ರಾಮನಗರ: ಇ–ಖಾತೆ ನೀಡುವಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿರುವ ನಗರಸಭೆಯು, ವಾರ್ಡ್‌ಗಳ ಮಟ್ಟದಲ್ಲಿ ಬುಧವಾರದಿಂದ ಇ–ಖಾತೆ ಮತ್ತು ಬಿ–ಖಾತೆ ಅಭಿಯಾನವನ್ನು ಪ್ರಾಯೋಗಿಕವಾಗಿ ಹಮ್ಮಿಕೊಂಡಿದೆ. ಅಭಿಯಾನದಲ್ಲಿ ಅರ್ಜಿದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಸ್ಥಳದಲ್ಲೇ ಇ–ಖಾತೆ ಪಡೆಯಬಹುದಾಗಿದೆ.
ಈ ಕುರಿತು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಮೊದಲ ಹಂತದಲ್ಲಿ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ 1ನೇ ವಾರ್ಡ್ ಚಾಮುಂಡಿಪುರ ಮತ್ತು 2ನೇ ವಾರ್ಡ್ ವಿನಾಯಕನಗರ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ’ ಎಂದರು.
‘ಸ್ಥಳದಲ್ಲಿ ಕಂದಾಯ ವಿಭಾಗದ ಸಿಬ್ಬಂದಿ ಹಾಜರಿದ್ದು, ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ ಇ– ಖಾತೆ ಸೃಜಿಸಲಿದ್ದಾರೆ. ನಗರದ 31 ವಾರ್ಡ್‌ಗಳಲ್ಲೂ ಹಂತಹಂತವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಜುಲೈ 28ರಂದು 3, 4 ಹಾಗೂ 5ನೇ ವಾರ್ಡ್‌ನ ಗಾಂಧಿನಗರ, ಕಾಯಿಸೊಪ್ಪಿನ ಬಿದಿ, ಮೇದಾರ ಬೀದಿ, ಶೆಟ್ಟಿ ಬಲಜಿಗರ ಬೀದಿ ವ್ಯಾಪ್ತಿಗೆ ಸಂಬಂಧಿಸಿದಂತೆ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನದದ ಆವರಣದಲ್ಲಿ ಅಭಿಯಾನ ಜರುಗಲಿದೆ’ ಎಂದು ಹೇಳಿದರು.
‘ಜುಲೈ 30ರಂದು ವಾರ್ಡ್ ಸಂಖ್ಯೆ 6, 7, 8 ಹಾಗೂ 9ರ ಚಾಮುಂಡೇಶ್ವರಿ ಬಡಾವಣೆ, ಅಗ್ರಹಾರ ಹಾಗೂ ಅರಳೇಪೇಟೆ ವ್ಯಾಪ್ತಿಗೆ ಸಂಬಂಧಿಸಿದಂತೆ ಕನ್ನಿಕಾ ಮಹಲ್‌ನಲ್ಲಿ ಅಭಿಯಾನ ನಡೆಯಲಿದೆ. ಉಳಿದ ವಾರ್ಡ್‌ಗಳ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು. ಅಭಿಯಾನ ಕುರಿತು ಈಗಾಗಲೇ ಕರಪತ್ರ ಮುದ್ರಿಸಿ ನಗರದಾದ್ಯಂತ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ‘ ಎಂದು ತಿಳಿಸಿದರು.
ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ‘ಜನರು ಖಾತೆಗೆ ಸಂಬಂಧಿಸಿದ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ, ಒಂದು ಸೆಟ್ ದಾಖಲಾತಿಗಳನ್ನು ಸಂಬಂದಿಸಿದ ವಾರ್ಡ್ ಅಧಿಕಾರಿಗಳಿಗೆ ಸಲ್ಲಿಸಿದರೆ ಅರ್ಜಿ ವಿಲೇವಾರಿ ಸರಾಗವಾಗುತ್ತದೆ. ನಗರದಲ್ಲಿ ಒಟ್ಟು 25 ಸಾವಿರ ‘ಎ’ ಖಾತೆದಾರರಿದ್ದಾರೆ. ತಮ್ಮ ವಾರ್ಡ್‌ನ ಬಿಲ್ ಕಲೆಕ್ಟರ್ ಬಳಿ ಪಿಐಡಿ ನಂಬರ್ ಹಾಕಿಸಿಕೊಂಡು ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅರ್ಜಿ ತಿರಸ್ಕೃತವಾಗುತ್ತದೆ’ ಎಂದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
3 ಸಾವಿರಕ್ಕೂ ಹೆಚ್ಚು ಇ–ಖಾತೆ ವಿತರಣೆ
‘ನಗರಸಭೆಯಲ್ಲಿ ಕಳೆದ 6 ತಿಂಗಳಿಂದ 3 ಸಾವಿರಕ್ಕೂ ಹೆಚ್ಚು ಇ–ಖಾತೆಗಳನ್ನು ನಿಗದಿತ ಅವಧಿಯಲ್ಲಿ ವಿತರಿಸಲಾಗಿದೆ. ಇನ್ನು 17 ಸಾವಿರ ಇ– ಖಾತೆ ಮಾಡುವುದು ಬಾಕಿ ಇದೆ. ಇದೀಗ ನಗರಸಭೆಯೇ ವಾರ್ಡ್ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಜನರು ಇದರ ಪ್ರಯೋಜನ ಪಡೆಯಬೇಕು. ನಗರಸಭೆಯ ಕೆಲಸಗಳಿಗಾಗಿ ದಲ್ಲಾಳಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ಶೇಷಾದ್ರಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.