ADVERTISEMENT

ರಾಮನಗರ: ‘ಆನೆ ಕ್ಯಾಂಪ್’ ಎಂಬ ಶಾಶ್ವತ ಪರಿಹಾರದ ನಿರೀಕ್ಷೆ!

ಕಾಡಾನೆ ನಿಯಂತ್ರಣ: ರೈಲ್ವೆ ಬ್ಯಾರಿಕೇಡ್, ಸೌರಬೇಲಿ ಬಳಿಕ ‘ಆನೆ ಕ್ಯಾಂಪ್’ ಚರ್ಚೆ ಮುನ್ನೆಲೆಗೆ

ಓದೇಶ ಸಕಲೇಶಪುರ
Published 8 ಜನವರಿ 2025, 4:04 IST
Last Updated 8 ಜನವರಿ 2025, 4:04 IST
ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆಗೆ ನಡೆದಿದ್ದ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆಗೆ ನಡೆದಿದ್ದ ಕಾರ್ಯಾಚರಣೆ (ಸಂಗ್ರಹ ಚಿತ್ರ)   

ರಾಮನಗರ: ಕಾಡಾನೆಗಳ ಹಾವಳಿಗೆ ಅರಣ್ಯ ಇಲಾಖೆಯು ಆನೆ ನಿರೋಧಕ ಕಂದಕ, ತಡೆಗೋಡೆ, ರೈಲ್ವೆ ಬ್ಯಾರಿಕೇಡ್, ಸೌರಶಕ್ತಿ ವಿದ್ಯುತ್ ಬೇಲಿ ನಿರ್ಮಾಣದಂತಹ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ಆದರೂ, ತಗ್ಗದ ಹಾವಳಿಗೆ ಇದೀಗ ‘ಆನೆ ಕ್ಯಾಂಪ್’ (ಆನೆ ಶಿಬಿರ) ಸ್ಥಾಪನೆಯ ಪರಿಹಾರದ ಚರ್ಚೆ ಮುನ್ನೆಲೆಗೆ ಬಂದಿದೆ.

ಆನೆ ಕಾಟಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರೈತರು ನಡೆಸಿದ ಪ್ರತಿ ಹೋರಾಟದಲ್ಲೂ ‘ಆನೆ ಕ್ಯಾಂಪ್’ ಪರಿಹಾರವೂ ಕೇಳಿ ಬರುತ್ತಿತ್ತು. ಆದರೆ, ಅಷ್ಟಾಗಿ ಮಾರ್ದನಿಸುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಜಿಲ್ಲೆಯಲ್ಲಿ ಕಾಡಾನೆಗೆ ಮತ್ತೊಂದು ಜೀವಹಾನಿಯಾಗಿ, ಎರಡು ಕಾಡಾನೆಗಳನ್ನು ಸೆರೆ ಹಿಡಿದ ಬಳಿಕ ಮತ್ತೆ ‘ಆನೆ ಕ್ಯಾಂಪ್‌’ ದನಿ ಮೊಳಗಿದೆ.

ಶಾಸಕರ ಆಸಕ್ತಿ: ರೈತರು ಇತ್ತೀಚೆಗೆ ರಾಮನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಚೇರಿ ಎದುರು ನಡೆಸಿದ ಪ್ರತಿಭಟನೆ ಸ್ಥಳಕ್ಕೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಭೇಟಿ ನೀಡಿ, ರೈತರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಅದಾದ ಬಳಿಕ, ತೀವ್ರ ಹಾವಳಿ ಮಾಡುತ್ತಿದ್ದ ‘ಮಖ್ನಾ’ ಮತ್ತು ‘ಟಸ್ಕರ್’ ಪುಂಡಾನೆಗಳನ್ನು ಇಲಾಖೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದೆ.

ADVERTISEMENT

ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಮತ್ತು ರೈತ ಮುಖಂಡರ ಜೊತೆ ಚನ್ನಪಟ್ಟಣದಲ್ಲಿ ಇತ್ತೀಚೆಗೆ ಸಭೆ ನಡೆಸಿರುವ ಯೋಗೇಶ್ವರ್, ಮುತ್ತತ್ತಿ ಬಳಿ ಆನೆ ಕ್ಯಾಂಪ್ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ. ಅದಕ್ಕೆ ಅನುಮತಿ ಕೊಡಿಸುವ ಜವಾಬ್ದಾರಿ ಸಹ ಹೊತ್ತಿದ್ದಾರೆ. ಈ ಬೆಳವಣಿಗೆ ರೈತರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.

ರಾಜ್ಯದಲ್ಲಿವೆ 4 ಶಿಬಿರ: ರಾಜ್ಯದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌, ಕೊಡಗು ಜಿಲ್ಲೆಯ ದುಬಾರೆ, ಮೈಸೂರು ಜಿಲ್ಲೆಯ ನಾಗರಹೊಳೆಯ ಬಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಫನ್ಸೋಲಿಯಲ್ಲಿ ಆನೆ ಶಿಬಿರಗಳಿವೆ. ರಾಜ್ಯದ ಯಾವುದೇ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡರೆ ಈ ಶಿಬಿರಗಳ ಸಾಕಾನೆಗಳ ನೆರವಿನಿಂದ ಪುಂಡಾನೆಗಳನ್ನು ಹಿಡಿದು ಮರಳಿ ಕಾಡಿಗೆ ಬಿಡಲಾಗುತ್ತದೆ.

‘ಕಾವೇರಿ ನದಿ ದಡದ ಮುತ್ತತ್ತಿಯಲ್ಲಿ ಆನೆ ಕ್ಯಾಂಪ್ ಸ್ಥಾಪನೆಯಾದರೆ ರಾಮನಗರವಷ್ಟೇ ಅಕ್ಕಪಕ್ಕದ ಜಿಲ್ಲೆಗಳ ಕಾಡಾನೆಗಳ ಉಪಟಳಕ್ಕೂ ಪರಿಹಾರ ಸಿಗಲಿದೆ. ಆನೆಗಳನ್ನು ಹಿಡಿದು ಕ್ಯಾಂಪ್‌ಗೆ ತಂದು ಪಳಗಿಸುವುದರಿಂದ ನಾಡಿಗೆ ಬರುವ ಆನೆಗಳ ಸಂಖ್ಯೆ ತಗ್ಗಲಿದೆ’ ಎಂದು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 2 ವರ್ಷದ ಹಿಂದೆ 44 ಇದ್ದ ಆನೆಗಳ ಸಂಖ್ಯೆ ಇದೀಗ 25ಕ್ಕೆ ಇಳಿದಿದೆ. ಸದ್ಯ ತೆಂಗಿನಕಲ್ಲಿನಲ್ಲಿ 11, ಸಾತನೂರಿನಲ್ಲಿ 9, ರಾಮನಗರದಲ್ಲಿ 3, ಕನಕಪುರದಲ್ಲಿ 2 ಆನೆಗಳಿವೆ. ಸಿಬ್ಬಂದಿ ಹಾಗೂ ಸೌಕರ್ಯಗಳ ಕೊರತೆಯ ನಡುವೆಯೂ ನಾವು ಕಾಡಾನೆ ನಿಯಂತ್ರಣಕ್ಕೆ ಸತತ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ವರ್ಷಕ್ಕೆ ₹5 ಕೋಟಿ ಬೇಕು: ‘20 ಆನೆಗಳ ಶಿಬಿರ ಸ್ಥಾಪಿಸಿದರೆ ಒಂದು ಆನೆ ನಿರ್ವಹಣೆಗೆ ವರ್ಷಕ್ಕೆ ಅಂದಾಜು ₹20 ಲಕ್ಷ ವೆಚ್ಚವಾಗಬಹುದು. ಆಹಾರ, ವೈದ್ಯಕೀಯ ವೆಚ್ಚ, ಮಾವುತರು, ಕಾವಾಡಿಗಳು, ಇತರ ಸಿಬ್ಬಂದಿ ಸಂಬಳ, ಶಿಬಿರ ನಿರ್ವಹಣೆ ಸೇರಿದಂತೆ ಎಲ್ಲವನ್ನೂ ಸೇರಿಸಿದರೆ ವರ್ಷಕ್ಕೆ ಸುಮಾರು ₹5 ಕೋಟಿ ವೆಚ್ಚವಾಗಬಹುದು. ಹಾಗಾಗಿ, ಕ್ಯಾಂಪ್ ಸ್ಥಾಪನೆ ಕಾಡಾನೆ ಹಾವಳಿಗೆ ಅತ್ಯುತ್ತಮ ಪರಿಹಾರವಾಗಲಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ರಾಮನಗರದ ಮಾವಿನ ತೋಟವೊಂದರಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ (ಸಂಗ್ರಹ ಚಿತ್ರ)
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಅಷ್ಟಾಗಿ ಇಲ್ಲ. ಬ್ಯಾರಿಕೇಡ್ ಸೌರಬೇಲಿ ಜೊತೆಗೆ ಡ್ರೋನ್ ನಿಗಾ ಇಡಲಾಗುತ್ತಿದೆ. ಆನೆಗಳು ಉದ್ಯಾನ ವ್ಯಾಪ್ತಿ ಬಿಟ್ಟು ಬಂದಾಗ ಕಾರ್ಯಾಚರಣೆ ನಡೆಸಿ ಒಳಕ್ಕೆ ಓಡಿಸಲಾಗುತ್ತಿದೆ. ಕಾವೇರಿ ವನ್ಯಜೀವಿಧಾಮದಲ್ಲೂ ಇಂತಹ ಕ್ರಮಗಳಾಗಬೇಕು
ಎಂ. ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮನಗರ
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಮುತ್ತತ್ತಿಯಲ್ಲಿ ಆನೆ ಕ್ಯಾಂಪ್ ಸ್ಥಾಪನೆಯಾದರೆ ಕಾಡಾನೆಗಳ ನಿಯಂತ್ರಣದ ಜೊತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ. ಇಲಾಖೆಗೂ ಆದಾಯ ಬರುತ್ತದೆ. ಚನ್ನಪಟ್ಟಣ ಶಾಸಕರು ಸಹ ಇತ್ತೀಚೆಗೆ ಸಭೆ ಕರೆದು ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ
ನಾಗೇಂದ್ರ ಪ್ರಸಾದ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾವೇರಿ ವನ್ಯಜೀವಿಧಾಮ ಕನಕಪುರ

‘ಪರಿಹಾರದ ಹಣ ಉಳಿಸಿ ಟೂರಿಸಂ ವೃದ್ಧಿಸುವ ಕ್ಯಾಂಪ್’

‘ಮುತ್ತತ್ತಿಯಲ್ಲಿ ಆನೆ ಕ್ಯಾಂಪ್ ಸ್ಥಾಪನೆಯಾದರೆ ಸರ್ಕಾರ ಪರಿಹಾರಕ್ಕಾಗಿ ಪಾವತಿಸುವ ಹಣ ಉಳಿಯುವ ಜೊತೆಗೆ ಪ್ರವಾಸೋದ್ಯಮ ಮತ್ತಷ್ಟು ವೃದ್ಧಿಯಾಗುತ್ತದೆ. 20 ಆನೆಗಳ ಸಾಮರ್ಥ್ಯದ ಕ್ಯಾಂಪ್‌ ನಿರ್ವಹಣೆಗೆ ವರ್ಷಕ್ಕೆ ₹5 ಕೋಟಿ ವೆಚ್ಚವಾಗುತ್ತದೆ. ನಾವೀಗ ಜೀವಹಾನಿ ಹಾಗೂ ಬೆಳೆಹಾನಿಗೆ ನೀಡುತ್ತಿರುವ ಪರಿಹಾರ ಸಹ ಕೋಟಿಗಳನ್ನು ದಾಟುತ್ತಿದೆ. ಆನೆ ಸೆರೆಗೂ ಹೆಚ್ಚು ಖರ್ಚಾಗುತ್ತಿದೆ. ಕ್ಯಾಂಪ್‌ನಿಂದ ಇದು ಗಣನೀಯವಾಗಿ ತಗ್ಗಲಿದೆ. ಆನೆಗಳನ್ನು ನೋಡುವುದಕ್ಕಾಗಿಯೇ ಮುತ್ತತ್ತಿಗೆ ಬರುವವರ ಸಂಖ್ಯೆ ಹೆಚ್ಚಲಿದೆ. ಆನೆ ಸವಾರಿ ಸೇರಿದಂತೆ ವಿವಿಧ ಚಟುವಟಿಕೆ ಕೈಗೊಂಡು ಪ್ರವಾಸಿಗರನ್ನು ಸೆಳೆಯಬಹುದು. ಇದರಿಂದ ಇಲಾಖೆಗೆ ಆದಾಯವೂ ಬರಲಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಟ ಹೆಚ್ಚಲು ವನ್ಯಜೀವಿಧಾಮವೂ ಕಾರಣ’

‘ಸರ್ಕಾರ 2012ರಲ್ಲಿ ಕಾವೇರಿ ವನ್ಯಜೀವಿಧಾಮ ಘೋಷಿಸಿದ ಬಳಿಕವೇ ಕಾಡಾನೆಗಳ ಕಾಟ ಹೆಚ್ಚಾಗಿದೆ. ಹಿಂದೆ ಕಾಡಂಚಿನ ಗ್ರಾಮಸ್ಥರು ತಮ್ಮ ದನ ಕುರಿಗಳನ್ನು ಮೇಯಲು ಕಾಡಿಗೆ ಬಿಡುತ್ತಿದ್ದರು. ಕನಿಷ್ಠ 1–2 ಕಿ.ಮೀ. ಕಾಡಿನಲ್ಲಿ ಸಂಚರಿಸುತ್ತಿದ್ದ ಸಾಕುಪ್ರಾಣಿಗಳಿಂದಾಗಿ ಕಾಡಾನೆಗಳು ಅರಣ್ಯ ದಾಟಿ ನಾಡಿಗೆ ಬರುತ್ತಿರಲಿಲ್ಲ. ವನ್ಯಜೀವಿಧಾಮ ಘೋಷಣೆಯಾದ ಬಳಿಕ ಸಾಕುಪ್ರಾಣಿಗಳನ್ನು ಕಾಡಿಗೆ ಬಿಡದಂತೆ ನಿಷೇಧಿಸಲಾಗಿದೆ. ಇದರಿಂದಾಗಿ ಅರಣ್ಯದಂಚಿನವರೆಗೆ ಬರುತ್ತಿರುವ ಕಾಡಾನೆಗಳಿಗೆ ಹೊರಗಿರುವ ರೈತರ ಜಮೀನಿನಲ್ಲಿರುವ ಬೆಳೆಗಳು ಕಣ್ಣಿಗೆ ಬೀಳುತ್ತಿವೆ. ಹಾಗಾಗಿ ಜಮೀನಿಗೆ ಬಂದು ಬೆಳೆ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇಲಾಖೆ ಈ ವಾಸ್ತವವನ್ನು ಅರಿತುಕೊಂಡು ಪರಿಹಾರ ಕಂಡುಕೊಳ್ಳಬೇಕು’ ಎಂದು ಚನ್ನಪಟ್ಟಣದ ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ಜನಪ್ರತಿನಿಧಿಗಳು ಏನಂತಾರೆ?

‘ಆನೆ ಕ್ಯಾಂಪ್‌ ಅಂತಿಮ ಪರಿಹಾರ’ ಅರಣ್ಯ ಇಲಾಖೆ ಈಗಾಗಲೇ ರೈಲ್ವೆ ಬ್ಯಾರಿಕೇಡ್ ಸೌರಬೇಲಿ ನಿರ್ಮಿಸಿ ಕಾಡಾನೆ ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಆನೆ ನಿರೋಧಕ ಕಂದಕ ಹಾಗೂ ತಡೆಗೋಡೆ ನಿರ್ಮಾಣವಾಗಬೇಕು. ಇದೆಲ್ಲವನ್ನೂ ಮೀರಿ ಬರುವ ಆನೆಗಳನ್ನು ಹಿಡಿದು ಪಳಗಿಸಲು ಆನೆ ಕ್ಯಾಂಪ್ ಅಗತ್ಯವಿದೆ. ಈ ಕುರಿತು ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಸಭೆ ನಡೆಸಿ ಕ್ಯಾಂಪ್‌ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಇದೇ ತಿಂಗಳು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲೆಗೆ ಭೇಟಿ ನೀಡಲಿದ್ದು ಅವರೊಂದಿಗೆ ವಿಷಯ ಪ್ರಸ್ತಾಪಿಸಿ ಆನೆ ಕ್ಯಾಂಪ್‌ಗೆ ಅನುಮತಿ ಪಡೆಯಲಾಗುವುದು.

– ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಶಾಸಕ

‘ಕಾಡಾನೆ ಸಂತತಿ ನಿಯಂತ್ರಣ ಅಗತ್ಯ’ ರಾಜ್ಯದಲ್ಲಿ ಈಗ 6349 ಆನೆಗಳಿವೆ. ಹೆಚ್ಚಾಗಿರುವ ಇವುಗಳ ಸಂತತಿ ನಿಯಂತ್ರಿಸಲು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಅದಕ್ಕಾಗಿ ಆನೆ ಕ್ಯಾಂಪ್ ಅಗತ್ಯವಿದೆ. ಕಾಡಾನೆ ಕಾಟದಿಂದ ರೈತರು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಂದ ವಿಮುಖರಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವು–ನೋವಿಗೆ ಒಳಗಾದ ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಕುರಿತು ಅಧಿವೇಶನದಲ್ಲೂ ಪ್ರಸ್ತಾಪಿಸಿ ಸಚಿವರ ಗಮನ ಸೆಳೆದಿರುವೆ. ಜಿಲ್ಲೆಯಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಂದಾಗಿ ರೈಲ್ವೆ ಬ್ಯಾರಿಕೇಡ್ ಸೌರಬೇಲಿ ನಿರ್ಮಾಣವಾಗಿ ಕಾಡಾನೆ ಕಾಟ ಒಂದಿಷ್ಟು ನಿಯಂತ್ರಣಕ್ಕೆ ಬಂದಿದೆ. ಆದರೂ ಸಾವು–ನೋವು ತಪ್ಪುತ್ತಿಲ್ಲ. ಆನೆ ಕ್ಯಾಂಪ್ ಜೊತೆಗೆ ಆನೆ ನಿರೋಧಕ ಕಂದಕ ಹೆಚ್ಚಿಸಿ ಬ್ಯಾರಿಕೇಡ್‌ ಅನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.

– ಎಸ್. ರವಿ ವಿಧಾನ ಪರಿಷತ್ ಸದಸ್ಯ ಕನಕಪುರ

‘ಗಡಿಯುದ್ದಕ್ಕೂ ಬ್ಯಾರಿಕೇಡ್‌ ಬೇಕು’ ಅರಣ್ಯದ ಗಡಿಯುದ್ದಕ್ಕೂ ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಬೇಕು. ಅದಕ್ಕಾಗಿ ₹100 ಕೋಟಿ ಬಿಡುಗಡೆ ಮಾಡುವಂತೆ ಅರಣ್ಯ ಸಚಿವರನ್ನು ನಾನು ಮಾಡಿ ಪತ್ರ ಕೂಡ ಬರೆದಿದ್ದೇನೆ. ಪ್ರಾಣಹಾನಿ ಸಂಭವಿಸಿದಾಗ ಸಿಬ್ಬಂದಿ ಹಾಗೂ ರೈತರಿಗೆ ಪರಿಹಾರ ವಿಷಯದಲ್ಲಿ ತಾರತಮ್ಯ ಮಾಡದೆ ಸಮಾನವಾಗಿ ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಬ್ಯಾರಿಕೇಡ್ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ಅನುದಾನ ಕೊಡುವಂತೆ ಕೇಂದ್ರ ಪರಿಸರ ಖಾತೆ ಸಚಿವ ಭೂಪೆಂದರ್ ಯಾದವ್ ಅವರಿಗೆ ಮನವಿ ಮಾಡಿದ್ದೇನೆ.

– ಡಾ. ಸಿ.ಎನ್. ಮಂಜುನಾಥ್ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.