ರಾಮನಗರ: ನಗರದ ವಿವಿಧ ವಾರ್ಡ್‌ಗಳಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್) ಅನುದಾನದಡಿ ಒಟ್ಟು ₹19 ಕೋಟಿ ಮೊತ್ತದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ 27 ಭುವನೇಶ್ವರಿ ಗೋಪುರ ಬಳಿ, 26ರ ಕೆಂಪೇಗೌಡ ವೃತ್ತ, 29ರ ಮಾಗಡಿ ರಸ್ತೆಯ 1ನೇ ಕ್ರಾಸ್, 30ರ ಐಜೂರು ಗಣೇಶ ದೇವಸ್ಥಾನದ ಎದುರು, ವಾರ್ಡ್ 28ರ ಪ್ರಮೋದ ಮನೆ ಎದುರು ಹಾಗೂ ವಾರ್ಡ್ 31ರ ಅರ್ಚಕರಹಳ್ಳಿ ಹಾಲಿನ ಡೇರಿ ಬಳಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಶೇಷಾದ್ರಿ, ‘ಮೊದಲ ಹಂತದಲ್ಲಿ ಯುಐಡಿಎಫ್ ಅನುದಾನದ ₹67 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದೀಗ ಎರಡನೇ ಹಂತದಲ್ಲಿ10 ಕಿಲೋಮೀಟರ್ ಉದ್ದದದ ಕಾಂಕ್ರಿಟ್ ರಸ್ತೆ ಹಾಗೂ ನಗರದ ಎಲ್ಲಾ ವಾರ್ಡ್ ವ್ಯಾಪ್ತಿಯಲ್ಲಿ 20 ಕಿ.ಮೀ. ಉದ್ದದ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.
‘ನಿರಂತರ ಕುಡಿಯುವ ನೀರು ಯೋಜನೆಯಿಂದಾಗಿ ಹದಗೆಟ್ಟಿದ್ದ ರಸ್ತೆಗಳನ್ನು ಮರು ನಿರ್ಮಾಣಕ್ಕೆ ಯುಐಡಿಎಫ್ ಅನುದಾನದಲ್ಲಿ ವಿಶೇಷ ಒತ್ತು ನೀಡಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ₹82.5 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅದರಲ್ಲಿ ₹40 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ 25 ವಾರ್ಡ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.
‘ವಿವೇಕಾನಂದನಗರ ದೊಡ್ಡ ಬಡಾವಣೆಯಾಗಿದ್ದು, ಜನವಸತಿಯೂ ಹೆಚ್ಚಾಗಿದೆ. ಹಾಗಾಗಿ, ಈ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸುಮಾರು ₹50 ಕೋಟಿಯ ಅಗತ್ಯವಿದೆ. ವಾರ್ಡ್ ಭೇಟಿ ಸಂದರ್ಭದಲ್ಲಿ ಅಲ್ಲಿರುವ ಸಮಸ್ಯೆಗಳ ಕುರಿತು ಸ್ಥಳೀಯರು ಗಮನ ಸೆಳೆದಿದ್ದು, ಎಲ್ಲವನ್ನೂ ಹಂತಹಂತವಾಗಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.
‘ಜಿಲ್ಲೆಯವರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಹಕಾರದೊಂದಿಗೆ ನಗರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ, ನಗರಕ್ಕೆ ಹೊಸರೂಪ ನೀಡಲು ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಪವಿತ್ರ, ಬಿ.ಸಿ. ಪಾರ್ವತಮ್ಮ, ಮಂಜುನಾಥ್, ವಿಜಯಕುಮಾರಿ, ಜಯಲಕ್ಷ್ಮಮ್ಮ, ಸೋಮಶೇಖರ್ ಮಣಿ, ಅಸ್ಮತ್‌ಉಲ್ಲಾ ಖಾನ್, ನಿಜಾಮುದ್ದೀನ್ ಷರೀಫ್, ಗಿರಿಜಮ್ಮ, ನರಸಿಂಹ, ಆರೀಪ್, ಸಮದ್, ಬೈರೇಗೌಡ, ನಾಗಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿಸುರೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್, ಮುಖಂಡರಾದ ಕಬಡ್ಡಿ ವಿಜಿ, ಆಂಜನಪ್ಪ, ಲಕ್ಷ್ಮೀಪತಿ, ಗುರುಪ್ರಸಾದ್, ಮುಷೀರ್, ವೆಂಕಟೇಶ್, ರಷೀದ್, ಪ್ರವೀಣ್, ದೇವರಾಜು, ನಗರಸಭೆ ಅಧಿಕಾರಿಗಳು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.