ADVERTISEMENT

ರಾಮನಗರ ಜಿಲ್ಲೆಯಲ್ಲಿ ಸಂಭ್ರಮದ ಈದ್ ಮಿಲಾದ್: ಗಮನ ಸೆಳೆದ ವಿವಿಧ ಪ್ರತಿಕೃತಿಗಳು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:36 IST
Last Updated 6 ಸೆಪ್ಟೆಂಬರ್ 2025, 2:36 IST
ಈದ್ ಮಿಲಾದ್ ಪ್ರಯುಕ್ತ ರಾಮನಗರದ ಐಜೂರು ರಸ್ತೆಯಲ್ಲಿ ಶುಕ್ರವಾರ ಮೆರವಣಿಗೆ ನಡೆಯಿತು
ಈದ್ ಮಿಲಾದ್ ಪ್ರಯುಕ್ತ ರಾಮನಗರದ ಐಜೂರು ರಸ್ತೆಯಲ್ಲಿ ಶುಕ್ರವಾರ ಮೆರವಣಿಗೆ ನಡೆಯಿತು   

ರಾಮನಗರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಜಿಲ್ಲೆಯಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ, ಕನಕಪುರದಲ್ಲಿ ಶ್ರದ್ಧಾಭಕ್ತಿಹಾಗೂ ಸಡಗರಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು.

ಹಬ್ಬದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದರು. ಹಬ್ಬದ ಪ್ರಯುಕ್ತ ನಗರದಲ್ಲಿರುವ ದರ್ಗಾ ಹಾಗೂ ಮಸೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಹಬ್ಬದ ಪ್ರಯುಕ್ತ ಚಿಣ್ಣರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಬಂಧು–ಬಾಂಧವರು ಹಾಗೂ ಸ್ನೇಹಿತರೊಂದಿಗೆ ಮಸೀದಿ ಮತ್ತು ದರ್ಗಾ ಬಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಶುಭಾಶಯಗಳನ್ನು ಕೋರುವಂತಹ ಪ್ಲೆಕ್ಸ್‌ಗಳು ಅಲ್ಲಲ್ಲಿ ವಿವಿಧೆಡೆ ಕಂಡುಬಂದವು.ನಗರದ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ADVERTISEMENT

ಐಜೂರಿನ ನೂರುಲ್ ಇಸ್ಲಾಂ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಯು ಐಜೂರಿನ ಬೀದಿಗಳು, ಮಾಗಡಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಹಳೆ ಬಸ್ ನಿಲ್ದಾಣ ವೃತ್ತ, ಮುಖ್ಯರಸ್ತೆ ಹಾದು ಜಾಮೀಯಾ ಮಸೀದಿ ತಲುಪಿತು. ಮೆರವಣಿಗೆಯುದ್ದಕ್ಕೂ ಘೋಷಣೆಗಳು ಮೊಳಗಿದವು. ಯುವಜನರು ಧ್ವಜಗಳನ್ನು ಹಿಡಿದು ಸಾಗಿಸಿದರು.

ಮೆರವಣಿಗೆಯಲ್ಲಿ ಮೆಕ್ಕಾ , ಮದೀನಾ ಗುಂಬಜ್ ಹಾಗೂ ಟಿಪ್ಪು ಸುಲ್ತಾನನ ಪ್ರತಿಕೃತಿಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಸ್ಥಳೀಯ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ನೀರು, ಶರಬತ್ , ಮಜ್ಜಿಗೆ ವಿತರಿಸಿದರು. ಜನರು ರಸ್ತೆಯ ಅಕ್ಕಪಕ್ಕ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ನಗರಸಭೆ ನಾಮನಿರ್ದೇಶಿತ ಅಬ್ದುಲ್ ಸಮದ್, ನೂರುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಹಾಜಿ ಹನೀಫ್ ಸಾಬ್, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಲೀಂ, ಸುಬಾನ್, ಜೋಹರ್, ನಾಸಿರ್ ಪಾಷ, ಜಲೀನ್ ಸೇರಿದಂತೆ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಹಿತರ ಘಟನೆಗೆ ಅವಕಾಶವಿಲ್ಲದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಈದ್ ಮಿಲಾದ್ ಅಂಗವಾಗಿ ರಾಮನಗರದಲ್ಲಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸಿದ್ದರು. ನಗರಸಭೆಯ ನಾಮ ನಿರ್ದೇಶಿತ ಸದಸ್ಯ ಅಬ್ದುಲ್ ಸಮದ್ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಲೀಂ ಹಾಗೂ ಇತರರು ಇದ್ದಾರೆ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.