಕರೆಯಲ್ಲಿ 500 ಮಾವಿನ ಮರ ಬೆಳೆದಿದ್ದಾರೆ. ಯಾವುದೇ ರಾಸಾಯನಿಕ ಸಿಂಪಡಿಸದೆ ನೈಸರ್ಗಿಕವಾಗಿ ಮಾವನ್ನು ಹಣ್ಣು ಮಾಡುತ್ತಿದ್ದಾರೆ. ಮಾವು ಮಾರಾಟಕ್ಕೆ ಆನ್‌ಲೈನ್ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಆನ್‌ಲೈನ್ ಮೂಲಕ ಗ್ರಾಹಕರಿಗೆ ನೇರವಾಗಿ ಮಾವು ತಲುಪಿಸುತ್ತಾರೆ.
ಎಮಟು ಎಕರೆಯಲ್ಲಿ ಸಮಗ್ರ ಬೇಸಾಯದ ಮೂಲಕ ವರ್ಷಕ್ಕೆ ಕನಿಷ್ಠ ₹35 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ. ಇದರಲ್ಲಿ ಶೇ 60ರಷ್ಟು ಬೇಸಾಯಕ್ಕೆ ಖರ್ಚು ಮಾಡಿದರೆ ಇನ್ನುಳಿದ್ದ 40ರಷ್ಟು ಹಣ ಲಾಭ ಪಡೆಯುತ್ತಿದ್ದಾರೆ.
ರೈತರು ಒಂದು ಮತ್ತು ಎರಡು ಬೆಳೆಗಳಿಗೆ ಸೀಮಿತರಾಗುವ ಬದಲು ಒಂದೇ ಜಾಗದಲ್ಲಿ ನಾಲ್ಕರಿಂದ ಐದು ಬೆಳೆ ಬೆಳೆಯುವ ಮೂಲಕ ಕೈತುಂಬಾ ಹಣ ಗಳಿಸಬಹುದು ಎನ್ನುತ್ತಾರೆ.
ಸರ್ಕಾರದ ನೀತಿ ಸರಿ ಇಲ್ಲ ಸರ್ಕಾರ ಬೆಳೆ ನೀತಿ ರೂಪಿಸುವ ಜತೆಗೆ ಬೆಂಬಲ ಬೆಲೆ ಷೋಷಣೆ ಮಾಡಬೇಕು. ಆಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿ ಹೆಚ್ಚಿನ ಲಾಭ ಗಳಿಸಬಹುದು. ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿ ರೈತ ಪರ ನಿಂತರೆ ರೈತರಿಗೆ ನಷ್ಟ ಉಂಟಾಗುವುದಿಲ್ಲಬಿ.ಆರ್.ಸಿದ್ದರಾಜು, ಪ್ರಗತಿಪರ ರೈತ, ಬಸವನಪಾಳ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.