ADVERTISEMENT

ರಾಮನಗರ: ಭೂ ಸ್ವಾಧೀನಕ್ಕೆ ವಿರೋಧ; ಹೋರಾಟ ಬೆಂಬಲಿಸಿ ಬೈಕ್ ರ‍್ಯಾಲಿ

ಭೈರಮಂಗಲದವರೆಗೆ ರೈತ ಸಂಘದಿಂದ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:51 IST
Last Updated 5 ನವೆಂಬರ್ 2025, 4:51 IST
ಬಿಡದಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬೆಂಬಲಿಸಿ,ರೈತ ಸಂಘದ ಸದಸ್ಯರು ರಾಮನಗರದಿಂದ ಭೈರಮಂಗಲದವರೆಗೆ ಮಂಗಳವಾರ ಬೈಕ್ ರ‍್ಯಾಲಿ ನಡೆಸಿದರು
ಬಿಡದಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬೆಂಬಲಿಸಿ,ರೈತ ಸಂಘದ ಸದಸ್ಯರು ರಾಮನಗರದಿಂದ ಭೈರಮಂಗಲದವರೆಗೆ ಮಂಗಳವಾರ ಬೈಕ್ ರ‍್ಯಾಲಿ ನಡೆಸಿದರು   

ರಾಮನಗರ: ತಾ‌ಲ್ಲೂಕಿನ ಬಿಡದಿ ಹೋಬಳಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ (ಜಿಬಿಐಟಿ) ಭೂ ಸ್ವಾಧೀನ ವಿರೋಧಿಸಿ, ಭೈರಮಂಗಲದಲ್ಲಿ ರೈತರು ‌ನಡೆಸುತ್ತಿರುವ ಹೋರಾಟ ಬೆಂಬಲಿಸಿ ರೈತ ಸಂಘದ ವತಿಯಿಂದ ರಾಮನಗರದಿಂದ ಭೈರಮಂಗಲದವರೆಗೆ ಮಂಗಳವಾರ ಬೈಕ್ ರ‍್ಯಾಲಿ ನಡೆಯಿತು.

ನಗರದ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ಬೈಕ್‌ಗಳೊಂದಿಗೆ ಜಮಾಯಿಸಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಹಸಿರು ಬಾವುಟಗಳನ್ನು ತಮ್ಮ ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ಬೆಳಿಗ್ಗೆ ಭೈರಮಂಗಲದತ್ತ ಹೊರಟರು. ಮಾರ್ಗಮಧ್ಯೆ ಐಜೂರು ವೃತ್ತದಲ್ಲಿ ಕೆಲ ಹೊತ್ತು ನಿಂತ ಸದಸ್ಯರು, ಭೂ ಸ್ವಾಧೀನದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಮಲ್ಲಯ್ಯ, ‘ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಹೊಸ ಟೌನ್‌ಶಿಫ್ ನಿರ್ಮಿಸಲು ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಕೃಷಿ ನೆಚ್ಚಿಕೊಂಡು ಬದುಕುತ್ತಿರುವವರು ಬೀದಿ ಪಾಲಾಗುತ್ತಾರೆ. ಸ್ಥಳೀಯರ ಬದುಕಿಗೆ ಮಾರಕವಾಗಿರುವ ಜಿಬಿಐಟಿ ಯೋಜನೆಯನ್ನು ಕೈ ಬಿಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರೈತರ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರ ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಈಗಾಗಲೇ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲೂ ಕೈಗಾರಿಕೆಗಾಗಿ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾದಾಗ ಸ್ಥಳೀಯರು ತೀಬ್ರ ಹೋರಾಟ ನಡೆಸಿದರು. ಕಡೆಗೆ ಸರ್ಕಾರ ಭೂ ಸ್ವಾಧೀನ ಹಿಂಪಡೆಯಿತು. ಇಲ್ಲಿಯೂ ಅಂತಹದ್ದೇ ಪರಿಸ್ಥಿತಿ ಬರಲಿದೆ. ಅದಕ್ಕೂ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದರು.

ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ‘ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ನಡೆದ ಮಾದರಿಯಲ್ಲೇ ಭೈರಮಂಗಲದಲ್ಲಿ ಜಿಬಿಐಟಿ ವಿರುದ್ಧ ಹೋರಾಟ ನಡೆಯುಲಿದೆ. ಈಗಾಗಲೇ ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಸರ್ಕಾರದ ಬಲಪ್ರಯೋಗಕ್ಕೆ ಯಾರೂ ಬಗ್ಗುವುದಿಲ್ಲ’ ಎಂದು ಹೇಳಿದರು.

ಭೈರಮಂಗಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ತೆರಳಿದ ಪ್ರತಿಭಟನಾಕಾರರು, ಹೋರಾಟಕ್ಕೆ ಬೆಂಬಲ ಸೂಚಿಸಿದರು. ನಂತರ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಕಡೆವರೆಗೆ ತಾವು ಹೋರಾಟಕ್ಕೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.

ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ರಾಜ್ಯ ಸಮಿತಿ ಸದಸ್ಯ ಕೃಷ್ಣಯ್ಯ, ಮುಖಂಡರಾದ ಲೋಕೇಶ್‌, ಅರುಣ್‌ ಕುಮಾರ್‌, ದಲಿತಸೇನೆ ಜಿಲ್ಲಾಧ್ಯಕ್ಷ ಕಿರಣ್‌ ಸಾಗರ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.