ADVERTISEMENT

ರಾಮನಗರ ಮ್ಯಾರಥಾನ್‌: ಕಾಡಿನ ಹಾದಿಯಲ್ಲಿ ಉತ್ಸಾಹದ ಓಟ

ಸಾವಿರಾರು ಓಟಗಾರರು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:30 IST
Last Updated 10 ಮಾರ್ಚ್ 2019, 19:30 IST
ಬಸವನಪುರದಲ್ಲಿ ಭಾನುವಾರ ರಾಮನಗರ ಮ್ಯಾರಥಾನ್‌ಗೆ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್ ಹಾಗೂ ಮುಖಂಡ ಕೆ.ರಾಜು ಚಾಲನೆ ನೀಡಿದರು
ಬಸವನಪುರದಲ್ಲಿ ಭಾನುವಾರ ರಾಮನಗರ ಮ್ಯಾರಥಾನ್‌ಗೆ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್ ಹಾಗೂ ಮುಖಂಡ ಕೆ.ರಾಜು ಚಾಲನೆ ನೀಡಿದರು   

ರಾಮನಗರ: ತಾಲ್ಲೂಕಿನ ಬಸವನಪುರ ಗ್ರಾಮದಲ್ಲಿ ಭಾನುವಾರ ಸೂರ್ಯ ಮೂಡುವ ಮುನ್ನವೇ ಓಟಗಾರರ ದಂಡು ನೆರೆದಿತ್ತು. ಕಾಡು–ಮೇಡಿನ ಹಾದಿಯಲ್ಲಿ ಉತ್ಸಾಹಿಗಳು ಓಡಿ ದಣಿದರು.

ಯಲ್ಲೋ ಅಂಡ್‌ ರೆಡ್ ಫೌಂಡೇಶನ್ ನೇತೃತ್ವದಲ್ಲಿ ಆಯೋಜಿಸಿದ್ದ ರಾಮನಗರ ಮ್ಯಾರಥಾನ್‌ನ ಆರನೇ ಆವೃತ್ತಿಯ ಮೊದಲ ಓಟವು ಬೆಳಗ್ಗೆ 6.30ಕ್ಕೆ ಚಾಲನೆ ಪಡೆದುಕೊಂಡಿತು. 21 ಕಿ.ಮೀ. ಕ್ರಮಿಸುವ ಗುರಿ ಹೊತ್ತು ಸ್ಪರ್ಧಿಗಳು ಹೆಜ್ಜೆ ಇಟ್ಟರು. ಅದರ ಬೆನ್ನಿಗೆ 11 ಕಿ.ಮೀ. ಹಾಗೂ 7 ಕಿ.ಮೀ. ಓಟಗಳಿಗೂ ಚಾಲನೆ ದೊರೆಯಿತು.

ಇಳಿಜಾರು–ದಿಬ್ಬಗಳಿಂದ ಕೂಡಿದ ಕಚ್ಚಾ ರಸ್ತೆಯಲ್ಲಿ ಸ್ಪರ್ಧಿಗಳು ಓಡಿದರು. ಮಾವಿನ ಕಾಯಿಗಳಿಂದ ಮೈತುಂಬಿಕೊಂಡ ಮರಗಳು, ಅದರ ಬೆನ್ನಿಗೆ ಬೃಹತ್ತಾದ ಬಂಡೆಗಳ ಸೌಂದರ್ಯವನ್ನು ಸವಿಯುತ್ತಾ ಓಟಗಾರರು ಹೆಜ್ಜೆ ಹಾಕಿದರು.

ADVERTISEMENT

ಓಟವು ಬಸವನಪುರದಿಂದ ಆರಂಭಗೊಂಡು ವಡೇರಹಳ್ಳಿ, ರಾಂಪುರದೊಡ್ಡಿ, ಗೋಪಾಲಪುರ, ದಾಸೇಗೌಡನ ದೊಡ್ಡಿ, ಹುಣಸನಹಳ್ಳಿ ಮೊದಲಾದ ಮಾರ್ಗಗಳಲ್ಲಿ ಸಾಗಿ ಮತ್ತೆ ಬಸವನಪುರಕ್ಕೆ ವಾಪಸ್‌ ಆಯಿತು. ಮಾರ್ಗದಲ್ಲಿ ಅಲ್ಲಲ್ಲಿ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಹಿರಿಯ ಓಟಗಾರರ ಉತ್ಸಾಹ: ಮ್ಯಾರಥಾನ್‌ನಲ್ಲಿ ಯುವ ಓಟಗಾರರೇ ಹೆಚ್ಚಿದ್ದರೂ ಸಾಕಷ್ಟು ಮಂದಿ ಹಿರಿಯರೂ ಪಾಲ್ಗೊಂಡರು. ಅದರಲ್ಲೂ 84ರ ವಯಸ್ಸಿನ ಹಿರಿಯರೊಬ್ಬರೂ ಹೆಜ್ಜೆ ಹಾಕಿದರು. ಮಕ್ಕಳು, ಮಹಿಳೆಯರೂ ಓಡಿದರು.

ಬೆಂಗಳೂರಿನ ಐಟಿ–ಬಿ.ಟಿ. ಉದ್ಯೋಗಿಗಳು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

‘ರಾಮನಗರ ಮ್ಯಾರಥಾನ್‌ನ ಆರನೇ ಆವೃತ್ತಿ ಇದಾಗಿದ್ದು, ಈ ಬಾರಿ ವೃದ್ಧರ ಆರೋಗ್ಯದ ಕಾಳಜಿ ಹೊತ್ತು ಓಟ ಆಯೋಜಿಸಲಾಗಿತ್ತು. ರಾಜ್ಯದ ನಾನಾ ಭಾಗಗಳಿಂದ 1500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡರು’ ಎಂದು ಎಂದು ಯಲ್ಲೋ ಅಂಡ್‌ ರೆಡ್ ಫೌಂಡೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ್ ಶಿವ ಮತ್ತು ಅಧ್ಯಕ್ಷ ಅಮಿತ್‌ ಶಿವಾ ತಿಳಿಸಿದರು.

ಮ್ಯಾರಥಾನ್‌ ಅಂಗವಾಗಿ ಬೀಜದುಂಡೆಗಳನ್ನು ಮಾಡಲಾಗಿದ್ದು, ಅವುಗಳನ್ನು ಅಲ್ಲಲ್ಲಿ ಇಡಲಾಗಿತ್ತು. ಓಟಗಾರರು ಓಡುತ್ತಲೇ ಕೈಯಲ್ಲಿ ಬೀಜದುಂಡೆ ಹಿಡಿದು ಸುತ್ತಲಿನ ಹೊಲ, ಕಾಡಿನತ್ತ ಎಸೆದರು. ಆಸಕ್ತರಿಗೆ ಉಚಿತವಾಗಿ ಸಸಿಗಳನ್ನೂ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್‌, ಮುಖಂಡ ಕೆ.ರಾಜು. ಬಿಎಸ್‌ಎಫ್ ಯೋಧ ಸುರೇಶ್‌, ಕೆ.ಪಿ. ನಾಗೇಶ್‌, ಲಕ್ಷ್ಮಿನಾರಾಯಣ, ದಾರಿದೀಪ ವೃದ್ಧಾಶ್ರಮದ ಕವಿತಾ ರಾವ್‌, ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ಹರೀಶ್‌ ಹೆಗಡೆ, ನಟ ವಿನಾಯಕ್‌ ಜೋಶಿ, ರೋಟರಿ ಸಿಲ್ಕ್‌ಸಿಟಿ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಅನುರಾಧ ಇದ್ದರು.

ರೋಟರಿ ಸಿಲ್ಕ್ ಸಿಟಿ , ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್‌ ಕ್ಲಬ್ ಮತ್ತು ಜಿಲ್ಲಾ ಪೋಲೀಸ್ , ಬಾಷ್ ಇಂಡಿಯಾ, ಆರ್ ಬಿಎಲ್ ಬ್ಯಾಂಕ್, ರೋಟರಿ ಬಿಡಿದಿ ಸೆಂಟ್ರಲ್, ಕೆಎಂಎಫ್‌ ಸಂಸ್ಥೆಗಳು ಮ್ಯಾರಥಾನ್‌ಗೆ ಸಹಯೋಗ ನೀಡಿದ್ದವು.

**

ಮತ ಮಾರಾಟಕ್ಕಿಲ್ಲ!
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮ್ಯಾರಥಾನ್‌ ಮಾಡಿತು. ಓಟದಲ್ಲಿ ಪಾಲ್ಗೊಂಡವರು ‘ನನ್ನ ಮತ ಮಾರಾಟಕ್ಕೆ ಇಲ್ಲ’ ಎಂಬ ಪ್ರತಿಜ್ಞೆ ಸ್ವೀಕರಿಸಿದರು.

‘ನಮ್ಮ ತಂದೆ–ತಾಯಿಯ ಶ್ರಮಕ್ಕೆ ಹೇಗೆ ಬೆಲೆ ಕಟ್ಟಲು ಆಗದೋ ಹಾಗೆಯೇ ಮತಕ್ಕೂ ಬೆಲೆ ಕಟ್ಟಲಾಗದು. ಅಂತಹ ಅಮೂಲ್ಯವಾದ ಹಕ್ಕನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಚಲಾಯಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್‌ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.