ADVERTISEMENT

ಹಿಂದಿನ ಬಜೆಟ್‌ ಘೋಷಣೆ ಶೇ 85ರಷ್ಟು ಈಡೇರಿಕೆ

ನಾಳೆ ನಗರಸಭೆಯ 2026–27ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ: ನಗರಸಭೆ ಅಧ್ಯಕ್ಷ ಶಶಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:25 IST
Last Updated 4 ಮಾರ್ಚ್ 2026, 4:25 IST
ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ ಹಾಗೂ ಸದಸ್ಯರು ಇದ್ದಾರೆ
ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ ಹಾಗೂ ಸದಸ್ಯರು ಇದ್ದಾರೆ   

ರಾಮನಗರ: ‘ನಗರಸಭೆಯ 2025–26ನೇ ಬಜೆಟ್‌ನಲ್ಲಿ ಮಾಡಿದ್ದ ಘೋಷಣೆಗಳ ಪೈಕಿ ಶೇ 85ರಷ್ಟನ್ನು ಈಡೇರಿಸಲಾಗಿದೆ. 2025–27ನೇ ಸಾಲಿನ ಬಜೆಟ್ ಅನ್ನು ಮಾರ್ಚ್ 5ರಂದು ಮಂಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಉಳಿದ ಶೇ 15ರಷ್ಟು ಘೋಷಣೆಗಳನ್ನು ಈ ಬಜೆಟ್‌ನಲ್ಲಿ ಒಳಗೊಂಡು ಈಡೇರಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

‘ಘನತ್ಯಾಜ್ಯ ನಿರ್ವಹಣೆ, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಎಂಆರ್‌ಎಫ್ ಘಟಕ, ತ್ಯಾಜ್ಯ ವಿಲೇವಾರಿ ಘಟಕ, ಸಾರ್ವಜನಿಕ ಶೌಚಾಲಯ, ಗ್ರೇಡ್–1 ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸೇರಿದಂತೆ ಹಲವು ಘೋಷಣೆಗಳನ್ನು ಈಡೇರಿಸಲಾಗಿದೆ’ ಎಂದು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಗರಸಭೆ ವತಿಯಿಂದ ರೇಷ್ಮೆ ನಾಡ ಕನ್ನಡ ಹಬ್ಬದಂದು ತಾಲ್ಲೂಕಿನ 17 ಸಾಧಕರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರ ಕಾರ್ಮಿಕರ ದಿನಾಚರಣೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಸ್ಮಾರ್ಟ್ ರಾಮನಗರ ಪರಿಕಲ್ಪನೆಯಡಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು 10 ಸಾವಿರ ಬಟ್ಟೆ ಕೈಚೀಲಗಳನ್ನು ವಿತರಿಸಲಾಗಿದೆ’ ಎಂದರು.

ADVERTISEMENT

‘ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕೆ ₹60 ಲಕ್ಷ, ಇತರ ಬಡವರ ಅಭಿವೃದ್ಧಿಗೆ ₹30 ಲಕ್ಷ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ₹15 ಲಕ್ಷ ಖರ್ಚು ಮಾಡಲಾಗಿದೆ. ಕಸದ ಬ್ಲ್ಯಾಕ್‌ಸ್ಪಾಟ್‌ಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಹೇಳಿದರು.

‘ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಾದ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷಾ ತರಬೇತಿ ನೀಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ವಿಮೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ, ಮನೆ ದುರಸ್ತಿಗೆ ಸಹಾಯಧನದಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಡೆ–ನಲ್ಮ್ ಯೋಜನೆಯಡಿ 1530 ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಛತ್ರಿ ವಿತರಣೆ, ಸವಿತಾ ಸಮಾಜ ಮತ್ತು ಮಡಿವಾಳ ಸಮಾಜದವರಿಗೆ ಕಿಟ್ ವಿತರಣೆ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗಿದೆ. ರಾಮನಗರದ ಕಕೂನ್ ಬ್ರಾಂಡ್‌ ಹೂವಿನಹಾರಕ್ಕೆ ಪ್ರಚಾರ ನೀಡಲು ಎಲ್ಲಾ ಕಾರ್ಯಕ್ರಮಗಳಲ್ಲಿ ಅದೇ ಹಾರಗಳನ್ನು ಬಳಸಲಾಗುತ್ತಿದೆ’ ಎಂದರು.

ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆರೀಫ್, ಸೋಮಶೇಖರ್, ಅಕ್ಲಿಂ, ಬಿ.ಸಿ. ಪಾರ್ವತಮ್ಮ, ಪವಿತ್ರ, ಅಜ್ಮತ್‌ಉಲ್ಲಾ ಖಾನ್, ಗೋವಿಂದರಾಜು, ನಾಗಮ್ಮ, ಲೆಕ್ಕ ಅಧೀಕ್ಷಕಿ ಸುನೀತಾ, ವ್ಯವಸ್ಥಾಪಕಿ ರೇಖಾ, ಕಂದಾಯ ನಿರೀಕ್ಷಕ ಆರ್. ನಾಗರಾಜು ಇದ್ದರು.

ಸಂಕೀರ್ಣ ಭವನ ನವೀಕರಣಕ್ಕೆ ಶೀಘ್ರ ಟೆಂಡರ್

‘ನಗರದ ಡಾ. ರಾಜಕುಮಾರ್ ವಾಣಿಜ್ಯ ಸಂಕೀರ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ನವೀಕರಣಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ನಗರಸಭೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ವಸತಿ ಯೋಜನೆಯಡಿ 5 ಸಾವಿರ ನಿವೇಶನ ರಹಿತರಿಗೆ ನಿವೇಶನ ಒದಗಿಸಲಾಗುವುದು. ಕೆಂಪೇಗೌಡ ವೃತ್ತದಲ್ಲಿ ಕ್ಲಾಕ್ ಟವರ್ ವಾಟರ್ ಟ್ಯಾಂಕ್ ವೃತ್ತದಲ್ಲಿ ಕಾರಂಜಿ ಸ್ಥಾಪನೆ ಯುವಜನರಿಗಾಗಿ ಕ್ರೀಡಾ ಚಟುವಟಿಕೆ ಉತ್ತೇಜಿಸಲು ಪ್ರತಿವರ್ಷ ಆರ್‌ಪಿಎಲ್ ಪಂದ್ಯಾವಳಿ ವಾರ್ಡ್‌ವಾರು ನಾಮಫಲಕ ಅಳವಡಿಕೆ ಸೇರಿದಂತೆ ಉಳಿಕೆ ಘೋಷಣೆಗಳನ್ನು ಮೂರು ತಿಂಗಳೊಳಗೆ ಈಡೇರಿಸಲಾಗುವುದು’ ಎಂದು ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.