ADVERTISEMENT

ರಾಮನಗರ| ಪಾದಯಾತ್ರೆ ನಡೆಸಿದ್ದ ಜೋಡೆತ್ತು: ಮೇಕೆದಾಟು ಅಣೆಕಟ್ಟೆ ಕಟ್ಟುತ್ತ ಕಾಂಗ್ರೆಸ್‌?

ಪಾದಯಾತ್ರೆ ನಡೆಸಿದ್ದ ‘ಜೋಡೆತ್ತು’: ಹೊಸ ಸರ್ಕಾರದ ಮುಂದಿದೆ ಯೋಜನೆ ಅನುಷ್ಠಾನದ ಸವಾಲು

ಆರ್.ಜಿತೇಂದ್ರ
Published 21 ಮೇ 2023, 4:42 IST
Last Updated 21 ಮೇ 2023, 4:42 IST
ಭಾನುವಾರ ಆರಂಭವಾದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ, ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇತರರು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಭಾನುವಾರ ಆರಂಭವಾದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ, ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇತರರು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ರಾಮನಗರ: ರಾಜ್ಯದಲ್ಲಿ ಶನಿವಾರದಿಂದ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲೆಯವರೇ ಆದ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದು, ದಶಕಗಳಿಂದ ನನೆಗುದಿಗೆ ಬಿದ್ದಿರುವ ಹಾಗೂ ಕುಂಟುತ್ತ ಸಾಗಿರುವ ಯೋಜನೆಗಳನ್ನು ಸಾಕಾರಗೊಳಿಸುವ ಸವಾಲು ಅವರ ಮುಂದೆ ಇದೆ.

ಮೇಕೆದಾಟು ಅಣೆಕಟ್ಟೆ ನಿರ್ಮಾಣ ಈ ಭಾಗದ ಜನರ ದಶಕಗಳ ಬೇಡಿಕೆಗಳಲ್ಲಿ ಒಂದು. ಇದು ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವುದು ವಿಶೇಷ. ‘ಅಣೆಕಟ್ಟೆ ನಿರ್ಮಾಣಕ್ಕೆ ನಮ್ಮ ಜಮೀನು ಹೋಗುತ್ತದೆ. ಆದರೂ ಕುಡಿಯುವ ನೀರು ಹಾಗೂ ನೀರಾವರಿ ಸಲುವಾಗಿ ಯೋಜನೆಗೆ ಬದ್ಧ’ ಎಂದು ಡಿಕೆಶಿ ಈ ಹಿಂದೆಯೇ ಸಾರಿದ್ದರು.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ಡಿ.ಕೆ. ಶಿವಕುಮಾರ್‌– ಸಿದ್ದರಾಮಯ್ಯರ ನೇತೃತ್ವದಲ್ಲಿ 2022ರ ಜನವರಿ–ಫೆಬ್ರುವರಿಯಲ್ಲಿ ಕಾಂಗ್ರೆಸ್‌ ಕನಕಪುರ ತಾಲ್ಲೂಕಿನ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಈ ಪಾದಯಾತ್ರೆ ಕಾಂಗ್ರೆಸ್‌ನ ಚುನಾವಣೆ ತಯಾರಿಯ ಪೂರ್ವಭಾವಿ ಕಾರ್ಯಕ್ರಮದಂತಿದ್ದು, ತವರಿನಲ್ಲಿ ಡಿಕೆಶಿ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಆಗಿತ್ತು. ಇದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಮಾತಿನ ಚಕಮಕಿಗೂ ಕಾರಣವಾಗಿತ್ತು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರಿಂದ ಮೇಕೆದಾಟು ಯೋಜನೆಯ ಸಾಧಕ–ಬಾಧಕಗಳ ಅರಿವು ಶಿವಕುಮಾರ್‌ ಅವರಿಗೆ ಇದೆ. ಈ ಅಣೆಕಟ್ಟೆ ನಿರ್ಮಾಣ ಆದದ್ದೇ ಆದಲ್ಲಿ ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಲಿದ್ದು, ನೀರಾವರಿಗೂ ಅನುಕೂಲ ಆಗಲಿದೆ.

ADVERTISEMENT

ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಸ್ತಾವ: 2013–2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೇಳೆ ರಾಜ್ಯವು ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಜೆಡಿಎಸ್–ಕಾಂಗ್ರೆಸ್ ಸರ್ಕಾರದ ವೇಳೆ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ₹5900 ಕೋಟಿ ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು ಸಲ್ಲಿಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತೊಂದು ಡಿಪಿಆರ್ ಸಲ್ಲಿಕೆ ಆಗಿದ್ದು, ಯೋಜನೆಗೆ ₹9 ಸಾವಿರ ಕೋಟಿ ಅಂದಾಜಿಸಲಾಗಿದೆ.

ಕನಕಪುರ ತಾಲ್ಲೂಕಿನ ಸಂಗಮ ಹಾಗೂ ಮೇಕೆದಾಟು ನಡುವಿನ ಒಂಟಿಗುಂಡ್ಲು ಪ್ರದೇಶದ ಬಳಿ ಹೊಸ ಅಣೆಕಟ್ಟೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆರಂಭದಲ್ಲಿ ರಾಜ್ಯ ಸರ್ಕಾರವು ಮೇಕೆದಾಟು, ಮಹಾಮಡು ಸಹಿತ ಮೂರು ಸ್ಥಳಗಳನ್ನು ಗುರುತಿಸಿತ್ತು. ಇದರಲ್ಲಿ ಎರಡು ಬೆಟ್ಟ ಶ್ರೇಣಿಗಳ ನಡುವಿನ ಒಂಟಿಗುಂಡ್ಲುವನ್ನು ಅಣೆಕಟ್ಟೆ ನಿರ್ಮಾಣಕ್ಕೆ ಅಂತಿಮಗೊಳಿಸಲಾಗಿದೆ. ಈ ಪ್ರದೇಶವು ಸಂಗಮದಿಂದ 4 ಕಿಲೋಮೀಟರ್ ದೂರವಿದೆ. ಇದರಾಚೆಗೆ 1.8 ಕಿ.ಮೀ. ದೂರದಲ್ಲಿ ಮೇಕೆದಾಟು ಸಿಗಲಿದೆ. ಮೇಕೆ ದಾಟಿತ್ತು ಎನ್ನಲಾದ ಬೃಹತ್‌ ಬಂಡೆಕಲ್ಲುಗಳುಳ್ಳ ಕಂದಕ ಶ್ರೇಣಿಯ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಅಣೆಕಟ್ಟೆ ನಿರ್ಮಾಣ ಮಾಡಲು ಜಲ ಸಂಪನ್ಮೂಲ ಇಲಾಖೆಯು ಯೋಜಿಸಿದೆ.

ಜಲಾಶಯಕ್ಕಾಗಿ ಸುಮಾರು 4,996 ಹೆಕ್ಟೇರ್‌ ಪ್ರದೇಶವು ಮುಳುಗಡೆ ಆಗಲಿದ್ದು, ಇದರಲ್ಲಿ 4716 ಹೆಕ್ಟೇರ್‌ ಅರಣ್ಯ ಪ್ರದೇಶವೇ ಆಗಿದೆ. ಅದರಲ್ಲಿಯೂ 2800 ಹೆಕ್ಟೇರ್‌ನಷ್ಟು ಪ್ರದೇಶವು ಕಾವೇರಿ ವನ್ಯಧಾಮಕ್ಕೆ ಸೇರಿದೆ. ಉದ್ದೇಶಿತ ಅಣೆಕಟ್ಟೆಯು 66.85 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಲಿದ್ದು, ಇದರಲ್ಲಿ ವಾಸ್ತವದಲ್ಲಿ 64 ಟಿಎಂಸಿಯಷ್ಟು ನೀರು ಸಂಗ್ರಹವಾಗಲಿದೆ. ಆ ಪೈಕಿ 7.7 ಟಿಎಂಸಿ ಡೆಡ್‌ ಸ್ಟೋರೇಜ್ ಆಗಿದ್ದು, ಉಳಿದ 56.30 ಟಿಎಂಸಿ ಬಳಕೆಗೆ ಲಭ್ಯವಿರಲಿದೆ.

ಮೇಕೆದಾಟು ಅಣೆಕಟ್ಟೆಯು ಕಾಡಿನಲ್ಲಿ ನಿರ್ಮಾಣ ಆಗಲಿದ್ದು, ಹೆಚ್ಚಿನ ಅರಣ್ಯ ಪ್ರದೇಶ ಮುಳುಗಡೆ ಆಗಲಿದೆ. ಇದಕ್ಕೆ ಪರ್ಯಾಯವಾಗಿ ರಾಮನಗರ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತಗಳು ಜಮೀನನ್ನು ಗುರುತಿಸಿದ್ದು, ಅಲ್ಲಿ ಕಾಡು ಬೆಳೆಸಲು ಉದ್ದೇಶಿಸಲಾಗಿದೆ. ಯೋಜನೆಗೆ 280 ಹೆಕ್ಟೇರ್‌ ಕಂದಾಯ ಭೂಮಿ ಮಾತ್ರ ವ್ಯಾಪ್ತಿಗೆ ಬರಲಿದೆ. ಸುತ್ತಲಿನ ಗ್ರಾಮಗಳಾದ ಮಡಿವಾಳ, ಕೊಕ್ಕೆದೊಡ್ಡಿ, ಬೊಮ್ಮಸಂದ್ರ, ಕಾಳಿಬೋರೆ ಫಿಶಿಂಗ್‌ ಕ್ಯಾಂಪ್‌ ಸಹಿತ ಏಳೆಂಟು ಗ್ರಾಮಗಳು ಮುಳುಗಡೆ ಆಗುವ ಸಾಧ್ಯತೆ ಇದೆ.

ಯೋಜನೆಯಿಂದ ವಾರ್ಷಿಕ 400–440 ಮೆಗಾ ವಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಕೆಪಿಟಿಸಿಎಲ್‌ ₹2 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವ ಒಪ್ಪಂದವೂ ಆಗಿದೆ.

ಮೇಕೆದಾಟು ಪ್ರದೇಶದ ಸೊಬಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.