ADVERTISEMENT

ರಾಮನಗರ | ಜಾತಿ ನಿಂದನೆ ಆರೋಪ: ಬಿಸಿಎಂ ಅಧಿಕಾರಿ, ವಾರ್ಡನ್ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:11 IST
Last Updated 20 ಅಕ್ಟೋಬರ್ 2025, 4:11 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ರಾಮನಗರ: ನಗರದ ಅರ್ಚಕರಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಇಲಾಖೆಯ ತಾಲ್ಲೂಕು ಅಧಿಕಾರಿ ಮಧುಮಾಲ ಮತ್ತು ಹಾಸ್ಟೆಲ್ ವಾರ್ಡನ್ ಸಾಕಮ್ಮ ವಿರುದ್ದ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡುಗೆ ಸಿಬ್ಬಂದಿ ಮಂಜುಳಾ ಹಲ್ಲೆಗೊಳಗಾದವರು. ಘಟನೆಗೆ ಸಂಬಂಧಿಸಿದಂತೆ ಬಿಸಿಎಂ ಅಧಿಕಾರಿ ಮತ್ತು ವಾರ್ಡನ್ ವಿರುದ್ಧ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಇನ್ಮುಂದೆ ಕೆಲಸಕ್ಕೆ ಬರಬೇಡ ಎಂದು ಧಮ್ಕಿ ಹಾಕಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ ಮಧುಮಾಲ ಮತ್ತು ಸಾಕಮ್ಮ ಅವರು, ಜಾತಿ ನಿಂದನೆ ಮಾಡಿದ್ದಾರೆ ಎಂದು ಮಂಜುಳಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮದುವೆ ಹೆಸರಲ್ಲಿ ₹25 ಲಕ್ಷ ವಂಚನೆ

ಚನ್ನಪಟ್ಟಣ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ ಯುವಕನೊಬ್ಬ ಆಕೆಯಿಂದ ₹25 ಲಕ್ಷ ಹಣ, 6 ದುಬಾರಿ ಮೊಬೈಲ್ ಪೋನ್ ಹಾಗೂ 137 ಗ್ರಾಂ ಚಿನ್ನಾಭರಣ ಪಡೆದುಕೊಂಡು ಕಡೆಗೆ ಮದುವೆಯಾಗದೆ ವಂಚಿಸಿದ್ದಾನೆ. ಈ ಕುರಿತು ಅಪ್ಪಗೆರೆಯ ಸಿದ್ದಾರ್ಥ ನಗರದ ಕೃಷ್ಣಮೂರ್ತಿ ವಿರುದ್ಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೆಟ್ಟಿಹಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಯುವತಿಯನ್ನು 7 ವರ್ಷದಿಂದ ಪ್ರೀತಿಸುತ್ತಿದ್ದ ಕೃಷ್ಣಮೂರ್ತಿ, ಆಕೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆತನ ಮಾತನ್ನು ನಿಜ ಎಂದು ನಂಬಿದ್ದ ಯುವತಿ, ಆತ ಕೇಳಿದಾಗಲೆಲ್ಲಾ ಹಣ ಕೊಟ್ಟಿದ್ದರು. ಆ ಮೊತ್ತವೇ ಸುಮಾರು ₹25 ಲಕ್ಷವಾಗಿದೆ. ಜೊತೆಗೆ ಪ್ರೀತಿ ಹೆಸರಿನಲ್ಲಿ ದುಬಾರಿ ಮೊಬೈಲ್ ಫೋನ್, ಸ್ಮಾರ್ಟ್ ವಾರ್ಚ್‌ ಹಾಗೂ ಚಿನ್ನಾರಭರಣವನ್ನು ಉಡುಗೊರೆಯಾಗಿ ನೀಡಿದ್ದರು.

ಯುವತಿಯಿಂದ ಇಷ್ಟೆಲ್ಲಾ ಪಡೆದುಕೊಂಡಿದ್ದ ಕೃಷ್ಣಮೂರ್ತಿ, ಬೇರೆ ಯುವತಿ ಜೊತೆ ಸಂಬಂಧ ಇಟ್ಟುಕೊಂಡು ನನ್ನನ್ನು ವಂಚಿಸಿದ್ದಾನೆ. ನಾನು ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಧಮ್ಕಿ ಹಾಕಿ ಬೆದರಿಸಿದ್ದಾನೆ. ಈತನ ಕುರಿತು ಅವರ ತಾಯಿಗೆ ತಿಳಿಸಿದಾಗ, ಅವರೂ ₹50 ಸಾವಿರ ಪಡೆದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆತನ ಅಣ್ಣನ ಗಮನಕ್ಕೆ ತಂದಾಗ ಅವರೂ ₹1.58 ಲಕ್ಷ ಪಡೆದಿದ್ದರು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡ್ಡ ಬಂದ ನಾಯಿ: ಬೈಕ್ ಸವಾರ ಸಾವು

ಬಿಡದಿ (ರಾಮನಗರ): ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಬೈಕ್‌ಗೆ ನಾಯಿಯೊಂದು ಅಡ್ಡ ಬಂದಿದ್ದರಿಂದ, ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಲ್ಲುಗೋಪಹಳ್ಳಿ ಗ್ರಾಮದಲ್ಲಿ ನಡೆದಿದೆ. ಟೊಯೊಟಾ ಕಂಪನಿಯ ಹೊರಗುತ್ತಿಗೆ ನೌಕರ ಸುರೇಶ್(28) ಮೃತರು.

ಕೆಲಸ ಮುಗಿಸಿಕೊಂಡು ರಾತ್ರಿ 8 ಗಂಟೆ ಸುಮಾರಿಗೆ ಸುರೇಶ್ ಅವರು ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಏಕಾಏಕಿ ನಾಯಿ ಅಡ್ಡಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಸುರೇಶ್ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಬಿಡದಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.