ADVERTISEMENT

ರಾಮನಗರ | ಹಣ ನೀಡದಿದ್ದಕ್ಕೆ ಕೊಲೆ ಯತ್ನ: ಅಪರಾಧಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:11 IST
Last Updated 26 ಸೆಪ್ಟೆಂಬರ್ 2025, 2:11 IST
ಸಂದೀಪ
ಸಂದೀಪ   

ರಾಮನಗರ: ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಳಕಮಲೆ ಗ್ರಾಮದಲ್ಲಿ ಹಣಕ್ಕಾಗಿ ಸಹೋದ್ಯೋಗಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಅಪರಾಧಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ.

ತರಳು ಗ್ರಾಮ ಪಂಚಾಯಿತಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಗುಳಕಮಲೆ ಗ್ರಾಮದ ಸಂದೀಪ ಶಿಕ್ಷೆಗೊಳಗಾದ ಅಪರಾಧ. ಪಂಚಾಯಿತಿಯ ಕಸದ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆನಂದ ಎಂಬುವರು ಹಲ್ಲೆಗೊಳಗಾಗಿದ್ದವರು.

2023ರ ಜುಲೈ 13ರಂದು ಆನಂದ ಅವರು ಕೆಲಸ ಮಾಡುತ್ತಿದ್ದಾಗ ಸಂದೀಪ ಹಣ ಕೊಡುವಂತೆ ತಾಕೀತು ಮಾಡಿದ್ದ. ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆನಂದ ಅವರು ಹಣ ಕೊಡಲು ನಿರಾಕರಿಸಿದಾಗ ಜಗಳವಾಡಿದ್ದ ಸಂದೀಪ್, ನಂತರ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ.

ADVERTISEMENT

ಗಾಯಗೊಂಡಿದ್ದ ಆನಂದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಠಾಣೆ ಪೊಲೀಸರು, ತನಿಖೆ ನಡೆಸಿ ಆರೋಪಿ ವಿರುದ್ದ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಗಿತಾ ಕೆ.ಬಿ ಅವರು ಸಂದೀಪನ ವಿರುದ್ದದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದರು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರ ಪರವಾಗಿ ವಿಶೇಷ ಸರ್ಕಾರಿ ವಕೀಲೆ ಮೀನಾಕುಮಾರಿ ವಾದ ಮಂಡಿಸಿದ್ದರು.

ವಾಹನ ಕಳ್ಳನ ಬಂಧನ

ಜಿಲ್ಲೆಯ ಬಿಡದಿ ಹೋಬಳಿಯ ಬೀಮೇನಹಳ್ಳಿ ಗ್ರಾಮದ ಬಳಿ ಇರುವ ಬೋಷೋಕು ಕಂಪನಿಯ ಮುಂಭಾಗದಲ್ಲಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಟಾಟಾ ಎಸಿಇ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ₹7 ಲಕ್ಷ ಮೌಲ್ಯದ ಎರಡು ಕಾರು ಒಂದು ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ವಶಪಡಿಸಿಕೊಂಡಿದ್ದಾರೆ. 600 ಗ್ರಾಂ ಗಾಂಜಾ ವಶ ‌ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಗನಹಟ್ಟಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ ₹35 ಸಾವಿರ ಮೌಲ್ಯದ 600 ಗ್ರಾಂ ಗಾಂಜಾ ಮತ್ತು ₹500 ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.