ADVERTISEMENT

ರಾಮನಗರ: ಸಂಗೀತ ವಿದ್ವಾನ್ ಬಿ.ಎಸ್. ನಾರಾಯಣ ಅಯ್ಯಂಗಾರ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 16:07 IST
Last Updated 18 ಮಾರ್ಚ್ 2025, 16:07 IST
ಬಿ.ಎಸ್.ನಾರಾಯಣ ಐಯ್ಯಂಗಾರ್
ಬಿ.ಎಸ್.ನಾರಾಯಣ ಐಯ್ಯಂಗಾರ್   

ರಾಮನಗರ: ನಗರದ ಐಜೂರು ನಿವಾಸಿಯಾದ ಸಂಗೀತ ವಿದ್ವಾನ್ ಬಿ.ಎಸ್. ನಾರಾಯಣ ಅಯ್ಯಂಗಾರ್ (101) ಮಂಗಳವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆ ಬೆಂಗಳೂರಿನ ಸುಮನಹಳ್ಳಿಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

1924ರ ಜೂನ್ 7ರಂದು ಜನಿಸಿದ ಅಯ್ಯಂಗಾರ್ ಅವರು 1947ರಿಂದ ಸಂಗೀತಾರಾಧನೆ ಶುರು ಮಾಡಿದರು. ಪ್ರಚಾರ ಬಯಸದೆ ಎಲೆಮರೆಯ ಕಾಯಿಯಂತೆ ಸಂಗೀತ ಸೇವೆ ಮಾಡಿದರು. ನಾಡಿನಾದ್ಯಂತ ಅಪಾರ ಶಿಷ್ಯವೃಂದ ಹೊಂದಿರುವ ಅವರು, ಸಂಗೀತ ಪರಂಪರೆ ಉಳಿಸುವುದಕ್ಕಾಗಿ ರಾಮನಗರದ ಸ್ವಗೃಹದಲ್ಲಿ 74 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಹೇಳಿಕೊಡುತ್ತಿದ್ದರು.

1948ರಿಂದ ಪ್ರತಿ ವರ್ಷ ನಾಡಿನ ಪ್ರಸಿದ್ಧ ಸಂಗೀತ ವಿದ್ವಾಂಸರನ್ನು ಆಹ್ವಾನಿಸಿ ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ ನಡೆಸುತ್ತಿದ್ದರು. ಮೂರು ತಿಂಗಳಿಗೊಮ್ಮೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವದಕ್ಕಾಗಿ ತ್ರೈಮಾಸಿಕ ಸಂಗೀತಾರಾಧನೆ ಶುರು ಮಾಡಿದರು. ತಮ್ಮ ಸ್ವಂತ ಹಣದಿಂದ 70 ವರ್ಷ ಸಂಗೀತಾರಾಧನೆ ನಡೆಸಿದ ಹೆಗ್ಗಳಿಕೆ ಅಯ್ಯಂಗಾರ್ ಅವರದ್ದಾಗಿದೆ.

ADVERTISEMENT

1956ರಲ್ಲಿಯೇ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ‘ಸ್ವರ್ಣಪದಕ’ ಪಡೆದಿರುವ ಅಯ್ಯಂಗಾರ್ ಅವರಿಗೆ ನಾಡಿನ ಅನೇಕ ಸಂಘ-ಸಂಸ್ಥೆಗಳು ‘ನಾದಶ್ರೀ’, ‘ಗಾಯನ ಚತುರ’, ‘ಗಾನ ಕಲಾಭೂಷಣ’, ‘ಶ್ರವಣಶ್ರೀ ಪುರಸ್ಕಾರ’, ‘ಪುರಂದರ ವಿಠಲ’ ಪ್ರಶಸ್ತಿ, ‘ಲಲಿತಕಲಾ ಕುಸುಮ’ ಹೀಗೆ ಅನೇಕ ಬಿರುದು ಮತ್ತು ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.