
ರಾಮನಗರ: ತಾಲ್ಲೂಕಿನ ವಿವಿಧೆಡೆ ಹನುಮ ಜಯಂತಿಯನ್ನು ಮಂಗಳವಾರ ಭಕ್ತಿ-ಭಾವದಿಂದ ಆಚರಿಸಲಾಯಿತು. ಆಂಜನೇಯ ದೇವಾಲಯಗಳಿಗೆ ಮಾಡಿದ್ದ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು.
ದೇವರ ಮೂರ್ತಿಗೆ ಅಭಿಷೇಕ ಮಾಡಿ, ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಹನುಮ ಭಕ್ತರು ಆಂಜನೇಯ ದೇವಸ್ಥಾನಗಳಿಗೆ ಶಕ್ತಿ ಸ್ವರೂಪನಾದ ಹನುಮ ದೇವರ ಮೂರ್ತಿಯ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.
ನಗರದ ಅಗ್ರಹಾರ ಬೀದಿಯ ಅಭಯ ಆಂಜನೇಯ, ಸಂಚಾರಿ ಪೊಲೀಸ್ ಠಾಣೆ ಸಮೀಪದ ವೀರಾಂಜನೇಯ, ಎಂ.ಎಚ್. ಕಾಲೇಜು ಬಳಿಯ ಆಂಜನೇಯ, ವಿನಾಯಕ ನಗರದ ಬೃಹತ್ ಆಂಜನೇಯ ಗೋಪುರದ ದೇವಾಲಯ ಸೇರಿ ವಿವಿಧೆಡೆ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.
ಅಭಯ ಆಂಜನೇಯ ದೇವಾಲಯದಲ್ಲಿ ದೇವರ ಮೂರ್ತಿಯನ್ನು ವಿವಿಧ ಬಗೆಯ ಹೂವು, ಚಿನ್ನ ಲೇಪಿತ ಆಭರಣಗಳೊಂದಿಗೆ ಸಿಂಗರಿಸಲಾಗಿತ್ತು. ಸರ್ವಾಲಂಕಾರ ಭೂಷಿತನಾಗಿ ಕಂಗೊಳಿಸಿದ ಹನುಮನ ದರ್ಶನಕ್ಕೆ ಭಕ್ತರು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ಹೂವು, ಹಣ್ಣು, ಈಡುಗಾಯಿ ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಕೋರಿಕೊಂಡರು.
ಕಾಮಣ್ಣನ ಗುಡಿ ಸರ್ಕಲ್‌ನಿಂದ ಅಭಯ ಆಂಜನೇಯ ದೇವಾಲಯದವರೆಗೆ ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಖ್ಯಪ್ರಾಣ ಹನುಮ ಮೂರ್ತಿಗೆ ಆಗಮಿಕರಿಂದ ಹಾಲು, ಮೊಸರು, ಎಳನೀರು, ಚಂದನ, ಜೇನುತುಪ್ಪ, ಕುಂಕುಮ ಅಭಿಷೇಕ ಮಾಡಲಾಯಿತು. ನಗರ ಸೇರಿದಂತೆ ನಾನಾ ಕಡೆಗಳಿಂದ ಬಂದಿದ್ದ ಭಕ್ತರು ಪ್ರಸಾದ ಸ್ವೀಕರಿಸಿದರು.
ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಗಣ್ಯರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಗ್ರಾಮೀಣ ಭಾಗದಲ್ಲಿಯೂ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೇಟೆ ಕುರುಬರಹಳ್ಳಿಯ ಉದ್ಭವ ಆಂಜನೇಯ, ಗೌಡಯ್ಯನದೊಡ್ಡಿಯ ಆಂಜನೇಯ, ಹುಣಸನಹಳ್ಳಿಯ ಹನುಮ, ಹುಣಸೇದೊಡ್ಡಿಯ ಮುತ್ತತ್ತಿರಾಯ ಸೇರಿದಂತೆ ಹಲವು ಹಳ್ಳಿಗಳ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ಹನುಮ ಜಯಂತಿ ಆಚರಿಸಲಾಯಿತು.
ತಾಲ್ಲೂಕಿನ ಬಿಳಗುಂಬ ಗ್ರಾಮದ ವೀರಾಂಜನೇಯ ದೇವಾಲಯದಲ್ಲಿ ಎರಡನೇ ವರ್ಷದ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಅಭಿಷೇಕ, ವಿವಿಧ ಪೂಜೆ, ಕಳಸ ಸ್ಥಾಪನೆ, ಹೋಮ ಮಹಾಮಂಗಳಾರತಿ ಪೂರ್ಣಾಹುತಿ ನಡೆಯಿತು.
ಹನುಮ ಜಯಂತಿಗೆ ವೀರಾಂಜನೇಯ ಸೇವಾ ಸಮಿತಿ, ಬಿಳಗುಂಬ ಗ್ರಾಮದ ಹಿರಿಯರು, ಮುಖಂಡರು, ಯುವ ಮಿತ್ರರು ಹಾಗೂ ಗ್ರಾಮಸ್ಥರು ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.