ADVERTISEMENT

ರಾಮನಗರ | ಕಸ ಸುರಿಯುವ ತಾಣವಾದ ಮುಖ್ಯ ಬೀದಿ

ರಾಮನಗರ–ಮಾಗಡಿ ಮುಖ್ಯರಸ್ತೆಯ ದುಃಸ್ಥಿತಿ; ಕಣ್ಮುಚ್ಚಿ ಕುಳಿತ ರಾಮನಗರ ನಗರಸಭೆ

ಓದೇಶ ಸಕಲೇಶಪುರ
Published 8 ಅಕ್ಟೋಬರ್ 2024, 6:15 IST
Last Updated 8 ಅಕ್ಟೋಬರ್ 2024, 6:15 IST

ರಾಮನಗರದ ಮಾಗಡಿ ಮುಖ್ಯರಸ್ತೆಯ ಬದಿಯಲ್ಲಿರುವ ಕಸದ ರಾಶಿ

ರಾಮನಗರದ ಮಾಗಡಿ ಮುಖ್ಯರಸ್ತೆಯ ಬದಿಯಲ್ಲಿರುವ ಕಸದ ರಾಶಿ

ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ADVERTISEMENT

ರಾಮನಗರ: ನಗರದ ರಾಯರದೊಡ್ಡಿ ವೃತ್ತ ಸಮೀಪದ ರಾಮನಗರ– ಮಾಗಡಿ ಮುಖ್ಯರಸ್ತೆ ಬದಿಯು ತ್ಯಾಜ್ಯ ವಿಲೇವಾರಿ ತಾಣವಾಗಿದೆ. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎದುರಿನ ಈ ರಸ್ತೆಯುದ್ದಕ್ಕೂ ಬಿದ್ದಿರುವ ಕಸದ ರಾಶಿಯು ದುರ್ನಾತ ಬೀರುತ್ತಿದ್ದು, ಜನರು ರಸ್ತೆ ಪಕ್ಕ ಓಡಾಡಲಾರದ ಸ್ಥಿತಿ ಇದೆ.

ನಗರದಲ್ಲಿ 30ಕ್ಕೂ ಹೆಚ್ಚು ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿ ತೆರವುಗೊಳಿಸಿರುವ ನಗರಸಭೆ, ಅಲ್ಲಿ ಸೂಚನಾ ಫಲಕ ಅಳವಡಿಸಿ ಕಸ ಎಸೆಯದಂತೆ ಎಚ್ಚರಿಕೆ ನೀಡಿದೆ. ಜೊತೆಗೆ, ಬ್ಲ್ಯಾಕ್‌ಸ್ಪಾಟ್‌ಗಳ ಮೇಲೆ ನಿಗಾ ಇಡಲು ಕೆಲವೆಡೆ ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಿದೆ. ಆದರೆ, ನಗರವನ್ನು ಹಾದು ಹೋಗಿರುವ ಮಾಗಡಿ ಮುಖ್ಯರಸ್ತೆಯೇ ಕಸ ವಿಲೇವಾರಿ ತಾಣವಾಗಿರುವುದು ಮಾತ್ರ ನಗರಸಭೆ ಕಣ್ಣಿಗೆ ಬಿದ್ದಿಲ್ಲ.

ತಿಪ್ಪೆಯಂತಾದ ರಸ್ತೆ: ಕಾಲೇಜಿಗೆ ಕೂಗಳತೆ ದೂರದಲ್ಲಿರುವ ರಸ್ತೆ ಪಕ್ಕ ಮನೆ ಕಸ, ಅಂಗಡಿಗಳ ಕಸ, ಕಟ್ಟಡದ ಅವಶೇಷಗಳು, ಪ್ಲಾಸ್ಟಿಕ್ ರಾಶಿ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯದಿಂದಾಗಿ ಮಾಗಡಿ ರಸ್ತೆಯು ಒಂದು ರೀತಿಯಲ್ಲಿ ತಿಪ್ಪೆಯಂತಾಗಿದೆ. ಕೆಲವರು ರಾತ್ರೋರಾತ್ರೊ ಇಲ್ಲಿಗೆ ಕಸವನ್ನು ವಾಹನಗಳಲ್ಲಿ ತಂದು ಸುರಿದು ಹೋಗುತ್ತಾರೆ. ಇದರಿಂದಾಗಿ ಕಸದ ರಾಶಿಯೇ ರಸ್ತೆಯನ್ನು ಒತ್ತುವರಿ ಮಾಡಿಕೊಂಡಂತೆ ಕಾಣುತ್ತದೆ.

‘ಇತ್ತೀಚೆಗೆ ರಸ್ತೆ ಬದಿಗೆ ಕಸ ಎಸೆಯುವವರು ಹೆಚ್ಚಾಗಿದ್ದಾರೆ. ರಾತ್ರಿ ಅಥವಾ ನಸುಕಿನಲ್ಲಿ ವಾಹನದಲ್ಲಿ ತುಂಬಿಕೊಂಡು ಬಂದು ಎಸೆದು ಹೋಗುತ್ತಾರೆ. ಕೆಲವರು ಚೀಲದಲ್ಲಿ ಕಸ ತುಂಬಿಕೊಂಡು ಬಂದು ದ್ವಿಚಕ್ರ ವಾಹನದಲ್ಲಿ ತಂದು ಹಾಕುತ್ತಿದ್ದಾರೆ. ಮಾರುದ್ದಕ್ಕೂ ಬಿದ್ದಿರುವ ಕಸವನ್ನು ನಗರಸಭೆಯವರು ಗಮನಿಸಿಯೂ ಸುಮ್ಮನಿದ್ದಾರೆಂದರೆ, ಇವರಿಗೆ ನಗರದ ನೈರ್ಮಲ್ಯದ ಬಗ್ಗೆ ಎಷ್ಟು ಕಾಳಜಿ ಇರಬೇಕು?’ ಎಂದು ಭುವನೇಶ್ವರ ನಗರ ನಿವಾಸಿ ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.

ಕಚೇರಿ ಬಿಟ್ಟು ಹೊರಬರಲಿ: ‘ನಗರದಲ್ಲಿರುವ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವು ಮಾಡಲು ಮುಂದಾಗಿರುವ ನಗರಸಭೆಯವರಿಗೆ ಮಾಗಡಿ ರಸ್ತೆಯುದ್ದಕ್ಕೂ ಹರಡಿಕೊಂಡಿರುವ ಕಸದ ರಾಶಿ ಯಾಕೆ ಕಣ್ಣಿಗೆ ಬಿದ್ದಿಲ್ಲ? ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬಂದರೆ ಕಸದ ಸಮಸ್ಯೆ ಎಲ್ಲೆಲ್ಲಿದೆ ಎಂದು ಗೊತ್ತಾಗುತ್ತದೆ. ಯಾರೊಬ್ಬರೂ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ನಗರದಲ್ಲಿ ಎಲ್ಲೆಂದರಲ್ಲಿ ಕಸದ ತಿಪ್ಪೆಗಳು ಕಾಣುವುದು ಸಾಮಾನ್ಯವಾಗಿದೆ’ ಎಂದು ಹಿರಿಯ ನಾಗರಿಕ ವಿಶ್ವನಾಥ್ ಹೇಳಿದರು.

‘ನಗರಸಭೆಯ ಪೌರಾಯುಕ್ತ, ಪರಿಸರ ಎಂಜಿನಿಯರ್, ಆರೋಗ್ಯ ನಿರೀಕ್ಷಕರು ಆಗಾಗ ನಗರವನ್ನು ಸುತ್ತಾಡಬೇಕು. ಆಗ ನಾಗರಿಕ ಸಮಸ್ಯೆಗಳಾದ ಕಸದ ಸಮಸ್ಯೆ, ರಸ್ತೆ ಸಮಸ್ಯೆ, ಒತ್ತುವರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಗೊತ್ತಾಗುತ್ತವೆ. ಅಧಿಕಾರಿಗಳು ಇನ್ನಾದರೂ ಹೊರಗಡೆ ಕಾಣಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಲಿ’ ಎಂದು ಸಲಹೆ ನೀಡಿದರು.

ಸಾಂಕ್ರಾಮಿಕ ರೋಗ ಭೀತಿ

ರಸ್ತೆ ಬದಿ ತಲೆ ಎತ್ತಿರುವ ಕಸದ ರಾಶಿಯಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಳೆ ಬಂದರೆ ಕಸದ ರಾಶಿಯ ನೀರು ರಸ್ತೆಯನ್ನು ಹರಡಿಕೊಂಡು, ಕಾಲೇಜಿನ ಕಾಂಪೌಂಡ್‌ ಕಡೆಗೆ ಬರುತ್ತದೆ. ಬಿಸಿಲು ಹೆಚ್ಚಾದಾಗ ಕಸವು ದುರ್ನಾತ ಬೀರುತ್ತದೆ. ಇದರಿಂದಾಗಿ, ಸಾರ್ವಜನಿಕರು ರಸ್ತೆ ಬದಿ ಮೂಗು ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ. ನಗರಸಭೆಯವರು ಇನ್ನಾದರೂ ಈ ಕಡೆ ಗಮನ ಹರಿಸಿ ಕಸದ ತಿಪ್ಪೆಗಳನ್ನು ತೆರವು ಮಾಡಬೇಕು. ಕಾಲೇಜಿನ ಎದುರು ಇರುವ ರಸ್ತೆ ಮುಂದೆ ಕಸ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿದ್ಯಾರ್ಥಿಗಳು ಓದುವ ಕಾಲೇಜಿನ ಎದುರಿಗೆ ಕಸ ತಂದು ಸುರಿಯುವವರಿಗೆ ಸ್ವಲ್ಪವಾದರೂ ನಾಗರಿಕ ಪ್ರಜ್ಞೆ ಬೇಡವೇ? ಇನ್ನಾದರೂ ಕಸ ಎಸೆಯುವುದು ಬಿಟ್ಟು, ನಗರದ ನೈರ್ಮಲ್ಯ ಕಾಪಾಡಲು ನಗರಸಭೆ ಜೊತೆ ಕೈ ಜೋಡಿಸಬೇಕು
ಶಿವಲಿಂಗಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.