ADVERTISEMENT

258 ಎಕರೆಯಲ್ಲಿ ವಸತಿ ರಹಿತರಿಗೆ ಸೂರು: ಶಾಸಕ ಎಚ್.ಎ. ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:21 IST
Last Updated 20 ಆಗಸ್ಟ್ 2025, 2:21 IST
<div class="paragraphs"><p>ರಾಮನಗರ ತಾಲ್ಲೂಕಿನ ದೊಡ್ಡಮಣ್ಣುಗುಡ್ಡೆ ಪ್ರದೇಶಕ್ಕೆ ಇತ್ತೀಚೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಅಲ್ಲಿನ ವಸತಿ ಕಟ್ಟಡಗಳನ್ನು ಪರಿಶೀಲಿಸಿದರು. </p></div>

ರಾಮನಗರ ತಾಲ್ಲೂಕಿನ ದೊಡ್ಡಮಣ್ಣುಗುಡ್ಡೆ ಪ್ರದೇಶಕ್ಕೆ ಇತ್ತೀಚೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಅಲ್ಲಿನ ವಸತಿ ಕಟ್ಟಡಗಳನ್ನು ಪರಿಶೀಲಿಸಿದರು.

   

ರಾಮನಗರ: ‘ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದಲೂ ಬಡವರಿಗೆ ಸೂರು ಒದಗಿಸುವ ಕೆಲಸವಾಗಿಲ್ಲ. ಹಿಂದೆ ಸಿ.ಎಂ. ಲಿಂಗಪ್ಪ ಅವರು ಶಾಸಕರಾಗಿದ್ದಾಗ ನಿವೇಶನ ಹಂಚಿದ್ದನ್ನು ಬಿಟ್ಟರೆ ಮತ್ತೆ ನೀಡಿಲ್ಲ. ಹಾಗಾಗಿ, ಕ್ಷೇತ್ರದ ವಸತಿ ರಹಿತರಿಗೆ ಸೂರು ಒದಗಿಸುವ ಸಲುವಾಗಿ 258 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ತಾಲ್ಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೊಡ್ಡಮಣ್ಣುಗುಡ್ಡೆ ಪ್ರದೇಶದಲ್ಲಿ ಹಿಂದೆ ನಿರ್ಮಿಸಿರುವ ವಸತಿ ಕಟ್ಟಡಗಳನ್ನು ಇತ್ತೀಚೆಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾತನಾಡಿದ ಅವರು, ‘ನಾನು ಶಾಸಕನಾದ ಬಳಿಕ ವಸತಿ ವ್ಯವಸ್ಥೆ ಇಲ್ಲದವರಿಗೆ ವಸತಿ ಒದಗಿಸುವ ಸಲುವಾಗಿ 258 ಎಕರೆ ಜಾಗ ಗುರುತಿಸಲಾಗಿದೆ. ಈ ಪೈಕಿ 196 ಎಕರೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ವಸತಿ ರಹಿತರಿಗೆ ವಿತರಿಸುವುದಕ್ಕಾಗಿ ದೊಡ್ಡಮಣ್ಣುಗುಡ್ಡೆಯಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳು ಪಾಳುಬಿದ್ದಿವೆ. ಈ ಕಟ್ಟಡಗಳ ಕಿಟಕಿ, ಬಾಗಿಲು, ಸುಣ್ಣ, ಬಣ್ಣ, ವಿದ್ಯುತ್, ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಲು ಸರ್ಕಾರ ₹3 ಕೋಟಿ ಹಣ ನೀಡಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಕಾರದಿಂದ ಇದು ಸಾಧ್ಯವಾಯಿತು’ ಎಂದು ತಿಳಿಸಿದರು.

‘ದೊಡ್ಡಮಣ್ಣುಗುಡ್ಡೆ ದೊಡ್ಡಿ ಸರ್ವೆ ನಂಬರ್‌ಗಳಲ್ಲಿ ಮುಂಚೆ ರೈತರ ಬೇರೆ ಬೇರೆ ನಂಬರ್ ಬರುತ್ತಿದ್ದವು. ಆದರೆ, ಈಗ ಪೂರ್ಣವಾಗಿ ಎಲ್ಲಾ ಜಮೀನನ್ನು ಸರ್ವೆ ನಂ. 1 ಎಂದು ನಮೂದಿಸಲಾಗಿದೆ. ಇದರಿಂದ ರೈತರಿಗೆ ಸಮಸ್ಯೆ ಉಂಟಾಗಿದೆ ಇದನ್ನು ಪರಿಹರಿಸಿ ಕೊಡಬೇಕು’ ಎಂದು ಸ್ಥಳೀಯ ರೈತರು ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡರು.

ಶಾಸಕರಿಗೆ ಶಾಕ್: ವಸತಿ ಕಟ್ಟಡಗಳನ್ನು ವೀಕ್ಷಿಸಿದ ಶಾಸಕ ಹುಸೇನ್ ಶಾಕ್ ಆದರು. ಮಳೆ–ಗಾಳೆಯಿಂದಾಗಿ ಪಾಳು ಬಿದ್ದ ಕಟ್ಟಡಗಳಲ್ಲಿ ಗಬ್ಬು ವಾಸನೆ ಸೂಸುತ್ತಿದ್ದವು. ಮದ್ಯದ ಬಾಟಲಿಗಳು, ಪಾಕೆಟ್‌ಗಳು ದರ್ಶನವಾಯಿತು. ಆದರೂ, ಶಾಸಕರು ಕಟ್ಟಡಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನು ಪರಿಶೀಲಿಸಿದರು.

ತಹಶೀಲ್ದಾರ್ ತೇಜಸ್ವಿನಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‍ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಪೂರ್ಣಿಮಾ, ನಗರಸಭೆ ಪೌರಾಯುಕ್ತ ಡಾ. ಜಯಣ್ಣ, ಬಿಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್, ಪಿಡಿಒ ಮಹೇಶ್, ರಾಜಸ್ವ ನಿರೀಕ್ಷಕ ಚಂದ್ರಶೇಖರ್, ಮುಖಂಡರಾದ ಗುರುಪ್ರಸಾದ್, ಕೆ. ರವಿ, ಕೆಂಚೇಗೌಡ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.