ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ವಿವಿಧೆಡೆ ರಸ್ತೆ ಜಲಾವೃತಗೊಂಡಿವೆ. ಐದೂ ತಾಲ್ಲೂಕುಗಳಲ್ಲಿ ಸುರಿದ ಮಳೆಗೆ ಕೆಲ ಮನೆಗಳು ಹಾನಿಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಬೆಳೆ ಹಾನಿಯಾಗಿದೆ.ಕೆರೆ–ಕಟ್ಟೆ ಹಾಗೂ ಹಳ್ಳಗಳು ತುಂಬಿ ಹರಿದಿವೆ.
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆಯು ಮಳೆ ಅಬ್ಬರಕ್ಕೆ ಜಲಾವೃತಗೊಂಡಿತು. ಇದರಿಂದಾಗಿ ವಾಹನಗಳು ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಯಿತು. ರಾಮನಗರದಲ್ಲಿ ಸೀರೆಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಯಾರಬ್ ನಗರ, ಜಿಯಾವುಲ್ಲಾ ಬ್ಲಾಕ್ ಸೇರಿದಂತೆ ಕೆಲ ಪ್ರದೇಶಗಳಿಗೆ ನೀರು ನುಗ್ಗಿತು.
ಕಾಯಿಸೊಪ್ಪಿನ ಬೀದಿಯಲ್ಲಿರುವ ಮನೆಗಳಿಗೆ ಮಳೆ ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಮಳೆ ನೀರು ಹೊರ ಹಾಕುತ್ತಾ, ಜಾಗರಣೆ ಮಾಡಬೇಕಾಯಿತು. ಗಾಳಿ ಅಬ್ಬರಕ್ಕೆ ಕೊತ್ತಿಪುರ ಬಡಾವಣೆಯಲ್ಲಿ ಕೆಲ ಮನೆಗಳು ಹೆಂಚುಗಳು ಉದುರಿವೆ. ಬಿಡದಿಯ ನೆಲ್ಲಿಗುಡ್ಡ ಕೆರೆ ಮತ್ತು ರಾಮನಗರದ ರಂಗರಾಯರದೊಡ್ಡಿ ಕೆರೆಗಳು ತುಂಬಿ ಕೋಡಿ ಹರಿದಿವೆ. ಮಳೆಗೆ ಹಾರೋಹಳ್ಳಿಯ ಕೆಲವೆಡೆ ರಾಗಿ ಬೆಳೆ ನೆಲ ಕಚ್ಚಿದೆ.
ರಾಮನಗರದ ಕೊಳೆಗೇರಿ ಹಾಗೂ ತಗ್ಗು ಪ್ರದೇಶಗಳು, ಕಾಲುವೆಗಳ ಪಕ್ಕದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ಚರಂಡಿಗಳು ಕಟ್ಟಿಕೊಂಡಿದ್ದರಿಂದ ರೈಲು ನಿಲ್ದಾಣದ ಎದುರಿನ ರಸ್ತೆ, ಕೆಳ ಸೇತುವೆ ಸೇರಿದಂತೆ ಕೆಲವೆಡೆ ಮಳೆ ನೀರು ನಿಂತಿದ್ದರಿಂದ ರಸ್ತೆ ಜಲಾವೃತಗೊಂಡಿತು. ಒಳ ಚರಂಡಿ ಸೇರಿದಂತೆ ರಸ್ತೆ ಕಾಮಗಾರಿ ಸ್ಥಳಗಳಲ್ಲಿ ನೀರು ಕಟ್ಟಿಕೊಂಡಿದ್ದರಿಂದ ರಸ್ತೆ ಕೆಸರುಮಯವಾಯಿತು.
ನಗರಸಭೆ ಕಾರ್ಮಿಕರು ಬೆಳಿಗ್ಗೆಯಿಂದಲೇ ಕಾರ್ಯಪ್ರವೃತ್ತರಾಗಿ ಮಳೆಯಿಂದಾಗಿರುವ ಅನಾಹುತದ ಸ್ಥಳಗಳಿಗೆ ತೆರಳಿ, ಸಮಸ್ಯೆ ಪರಿಹರಿಸಿದರು. ಕಟ್ಟಿಕೊಂಡಿದ್ದ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದ ಅವುಗಳನ್ನು ಸಹ ತೆರವುಗೊಳಿಸಿದರು. ಅಧಿಕಾರಿಗಳು ಸಹ ಎರಡನೇ ಶನಿವಾರದ ರಜೆ ಲೆಕ್ಕಿಸದೆ ಪರಿಹಾರ ಕೆಲಸಗಳನ್ನು ಮಾಡಿದರು.
ಬಿಡಿದಯಲ್ಲಿ ನೆಲ್ಲಿಗುಡ್ಡೆ ಕೆರೆಯು ತುಂಬಿ ಹರಿದ ಹಿನ್ನೆಲೆಯಲ್ಲಿ ಹೊರಕ್ಕೆ ಬಂದ ಮೀನುಗಳನ್ನು ಸ್ಥಳೀಯರು ಪೈಪೋಟಿ ಬಿದ್ದು ಹಿಡಿದರು. ಚೀಲಗಳಲ್ಲಿ ತುಂಬಿಕೊಂಡು ಮನೆಯತ್ತ ತೆರಳಿದರು. ಕೆಲವರು ಸ್ಥಳದಲ್ಲೇ ಮಾರಾಟ ಮಾಡಿದರು. ಸಾರ್ವಜನಿಕರು ಸಹ ತುಂಬಿದ ಕೆರೆಯನ್ನು ವೀಕ್ಷಿಸಿ ಸಂತಸಪಟ್ಟರು.
ರಾಮನಗರದ ರಂಗರಾಯರದೊಡ್ಡಿ ಕೆರೆ ಸಹ ತುಂಬಿ ಹೊರಕ್ಕೆ ನೀರು ಹರಿಯಿತು. ಸ್ಥಳೀಯರು ಕೋಡಿ ನೀರಿನಲ್ಲಿ ಆಟವಾಡಿ ಸಂಭ್ರಮಿಸಿದರು. ಕೆರೆಗೆ ಭೇಟಿ ನೀಡಿದ್ದ ಪ್ರವಾಸಿಗರು ಫೋಟೊ ತೆಗೆದುಕೊಂಡರು.
ತಾಲ್ಲೂಕಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾನಿಗೊಂಡಿರುವ ಮನೆಗಳ ಮಾಲೀಕರಿಗೆ ಒಟ್ಟು ₹5.16 ಲಕ್ಷ ಪರಿಹಾರ ನೀಡಲಾಗಿದೆ– ತೇಜಸ್ವಿನಿ ತಹಶೀಲ್ದಾರ್ ರಾಮನಗರ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.