ADVERTISEMENT

ಹಾರೋಹಳ್ಳಿ: ಬನ್ನಿಕುಪ್ಪೆ ಕೆರೆಯಲ್ಲಿ ಆಕ್ರಮ ಮಣ್ಣು ಸಾಗಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 4:47 IST
Last Updated 28 ಮಾರ್ಚ್ 2024, 4:47 IST
ಹಾರೋಹಳ್ಳಿ ತಾಲೂಕಿನ ಬನ್ನಿಕುಪ್ಪೆ ಹೊಸ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವುದು
ಹಾರೋಹಳ್ಳಿ ತಾಲೂಕಿನ ಬನ್ನಿಕುಪ್ಪೆ ಹೊಸ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವುದು   

ಹಾರೋಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆ ಹೊಸಕೆರೆಯಲ್ಲಿ ಆಕ್ರಮವಾಗಿ ತಗೆದು ಮಣ್ಣು ಸಾಗಣೆ ಮಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿಯಮ ಮೀರಿ ಅಕ್ರಮವಾಗಿ ನೂರಾರು ಲೋಡ್‌ ಮಣ್ಣನ್ನು ಹಾಡುಹಗಲೇ ಇಲಾಖೆ ಅಧಿಕಾರಿಗಳ ಮತ್ತು ಪೊಲೀಸರ ಭಯವಿಲ್ಲದೆ ಬೃಹತ್ ನಿರ್ಮಾಣ ಯಂತ್ರ, ಟ್ರ್ಯಾಕ್ಟರ್‌ ಮತ್ತು ಲಾರಿಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಕೇಳಿದರೆ ಯಾವ ಇಲಾಖೆಯ ಅಧಿಕಾರಿಗಳಿಗೆ ಬೇಕಾದರೂ ದೂರು ನೀಡಿ ಎಂದು ಅಕ್ರಮ ಸಾಗಣೆದಾರರು ಉತ್ತರಿಸುತ್ತಾರೆ ಎಂಬುದು ಸಾರ್ವಜನಿಕ ದೂರು. 

ಕಂದಾಯ ಇಲಾಖೆ ನಿಯಮಗಳ ಪ್ರಕಾರ, ಕೆರೆಗಳಲ್ಲಿ ನಾಲ್ಕು ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ.  ಭಾರಿ ಯಂತ್ರಗಳನ್ನೂ ಕೆರೆಗಳಿಗೆ ಇಳಿಸುವಂತಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ.

ADVERTISEMENT

ಮಣ್ಣು ತೆಗೆದ ನಂತರ ಉಂಟಾಗುವ ಹಳ್ಳದಲ್ಲಿ ನಾಲ್ಕು ದಿಕ್ಕುಗಳಿಂದ ನಿಗದಿತ ಇಳಿಜಾರು ಮಾಡಿ ಜಾನುವಾರು, ಮಕ್ಕಳು ಹಾಗೂ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂಬ ನಿಯಮವಿದೆ. ಆದರೆ, ಅದರ ಪಾಲನೆ ಇಲ್ಲಿ ಆಗುತ್ತಿಲ್ಲ.

ಯಾರು ಹೊಣೆ: ಅಕ್ರಮವಾಗಿ ಮಣ್ಣು ತೆಗೆಯುವಾಗ ನಿರ್ಮಾಣವಾಗುವ ಗುಂಡಿಗಳು. ಕೆರೆಯಲ್ಲಿ ಗುಂಡಿಗಳಿರುವುದು ತಿಳಿಯದೆ ಯಾರಾದರೂ ಅಮಾಯಕರು ಅಥವಾ ಪ್ರಾಣಿಗಳಿಗೆ ತೊಂದರೆ ಆದರೆ ಯಾರು ಹೊಣೆ? ಎಂಬ ಪ್ರಶ್ನೆ ಇಲ್ಲಿನ ರೈತರದ್ದು. 

ಶಿಸ್ತು ಕ್ರಮಕ್ಕೆ ಅವಕಾಶ: ಅಳತೆ ಮೀರಿ ಮಣ್ಣು ಸಾಗಿಸುತ್ತಿದ್ದಾರೆ ಕೆಎಂಎಂಸಿಆರ್ 1994, ಎಂಎಂಡಿಆರ್ ಕಾಯ್ದೆ 1957, ಐಪಿಸಿ 379, 1984ರ ಪ್ರಿವೆನ್ಷನ್ ಆಫ್ ಪ್ರಾಪರ್ಟಿ ಡ್ಯಾಮೇಜ್‌ ಕಾಯ್ದೆಯ ಸೆಕ್ಷನ್ 3ರಂತೆ ಶಿಸ್ತುಕ್ರಮ ಜರುಗಿಸಲು ಅವಕಾಶವಿದೆ.

ಅಧಿಕಾರಿಗಳ ಕಂಡು ಕಾಲ್ಕಿತ್ತರು: ಕೆರೆಯಲ್ಲಿ ಮಣ್ಣು ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮ ಲೆಕ್ಕಾಧಕಾರಿಗಳು ಬಂದ ತಕ್ಷಣ ಬೃಹತ್ ನಿರ್ಮಾಣ ಯಂತ್ರ, ಟ್ರ್ಯಾಕ್ಟರ್ ತಗೆದುಕೊಂಡು ಸ್ಥಳದಿಂದ ಕಾಲ್ಕಿತ್ತು ಓಡಿಹೋಗುತ್ತಾರೆ. 

ತಹಶೀಲ್ದಾರ್ ಮೇಲೆ ಲಾರಿ ಹತ್ತಿಸಲು ಯತ್ನ: ಈ ಹಿಂದೆ ಹಾರೋಹಳ್ಳಿ ತಾಲೂಕಿನ ಅಂಚಿಭಾರೆ ಗ್ರಾಮದ ಬಳಿ ಮಣ್ಣು ತೆಗೆಯುತ್ತಿರುವ ವಿಚಾರಕ್ಕೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರ ಮೇಲೆಯೇ ಟಿಪ್ಪರ್ ಲಾರಿ ಹತ್ತಿಸಲು ಯತ್ನ ಮಾಡಲಾಗಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು.

ಸರ್ಕಾರಕ್ಕೆ ಸೇರಿದ ಕೆರೆಗಳಲ್ಲಿನ ಮಣ್ಣನ್ನು ರೈತರು ಅನುಮತಿ ಪಡೆದು ತಮ್ಮ ಜಮೀನುಗಳಿಗೆ ತುಂಬಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಕ್ಕಾಗಿ ಕೆರೆಗಳಲ್ಲಿ ಮಣ್ಣನ್ನು ತೆಗೆಯುವುದಾದರೆ ಸರಕಾರಕ್ಕೆ ಗೌರವಧನ ಪಾವತಿಸಬೇಕು. ಕೂಡಲೇ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರೀಶೀಲನೆ ನಡೆಸಿ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಅಗ್ರಹ.

ಕರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವ ಬಗ್ಗೆ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು

-ವಿಜಿಯಣ್ಣ ತಹಶೀಲ್ದಾರ್ ಹಾರೋಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.