ADVERTISEMENT

ರೆಕಾರ್ಡ್ ರೂಂಗೆ ಡಿಜಿಟಲ್ ಸ್ಪರ್ಶ: ಜಿಲ್ಲಾಧಿಕಾರಿ ಯಶವಂತ್ ಗುರುಕರ್

ಗ್ರಾಮ ಆಡಳಿತಾಧಿಕಾರಿಗಳಿಗೆ ಸ್ಥಳ ನಿಯೋಜನೆ; ಕೋರ್ಟ್ ಪ್ರಕರಣಗಳ ತ್ವರಿತ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:05 IST
Last Updated 9 ಜುಲೈ 2025, 2:05 IST
ರಾಮನಗರದಲ್ಲಿರುವ ಡಿ.ಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿದರು
ರಾಮನಗರದಲ್ಲಿರುವ ಡಿ.ಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿದರು   

ರಾಮನಗರ: ‘ಕಂದಾಯ ಇಲಾಖೆಯು ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ. ಅದರಂತೆ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿರುವ ರೆಕಾರ್ಡ್ ರೂಂಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಜನರು ಇನ್ನು ಮುಂದೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಡಿಜಿಟಲ್ ದಾಖಲೆಗಳನ್ನು ಪಡೆಯಬಹುದಾಗಿದೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.

‘ಐದು ತಾಲ್ಲೂಕುಗಳ ಪೈಕಿ ಮಾಗಡಿಯಲ್ಲಿ ದಾಖಲೆಗಳ ಡಿಜಿಟಲೀಕರಣ ಕಾರ್ಯ ಶೇ 100ರಷ್ಟು ಪೂರ್ಣಗೊಂಡಿದೆ. ಉಳಿದ ತಾಲ್ಲೂಕುಗಳಲ್ಲೂ ಡಿಜಿಟಲೀಕರಣ ನಡೆಯುತ್ತಿದೆ. ಸಾರ್ವಜನಿಕರು ಆನ್‌ಲೈನ್ ಲಿಂಕ್: https://recordroom.karnataka.gov.in/service4 ಮೂಲಕ ಅರ್ಜಿ ಸಲ್ಲಿಸಿ 7 ದಿನದೊಳಗೆ ಡಿಜಿಟಲ್ ದಾಖಲೆ ಪಡೆಯಬಹುದು’ ಎಂದು ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳ ನಿಯೋಜನೆ: ‘ಜಿಲ್ಲೆಯಲ್ಲಿರುವ 245 ವೃತ್ತಗಳ ಪೈಕಿ 168 ವೃತ್ತಗಳಿಗೆ ಗ್ರಾಮ ಆಡಳಿತಾಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿ, ನಾಡಕಚೇರಿ ಅಥವಾ ಇತರ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಅವರಿಗೆ ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ’ ಎಂದರು.

‘ಗ್ರಾಮ ಆಡಳಿತಾಧಿಕಾರಿಗಳು ಜನರ ಕೈಗೆ ಸಿಗುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದರಿಂದ ಅವರು ಕರ್ತವ್ಯ ನಿರ್ವಹಿಸುವ ಸ್ಥಳದ ಮಾಹಿತಿ, ಕಚೇರಿಯಲ್ಲಿ ಲಭ್ಯವಿರುವ ಸಮಯ ಹಾಗೂ ಸಂಪರ್ಕ ಸಂಖ್ಯೆಯನ್ನು ಸಹ ಕಚೇರಿ ಎದುರು ಪ್ರಕಟಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಕಚೇರಿಗೆ ಭೇಟಿ ಮಾಡಬಹುದು’ ಎಂದು ಸಲಹೆ ನೀಡಿದರು.

ADVERTISEMENT

1,791 ಪ್ರಕರಣ ಮುಕ್ತಾಯ: ‘ಜಿಲ್ಲೆಯಲ್ಲಿರುವ 2,097 ದರಖಾಸ್ತು ಪೋಡಿ ಪ್ರಕರಣಗಳಲ್ಲಿ 1ರಿಂದ 5 ನಮೂನೆಗೆ ಬರುವ 1,791 ಪ್ರಕರಣಗಳು ಮುಕ್ತಾಯವಾಗಿವೆ. 44 ಹೊಸ ಕಂದಾಯ ಗ್ರಾಮಗಳಲ್ಲಿ 2,093 ಫಲಾನುಭವಿಗಳಿದ್ದು 1,530 ಮಂದಿ ನೋಂದಣಿಯಾಗಿದ್ದಾರೆ. ಆ ಪೈಕಿ 1,384 ಫಲಾನುಭವಿಗಳು ಇ-ಖಾತೆ ಪಡೆದಿದ್ದಾರೆ. ಉಳಿದವರಿಗೂ ಖಾತೆ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದರು.

‘ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಜಿಲ್ಲೆಯಾದ್ಯಂತ 365 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಅದರಲ್ಲಿ 14 ಸಾವಿರ ಜನರಿಗೆ ನಿವೇಶನಗಳನ್ನು ಹಂಚಬಹುದಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ನಾಲ್ಕು ಕೆರೆಗಳಲ್ಲಿ ಬೋಟಿಂಗ್ ಸೇರಿದಂತೆ ಇತರ ಚಟುವಟಿಕೆಗಳಿಗೆ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.

22 ಕೆಪಿಎಸ್ ಶಾಲೆ: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ 22 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಭರದಿಂದ ಸಾಗಿದೆ. ಈ ಪೈಕಿ 8 ಶಾಲೆಗಳನ್ನು ಟೊಯೊಟಾ ಕಂಪನಿ ತಮ್ಮ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸುತ್ತಿದ್ದಾರೆ. ಉಳಿದ ಶಾಲೆಗಳನ್ನು ಬೇರೆ ಕಂಪನಿಯವರು ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಈಗಾಗಲೇ ನಾಲ್ಕೈದು ಶಾಲೆಗಳ ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಮೂರು ವರ್ಷದೊಳಗೆ ಎಲ್ಲಾ ಶಾಲೆಗಳು ಕಾರ್ಯಾರಂಭಿಸಲಿವೆ. ಇಲ್ಲಿ ಸುಮಾರು 18 ಸಾವಿರ ವಿದ್ಯಾರ್ಥಿಗಳಿಗೆ ಒಂದೇ ಸೂರಿನಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಅತ್ಯುತ್ತಮ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್ ಚಂದ್ರಯ್ಯ ಇದ್ದರು.

ಪ್ರಕರಣಗಳ ತ್ವರಿತ ವಿಲೇವಾರಿ

‘ಜಿಲ್ಲಾಧಿಕಾರಿ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಕೋರ್ಟ್‌ಗಳಲ್ಲಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಒತ್ತು ನೀಡಲಾಗಿದೆ. ಡಿ.ಸಿ ಕಚೇರಿ ಕೋರ್ಟ್‌ನಲ್ಲಿ ಕಳೆದ ವರ್ಷ 501 ಇದ್ದ ಪ್ರಕರಣಗಳ ಸಂಖ್ಯೆ ಈಗ 51ಕ್ಕೆ ಇಳಿದಿದೆ. ಅಂದರೆ ಶೇ 91ರಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಉಪ ವಿಭಾಗಾಧಿಕಾರಿ ಕೋರ್ಟ್‌ನಲ್ಲಿದ್ದ 4478 ಪ್ರಕರಣಗಳ ಪೈಕಿ 2947 ವಿಲೇವಾರಿಯಾಗಿವೆ. ಸದ್ಯ 1531 ಮಾತ್ರ ಬಾಕಿ ಉಳಿದಿದ್ದು ಶೇ 61ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯ ಐದೂ ತಾಲ್ಲೂಕುಗಳ ತಹಶೀಲ್ದಾರ್‌ಗಳ ಕೋರ್ಟ್‌ನಲ್ಲಿರುವ ಒಟ್ಟು 3698 ಪ್ರಕರಣಗಳಲ್ಲಿ 3011 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 687 ಮಾತ್ರ ಬಾಕಿ ಇವೆ’ ಎಂದು ಗುರುಕರ್ ತಿಳಿಸಿದರು.

‘ಪ್ರಜಾವಾಣಿ’ ವರದಿಗೆ ಮೆಚ್ಚುಗೆ

ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನಲ್ಲಿ ಡಾ. ಎಚ್.ಎಂ. ವೆಂಕಟಪ್ಪ ಅವರು ತಾವು ಓದಿದ ಸರ್ಕಾರಿ ಶಾಲೆಗೆ ₹14 ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಿ ಕೊಟ್ಟಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಮಂಗಳವಾರ ಪ್ರಕಟವಾಗಿರುವ ವರದಿಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ತಮ್ಮ ಕಣ್ವ ಫೌಂಡೇಷನ್ ಮೂಲಕ ವೆಂಕಟಪ್ಪ ಅವರು ತಮ್ಮ ತಂದೆ–ತಾಯಿ ಹೆಸರಿನಲ್ಲಿ ನಿರ್ಮಿಸಿರುವ ‘ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಸ್ಕೂಲ್‌’ ಸ್ಪೂರ್ತಿದಾಯಕವಾಗಿದೆ. ಪತ್ರಿಕಾ ವರದಿ ಓದಿ ಮತ್ತು ವಿಡಿಯೊ ವೀಕ್ಷಿಸಿ ದೇಶ–ವಿದೇಶಗಳಲ್ಲಿರುವ ನನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದೇನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.