ADVERTISEMENT

ಮಾಗಡಿ | 28ಕ್ಕೆ ರೈತ ಸಂಘದ ಟ್ರ್ಯಾಕ್ಟರ್‌, ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:45 IST
Last Updated 25 ಮೇ 2025, 15:45 IST
ಮಾಗಡಿ ತಾಲ್ಲೂಕು ರೈತ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ರೈತ‌ ಮುಖಂಡರು ತಾಲ್ಲೂಕು ಆಡಳಿತ ಕ್ರಮವನ್ನು ಖಂಡಿಸಿದರು.
ಮಾಗಡಿ ತಾಲ್ಲೂಕು ರೈತ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ರೈತ‌ ಮುಖಂಡರು ತಾಲ್ಲೂಕು ಆಡಳಿತ ಕ್ರಮವನ್ನು ಖಂಡಿಸಿದರು.   

ಮಾಗಡಿ: ರೈತರಿಗೆ ಬಗರ್‌ ಹುಕುಂ ಚೀಟಿ ನೀಡದ ತಾಲ್ಲೂಕು ಆಡಳಿತದ ಕಾರ್ಯವೈಖರಿಯನ್ನು ಖಂಡಿಸಿ ಮತ್ತು ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮೇ 28ರಂದು ಟ್ರ್ಯಾಕ್ಟರ್ ಹಾಗೂ ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ ಎಂದು ರೈತ ಸಂಘ ಹೇಳಿದೆ.

ಜಡೇದೇವರ ಮಠದ ಪೀಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ನೇತೃತ್ವದಲ್ಲಿ ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಿಂದ ಮುಖ್ಯರಸ್ತೆ, ಆರ್.ಆರ್.ರಸ್ತೆಯಿಂದ ಟ್ರ್ಯಾಕ್ಟರ್‌ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್  ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಬಗರ್‌ ಹುಕುಂ ಚೀಟಿಗಳನ್ನು ತಾಲ್ಲೂಕು ಕಚೇರಿ ಸಿಬ್ಬಂದಿ ವಿತರಿಸಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ದೂರು ಕೊಟ್ಟರೂ ಉಪಯೋಗವಾಗಿಲ್ಲ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕಲುಷಿತವಾಗಿದ್ದು, ಅದೇ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳು ಎತ್ತುವಂತೆ ರೈತ ಸಂಘ ಪಾದಯಾತ್ರೆ ಮಾಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದರು.

ADVERTISEMENT

ಮಾಗಡಿ–ಬೆಂಗಳೂರು ರಸ್ತೆಯನ್ನು ಒಂದೂವರೆ ಅಡಿ ಎತ್ತರಿಸಿದ್ದು ಜನರಿಗೆ ಸಮಸ್ಯೆಯಾಗಿದೆ. ಪಟ್ಟಣದ ಕೋಟೆ ಮೈದಾನದಲ್ಲಿ ನಡೆಯುವ ಕುರಿ, ಕೋಳಿ ಸಂತೆಗೆ ಪುರಸಭೆ ಸುಂಕ ವಸೂಲಿ ಮಾಡುತ್ತಿದ್ದು, ರೈತರಿಗೆ ಶೌಚಾಲಯ, ಕುಡಿಯುವ ನೀರಿನಂತಹ ಮೂಲ ಸೌಕರ್ಯ ಒದಗಿಸಿಲ್ಲ ಎಂದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ಕರೇನಹಳ್ಳಿ ಮಧು, ಚಂದ್ರಪ್ಪ, ಬುಡನ್‌ಸಾಬ್, ಚಿಕ್ಕಣ್ಣ, ಅಂಜಿನಪ್ಪ, ಶಶಿಕುಮಾರ್, ಷಡಾಕ್ಷರಿ, ಕಾಂತರಾಜ್, ಗಂಗಾಧರಯ್ಯ, ಸಲೀಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.