ರಾಮನಗರ: ಇಲ್ಲಿನ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇಲ್ಲಿಯವರೆಗೆ ಸುಮಾರು 5 ಸಾವಿರ ಇ-ಖಾತೆ ವಿತರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರಸಭೆಯಲ್ಲಿ ಶುಕ್ರವಾರ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇ-ಖಾತಾ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಇ-ಖಾತೆ ಮಾಡಿಸಿಕೊಳ್ಳಲು ಈಗಾಗಲೇ ನಗರಸಭೆ ಸಾಕಷ್ಟು ಅರಿವು ಮೂಡಿಸಿದೆ. ವಾರ್ಡುವಾರು ಅಭಿಯಾನ ನಡೆಸುತ್ತಿದೆ. ಆದರೆ, ಕಳೆದ ಕೆಲವು ದಿನಗಳಿಂದ ತಾಂತ್ರಿಕ ಸಮಸ್ಯೆ, ರಜೆ ಕಾರಣ ಖಾತೆ ವಿತರಣೆ ವಿಳಂಬವಾಗುತ್ತಿದೆ. ಈ ಸಮಸ್ಯೆ ನಡುವೆಯೂ ಇಂದು 300ಕ್ಕೂ ಅಧಿಕ ಖಾತೆ ವಿತರಿಸಲಾಯಿತು. ಬಾಕಿ ಇರುವ ಅರ್ಜಿಗಳ ಇ–ಖಾತೆಯನ್ನು ಶೀಘ್ರ ವಿತರಿಸಲಾಗುವುದು ಎಂದರು.
ಇ-ಖಾತೆಗಳಿಗೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆಯಾಗಿವೆ. ಒತ್ತಡ ಹೆಚ್ಚಾಗಿದೆ. ರಜಾ ದಿನಗಳಲ್ಲಿಯೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹಾಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಂಪೂರ್ಣ ವಿಲೇವಾರಿ ಮಾಡಿ ನಂತರ ಮನೆ ಮನೆ ಇ –ಖಾತೆ ಅಭಿಯಾನ ಪುನಾರಂಭವಾಗಲಿದೆ. ಯಾರಬ್ ನಗರ, ಕೊತ್ತೀಪುರ, ಬಾಲಗೇರಿ ಬಡಾವಣೆಗಳಲ್ಲಿ ಶೀಘ್ರದಲ್ಲೇ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿ ಖಾತೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿತ್ತು. ನಂತರ ಕೆಲ ದಿನ ಅರ್ಜಿ ಸ್ವೀಕಾರ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಬಿ ಖಾತೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಗರಸಭೆ ವ್ಯಾಪ್ತಿಯಲ್ಲಿ ಇನ್ನೂ 3 ರಿಂದ 4 ಸಾವಿರ ಬಿ ಖಾತೆ ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಖಾತೆ ವಿಚಾರದಲ್ಲಿ ಅಥವಾ ನಗರಸಭೆಯ ಯಾವುದೇ ಕಾರ್ಯಕ್ಕೆ ನಾಗರಿಕರು ದಳ್ಳಾಳಿಗಳ ಮೊರೆ ಹೋಗದೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ. ಯಾವುದೇ ಸಮಸ್ಯೆಯಾದರೂ ಆಯುಕ್ತರನ್ನು ನೇರವಾಗಿ ಭೇಟಿಯಾಗಿ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಆಯಿಷಾ ಬಾನು, ಆಯುಕ್ತ ಡಾ.ಜಯಣ್ಣ, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಸೋಮಶೇಖರ್ ಮಣಿ, ಅಜ್ಮತ್, ಆರೀಫ್, ನಿಜಾಮುದ್ದೀನ್ ಷರೀಷ್, ನರಸಿಂಹ, ಗೋವಿಂದರಾಜು, ಕಿರಣ್, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.