ADVERTISEMENT

ರಾಮನಗರ: ಸ್ಕೂಟರ್ ಡಿಕ್ಕಿಯಲ್ಲಿದ್ದ ಚಿನ್ನಾಭರಣ, ನಗದು ಕಳವು

ಡಿಕ್ಕಿಯಲ್ಲಿ ₹17 ಲಕ್ಷ ಮೌಲ್ಯದ ಚಿನ್ನ, ₹2 ಲಕ್ಷ ನಗದು ಇಟ್ಟುಕೊಂಡಿದ್ದ ನಿವೃತ್ತ ಪಿಡಿಒ; ಕಣ್ತಪ್ಪಿಸಿ ಕೃತ್ಯ ಎಸಗಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:14 IST
Last Updated 22 ಅಕ್ಟೋಬರ್ 2025, 8:14 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ರಾಮನಗರ:‌ ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಮ್ಮ ಸ್ಕೂಟರ್‌ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದ ₹17.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹2 ಲಕ್ಷ ನಗದನ್ನು ಕಳ್ಳರು ಕದ್ದಿದ್ದಾರೆ. ತಾಲ್ಲೂಕಿನ ಅವ್ವೇರಹಳ್ಳಿಯ ವಿಜಯಕುಮಾರ್ ಚಿನ್ನಾಭರಣ ಮತ್ತು ನಗದು ಕಳೆದುಕೊಂಡವರು. ಈ ಕುರಿತು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಕುಮಾರ್ ಅವರು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ 190 ಗ್ರಾಂ ಚಿನ್ನಾಭರಣ ಅಡವಿಟ್ಟಿದ್ದರು. ಅ. 17ರಂದು ಬೆಳಿಗ್ಗೆ 11.30ರ ಚಿನ್ನಾಭರಣ ಬಿಡಿಸಿಕೊಂಡಿದ್ದ ಅವರು, ಅಲ್ಲಿಂದ ರಾಮನಗರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಬಂದು ₹2 ಲಕ್ಷ ನಗದು ಡ್ರಾ ಮಾಡಿಕೊಂಡಿದ್ದರು.

ಚಿನ್ನಾಭರಣ, ಹಣ, ಚೆಕ್‌ ಬುಕ್, ಬ್ಯಾಂಕ್ ಪಾಸ್‌ಬುಕ್‌ ಒಳಗೊಂಡ ಬ್ಯಾಗ್ ಅನ್ನು ತಮ್ಮ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ ಡಿಕ್ಕಿಯಲ್ಲಿ ಇಟ್ಟಿದ್ದರು. ಬಳಿಕ ಅಲ್ಲಲ್ಲಿ ಸ್ಕೂಟರ್‌ ನಿಲ್ಲಿಸಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದರು.

ADVERTISEMENT

ಮನೆಗೆ ಹೋದವರೇ ಸ್ಕೂಟರ್‌ ಡಿಕ್ಕಿ ತೆರೆದು ನೋಡಿದಾಗ ಬ್ಯಾಗ್ ಕಾಣಿಸಿಲ್ಲ. ವಿಜಯಕುಮಾರ್ ಅವರಿಗೆ ಗೊತ್ತಾಗದಂತೆ ಹಿಂಬಾಲಿಸಿರುವ ಕಳ್ಳರು, ಸ್ಕೂಟರ್‌ ನಿಲ್ಲಿಸಿದಾಗ ನಕಲಿ ಕೀ ಬಳಸಿಕೊಂಡು ಡಿಕ್ಕಿಯಲ್ಲಿದ್ದ  ಬ್ಯಾಗ್ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕದ್ದಿರುವ ಒಡವೆಯಲ್ಲಿ 60 ಗ್ರಾಂ ಚಿನ್ನದ ಸರ, 30 ಗ್ರಾಂನ 2 ಬಳೆ, ಡಾಲರ್ ಸಮೇತ 60 ಗ್ರಾಂನ ನೆಕ್ಲೇಸ್, 40 ಗ್ರಾಂ ಚಿನ್ನದ ಮಣಿ ಸರ ಸೇರಿದೆ. ಕಳ್ಳರ ಪತ್ತೆಗಾಗಿ, ವಿಜಯಕುಮಾರ್ ಅವರು ಓಡಾಡಿರುವ ಹಾಗೂ ಸ್ಕೂಟರ್‌ ನಿಲ್ಲಿಸಿದ್ದ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಕಳ್ಳರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.

ಟ್ರಾಕ್ಟರ್ ಪಲ್ಟಿ: ಚಾಲಕ ಸಾವು

ಜಮೀನು ಸಮತಟ್ಟ ಮಾಡುತ್ತಿದ್ದ ಟ್ರಾಕ್ಟರ್ ದಿಬ್ಬ ಹತ್ತಿಸುವಾಗ ಹಿಮ್ಮುಖವಾಗಿ ಚಲಿಸಿ ಪಲ್ಟಿಯಾಗಿದ್ದರಿಂದ ಚಾಲಕ ಮೃತಪಟ್ಟಿರುವ ಘಟನೆ ರಾಮನಗರ ತಾಲ್ಲೂಕಿನ ಕಗ್ಗಲಹಳ್ಳಿಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ಹಲಸಿನಹಳ್ಳಿಯ ಸಣ್ಣೇಗೌಡ (58) ಮೃತ ಚಾಲಕ.

ಕಗ್ಗಲಹಳ್ಳಿಯ ಪ್ರಕಾಶ ಮತ್ತು ಗೋಪಾಲ ಎಂಬುವರ ಜಮೀನನ್ನು ಸಣ್ಣೇಗೌಡ ಸಮತಟ್ಟ ಮಾಡುತ್ತಿದ್ದರು. ಜಮೀನಿನಲ್ಲಿದ್ದ ದಿಬ್ಬ ಹತ್ತಿಸುವಾಗ ಟ್ರಾಕ್ಟರ್ ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಕೆಳಕ್ಕೆ ಬಿದ್ದ ಸಣ್ಣೇಗೌಡ ಅವರ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡ ಕೂಡಲೇ ಅವರನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕರೆ ತರಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ತರುವುದಕ್ಕೆ ಮುಂಚೆಯೇ ಚಾಲಕ ಮೃತಪಟ್ಟಿರುವುದಾಗಿ ತಿಳಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.