ADVERTISEMENT

ರಾಮನಗರ: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣಗೆ ಅಂತಿಮ ನಮನ ಸಲ್ಲಿಸಿದ ಜನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 7:02 IST
Last Updated 11 ಡಿಸೆಂಬರ್ 2024, 7:02 IST
<div class="paragraphs"><p>ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣಗೆ ಅಂತಿಮ ನಮನ ಸಲ್ಲಿಸಿದ ರಾಮನಗರದ ಜನ </p></div>

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣಗೆ ಅಂತಿಮ ನಮನ ಸಲ್ಲಿಸಿದ ರಾಮನಗರದ ಜನ

   

ರಾಮನಗರ: ಜಿಲ್ಲೆ ಮೂಲಕ ಮಂಡ್ಯಕ್ಕೆ ಹೋದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಬುಧವಾರ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಂಘ–ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಡೆದರು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸದಿಂದ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ಗಾಜಿನ ವಾಹನದಲ್ಲಿ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಾಯಿತು. ಜಿಲ್ಲೆ ಮಾರ್ಗವಾಗಿ ಹೊರಟ ಶರೀರದ ಅಂತಿಮ ದರ್ಶನಕ್ಕೆ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಜಿಲ್ಲಾಡಳಿತವು ಪೆಂಡಾಲ್ ಹಾಕಿಸಿ, ಸರದಿಯಲ್ಲಿ ದರ್ಶನ ಪಡೆಯಲು ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಬಿಡದಿಯನ್ನು ಬೆಳಿಗ್ಗೆ 10 ಗಂಟೆಗೆ ಪ್ರವೇಶಿಸಿದ ಪಾರ್ಥೀವ ಶರೀರದ ವಾಹನವನ್ನು ಬಿಜಿಎಸ್ ವೃತ್ತದಲ್ಲಿ 10 ನಿಮಿಷ ನಿಲ್ಲಿಸಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಅಲ್ಲಿಂದ ಹೊರಟ ವಾಹನವು 10.45ರ ಸುಮಾರಿಗೆ ರಾಮನಗರ ಪ್ರವೇಶಿಸಿತು. ಅಂಬೇಡ್ಕರ್ ನಗರ, ಗಾಂಧಿನಗರ, ರೇಷ್ಮೆ ಮಾರುಕಟ್ಟೆ ಬಳಿ ಅಂತಿಮ ದರ್ಶನಕ್ಕೆ ಜನ ಜಮಾಯಿಸಿದ್ದರಿಂದ ಅಲ್ಲಿ ವಾಹನವನ್ನು ನಿಧಾನಗೊಳಿಸಲಾಯಿತು.

ವಾಹನವು ಐಜೂರು ವೃತ್ತಕ್ಕೆ 11.05ಕ್ಕೆ ಬಂದಿತು. ಅಷ್ಟೊತ್ತಿಗಾಗಲೇ ಜಮಾಯಿಸಿದ ಜನಪ್ರತಿನಿಧಿಗಳು, ರಾಜಕಾರಣಿಗಳು, ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು, ಸಾರ್ವಜನಿಕರು, ಅಭಿಮಾನಿಗಳಿಗೆ ಪಾರ್ಥೀವ ಶರೀರದ ದರ್ಶನಕ್ಕೆ 15 ನಿಮಿಷ ಅವಕಾಶ ನೀಡಲಾಯಿತು. ಜನರು ‘ಎಸ್‌.ಎಂ. ಕೃಷ್ಣ ಅವರಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.

ಬಳಿಕ ವಾಹನವು 11.20ಕ್ಕೆ ಚನ್ನಪಟ್ಟಣ ಕಡೆಗೆ ಹೊರಟಿತು. ವಾಹನದೊಳಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎಚ್‌.ಸಿ. ಬಾಲಕೃಷ್ಣ, ಶ್ರೀನಿವಾಸ್ ಹಾಗೂ ಮುಂಭಾಗದಲ್ಲಿ ಕುಣಿಗಲ್ ಶಾಸಕ ಡಾ. ಎಚ್‌.ಡಿ. ರಂಗನಾಥ್ ಇದ್ದರು. ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ಮುಖಂಡರಾದ ಕೆ. ಶೇಷಾದ್ರಿ ಶಶಿ, ಜಿಯಾವುಲ್ಲಾ, ರಮೇಶ್, ರಾಜಶೇಖರ್, ಸಿ.ಎನ್.ಆರ್. ವೆಂಕಟೇಶ್, ರುದ್ರದೇವರು, ಸಬ್ಬಕೆರೆ ಶಿವಲಿಂಗಪ್ಪ, ನಗರಸಭೆ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಸಂಘ–ಸಂಸ್ಥೆ ಹಾಗೂ ಸಂಘಟನೆಗಳ ಕೆಲ ಮುಖಂಡರು ವಾಹನದೊಳಕ್ಕೆ ಹೋಗಿ ಪಾರ್ಥೀವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅಂತಿಮ ದರ್ಶನ ಪಡೆದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎಎಸ್ಪಿಗಳಾದ ಟಿ.ವಿ. ಸುರೇಶ್, ಲಕ್ಷ್ಮೀನಾರಾಯಣ, ಡಿವೈಎಸ್ಪಿಗಳಾದ ದಿನಕರ ಶೆಟ್ಟಿ, ಪ್ರವೀಣ್ ಕುಮಾರ್, ತಾ.ಪಂ. ಇಒ ಪ್ರದೀಪ್, ಪೌರಾಯುಕ್ತ ಡಾ. ಜಯಣ್ಣ ಸೇರಿದಂತೆ ಹಲವು ಅಧಿಕಾರಿಗಳು ಸಹ ಅಂತಿಮ ನಮನ ಸಲ್ಲಿಸಿದರು.

ಶ್ರದ್ಧಾಂಜಲಿ ಸಭೆ: ಕೃಷ್ಣ ಅವರ ಪಾರ್ಥೀವ ಶರೀರವು ಬರುವುದಕ್ಕೆ ಮುಂಚೆ ಐಜೂರು ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಪಕ್ಷದ ಮುಖಂಡರು ಕೃಷ್ಣ ಅವರ ಭಾವಚಿತ್ರಕ್ಕೆ ಗಂಧದ ಕಡ್ಡಿ ಬೆಳಗಿ, ಪುಷ್ಪನಮನ ಸಲ್ಲಿಸಿದರು.

ರಸ್ತೆ ಬಂದ್; ಬಿಗಿ ಬಂದೋಬಸ್ತ್

ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಐಜೂರು ವೃತ್ತದಲ್ಲಿ ಜನ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದರು. ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯ ಮೈಸೂರು ಮಾರ್ಗವನ್ನು ಕೆಲ ಹೊತ್ತು ಬಂದ್ ಮಾಡಿ, ಬೆಂಗಳೂರು ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಪಾರ್ಥೀವ ಶರೀರ ಹೊತ್ತ ವಾಹನವು ಪೆಂಡಾಲ್ ಇರುವ ಜಾಗದತ್ತ ಬರುತ್ತಿದ್ದಂತೆ, ಪೊಲೀಸರು ಅನತಿ ದೂರದಿಂದಲೇ ಎರಡೂ ಕಡೆ ಹಗ್ಗ ಹಿಡಿದು ನಿಂತು ಜನರು ಅಡ್ಡ ಬಾರದಂತೆ ನೋಡಿಕೊಂಡರು. ವಾಹನವು ಪೆಂಡಾಲ್‌ ಪ್ರವೇಶಿಸಿದಾಗ ಜನರು ಸರದಿಯಲ್ಲಿ ದರ್ಶನ ಪಡೆದು ಹೋಗುವಂತೆ ವ್ಯವಸ್ಥೆ ಮಾಡಿದರು. ಪ್ರಮುಖ ವ್ಯಕ್ತಿಗಳು ಮಾತ್ರ ವಾಹನದೊಳಕ್ಕೆ ಹೋಗಿ ಹತ್ತಿರದಿಂದ ಕೃಷ್ಣ ಅವರ ದರ್ಶನ ಪಡೆದರು.

ಪಾರ್ಕಿಂಗ್ ವಿಷಯಕ್ಕೆ ವಾಗ್ವಾದ

ಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದವರ ವಾಹನಗಳಿಗೆ ಐಜೂರು ವೃತ್ತದ ಅಕ್ಕಪಕ್ಕದ ರಸ್ತೆಗಳಲ್ಲಿ ಹಾಗೂ ಅನತಿ ದೂರದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಹಳೆ ಬಸ್ ನಿಲ್ದಾಣದ ಕಡೆಯ ರಸ್ತೆಯ ಕಡೆ ಬಿಜೆಪಿ ಮುಖಂಡ ರುದ್ರದೇವರು ಅವರು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಲು ಮುಂದಾದರು. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌, ಬೇರೆ ಕಡೆ ವಾಹನ ನಿಲ್ಲಿಸುವಂತೆ ಸೂಚಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಂತೆ, ಸ್ಥಳದಲ್ಲಿ ಜನರು ಜಮಾಯಿಸಿದರು. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ಸಮಾಧಾನಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.