ರಾಮನಗರ: ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ಭೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವ ರೈತರು, ಭೂ ಸ್ವಾಧೀನಕ್ಕಾಗಿ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಕಾರ್ಯಕ್ಕೆ ಹೋಗುತ್ತಿದ್ದ ಅಧಿಕಾರಿಗಳ ತಂಡವನ್ನು ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳಿದ್ದ ವಾಹನವನ್ನು ಅಡ್ಡಗಟ್ಟಿದ ಧರಣಿ ನಿರತರು, ‘ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಯಾವುದೇ ಕಾರಣಕ್ಕೂ ನಾವು ಯೋಜನೆಗೆ ನಮ್ಮ ಭೂಮಿಯನ್ನು ಕೊಡುವುದಿಲ್ಲ. ಅಧಿಕಾರಿಗಳು ರೈತರ ಒಪ್ಪಿಗೆ ಇಲ್ಲದಿದ್ದರೂ, ಜೆಎಂಸಿ ಕಾರ್ಯ ನಡೆಸುತ್ತಿದ್ದಾರೆ’ ಎಂದು ದೂರಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಅವರು ರೈತರ ಪ್ರತಿಭಟನೆಗೆ ಸಾಥ್ ನೀಡಿದರು. ‘ಯೋಜನೆ ಅನುಷ್ಠಾನಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಭೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ರೈತರ ಅನುಮತಿ ಇಲ್ಲದಿದ್ದರೂ, ಯಾವುದೇ ನೋಟಿಸ್ ನೀಡದೆ ಭೂ ಸ್ವಾಧೀನಕ್ಕೆ ಸರ್ವೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮುಂದೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವೊಬ್ಬ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ರೈತರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ಆಲಿಸಿಲ್ಲ. ಪೊಲೀಸ್ ಬಲದೊಂದಿಗೆ ಬಲವಂತವಾಗಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ರೈತರೊಂದಿಗೆ ನಮ್ಮ ಪಕ್ಷವಿದ್ದು, ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ. ಈ ಕುರಿತು, ಎಂತಹ ಹೋರಾಟಕ್ಕೂ ನಾವು ಸಿದ್ಧ’ ಎಂದರು.
ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ರೈತರು ರಸ್ತೆ ತಡೆ ನಿಲ್ಲಿಸಿದರು. ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದರು. ಭೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಇಟ್ಟಮಡು ಗೋಪಾಲ್, ಶ್ರೀನಿವಾಸ್ ರೆಡ್ಡಿ, ಮಂಡಲಹಳ್ಳಿ ನಾಗರಾಜು, ಹೊಸೂರು ಹರೀಶ್, ರವೀಂದ್ರ ನಾಥ ರೆಡ್ಡಿ, ಕೃಷ್ಣ, ರಾಧಕೃಷ್ಣ, ನಾಗೇಶ್ ಕುಮಾರ್, ಮಂಜುನಾಥ್, ಹೇಮಂತ್, ಶ್ರೀಧರ್ ಹಾಗೂ ಇತರರು ಇದ್ದರು.
100 ಮಂದಿ ವಿರುದ್ಧ ಪ್ರಕರಣ
ಜೆಎಂಸಿ ಕೆಲಸಕ್ಕೆ ತೆರಳುತ್ತಿದ್ದ ಅಧಿಕಾರಿಗಳಿದ್ದ ಎರಡು ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ ನಿಂದಿಸಿ ವಾಹನದ ಗಾಜು ಒಡೆದಿರುವ ಆರೋಪದ ಮೇಲೆ ಧರಣಿನಿರತ 100 ರೈತರ ಮೇಲೆ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಎಂಜಿನಿಯರ್‌ಗಳಾದ ಹೇಮಂತ್ ಚಾಲಕ ಮೊಹಮ್ಮದ್ ತನ್ವೀರ್ ಹಾಗೂ ಅಧಿಕಾರಿ ಐಶ್ವರ್ಯ ಅವರಿಗೆ ಸಣ್ಣ ಗಾಯಗಳಾಗಿವೆ. ಗಾಯಾಳುಗಳು ಸೇರಿದಂತೆ ಜೆಎಂಸಿಗಾಗಿ ಸಯ್ಯದ್ ಸಿಬತ್ ಅಧಿಕಾರಿಗಳಾದ ಐಶ್ವರ್ಯ ಸಂಜಯ್ ರಾಮು ಹರ್ಷಿತಾ ರಕ್ಷಿತ್ ಮಲ್ಲೇಶ್ ಸೌಮ್ಯ ಶ್ರೀಕಾಂತ ನರಸಿಂಹಮೂರ್ತಿ ಲೋಕೇಶ್ ಹಾಗೂ ಪೊಲೀಸ್ ನವೀನ್ ಪ್ರತ್ಯೇಕವಾಗಿ ಎರಡು ವಾಹನಗಳಲ್ಲಿ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು ಉದ್ರಿಕ್ರ ರೈತರು ಹಲ್ಲೆ ನಡೆಸಿ ವಾಹನದ ಗಾಜು ಒಡೆದಿದ್ದಾರೆ. ಚಾಲಕ ತನ್ವೀರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.