ಕನಕಪುರ: ಅಚ್ಚಲು ಸರ್ಕಾರಿ ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ ಮತ್ತು ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಈ ವೇಳೆ ಅಚ್ಚಲು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಣುಕಾಂಬ ಮಾತನಾಡಿ, ಮಕ್ಕಳು ಕ್ರೀಡೆ ಜೊತೆಗೆ ಓದಿನಲ್ಲೂ ಉತ್ತಮ ಸಾಧನೆ ಮಾಡಿರುವುದು ಸಂತಸದ ವಿಷಯ. ಅಚ್ಚಲು ಶಾಲೆ ಕ್ರೀಡೆಗೆ ಹೆಸರಾಗಿದೆ. ಸರ್ಕಾರಿ ಶಾಲೆಯಾದರೂ ತಾಲ್ಲೂಕಿನಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದರು.
ಪ್ರಸಕ್ತ ಸಾಲಿನಲ್ಲಿ ರಾಷ್ಟ್ರ, ರಾಜ್ಯಮಟ್ಟದ ವಾಲಿಬಾಲ್ ತಂಡದ ಆಟಗಾರ್ತಿಯರು ನಮ್ಮ ಶಾಲೆಯವರೇ ಆಗಿದ್ದು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಕ್ರೀಡಾಪಟು ಶ್ರೀಕಾಂತ್ ಮಾತನಾಡಿ, ಶ್ರದ್ಧೆ ಮತ್ತು ಬದ್ಧತೆಯಿಂದ ನಾವು ಅಭ್ಯಾಸ ಮಾಡಿದರೆ ಖಂಡಿತವಾಗಿ ನಮ್ಮ ಗುರಿ ತಲುಪುತ್ತೇವೆ. ಓದಿನಲ್ಲಾಗಲಿ ಅಥವಾ ಕ್ರೀಡೆಯಲ್ಲಾಗಲಿ ನಮ್ಮ ಏಕಾಗ್ರತೆ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಸತತವಾಗಿ 12 ವರ್ಷಗಳಿಂದ ಅಚ್ಚಲು ಹಾಗೂ ಸುತ್ತಮುತ್ತಲ ಶಾಲಾ ಮಕ್ಕಳಿಗೆ ಅಚ್ಚಲು ಶಾಲೆಯಲ್ಲಿ ಏರ್ಪಡಿಸುತ್ತಿರುವ ಕ್ರೀಡಾ ಬೇಸಿಗೆ ಶಿಬಿರದಿಂದ ನೂರಾರು ಮಕ್ಕಳು ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಹೆಸರು ಮಾಡುವಂತಾಗಿದೆ ಎಂದರು.
ಪೊಲೀಸ್ ಇಲಾಖೆಯ ಗೋವಿಂದರಾಜು, ಶಿವಕುಮಾರ್, ನಂದೀಶ್, ಸತೀಶ್.ಕೆ.ಆರ್, ನಾಗರಾಜು.ಎಸ್, ಶಿಬಿರಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.