ADVERTISEMENT

ರಾಮನಗರದಲ್ಲಿ ಮಾರ್ಚ್ 5ಕ್ಕೆ ಉದ್ಯೋಗ ಮೇಳ; ಪ್ರತಿಷ್ಠಿತ ಕಂಪನಿಗಳು ಭಾಗಿ: ಶಾಸಕ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:29 IST
Last Updated 18 ಫೆಬ್ರುವರಿ 2026, 5:29 IST
<div class="paragraphs"><p>ಉದ್ಯೋಗ ಮೇಳ ಆಯೋಜನೆ ಕುರಿತು ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ&nbsp; ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿದರು. </p></div>

ಉದ್ಯೋಗ ಮೇಳ ಆಯೋಜನೆ ಕುರಿತು ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ  ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿದರು.

   

ರಾಮನಗರ: ‘ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾರ್ಚ್ 5ರಂದು ರಾಮನಗರದಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳು ಹಾಗೂ ಕೈಗಾರಿಕೆಗಳು ಭಾಗಿಯಾಗುವ ಈ ಮೇಳದಲ್ಲಿ ಆದ್ಯತೆ ಮೇರೆಗೆ ಜಿಲ್ಲೆಯ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ಉದ್ಯೋಗ ಮೇಳ ಆಯೋಜನೆ ಕುರಿತು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಬಿಡದಿ, ಹಾರೋಹಳ್ಳಿ, ಕನಕಪುರ ಸೇರಿದಂತೆ ಎಲ್ಲಾ ಕೈಗಾರಿಕೆಗಳು, ಕಂಪನಿಗಳು, ವಾಣಿಜ್ಯ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ’ ಎಂದರು.

ADVERTISEMENT

‘ಕನಿಷ್ಠ 5 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಕಂಪನಿಗಳಾದ ಟೊಯೋಟ ಕಿರ್ಲೋಸ್ಕರ್, ಬಾಷ್‌, ಆಂಥಮ್, ಟಿಐಎ ಸೇರಿದಂತೆ ಸುತ್ತಮುತ್ತಲಿನ ಕಂಪನಿಗಳು ಸೇರಿದಂತೆ ಸುಮಾರು 250 ಸಂಸ್ಥೆಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಲು ಅಗತ್ಯ ಕ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಕೈಗಾರಿಕೆಗಳು ತಮಗೆ ಅವಶ್ಯವಿರುವ ಮಾನವ ಸಂಪನ್ಮೂಲದ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿಗೆ ಒದಗಿಸಿ, ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಆ ಮೂಲಕ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರ ಅರ್ಹತೆಗೆ ಅನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸುವಂತೆ ಮಾಡಬೇಕು’ ಎಂದು ಹೇಳಿದರು.

‘ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ಸ್ನಾತಕೋತ್ತರ ಪದವಿ ಹೊಂದಿರುವವರು, ಅನುತ್ತೀರ್ಣರಾಗಿರುವವರು ಸಹ ಭಾಗವಹಿಸಲು ಅನುವು ಮಾಡಿಕೊಡಬೇಕು. ಮೇಳದ ಮಾಹಿತಿ ಒದಗಿಸಲು ಸಹಾಯವಾಣಿ ತೆರೆಯಬೇಕು. ಭಿತ್ತಿಪತ್ರ, ಕರಪತ್ರ, ಧ್ವನಿವರ್ಧಕ, ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಮಾಡಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೈಗಾರಿಕಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.