ADVERTISEMENT

ರಾಮನಗರ: ಅಂಬೆಗಾಲು ಕೃಷ್ಣ ಈ ಬಾರಿಯ ಆಕರ್ಷಣೆ

ಮೈಸೂರು ದಸರಾಕ್ಕೆ ರಾಮನಗರ ಜಿಲ್ಲೆಯಿಂದ ಸ್ತಬ್ಧಚಿತ್ರ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:31 IST
Last Updated 5 ಅಕ್ಟೋಬರ್ 2019, 19:31 IST
ಸ್ತಬ್ಧಚಿತ್ರ ಮಾದರಿ
ಸ್ತಬ್ಧಚಿತ್ರ ಮಾದರಿ   

ರಾಮನಗರ: ಇದೇ 8ರಂದು ಮೈಸೂರಿನಲ್ಲಿ ನಡೆಯಲಿರುವ ದಸರಾ ಮೆರವಣಿಗೆಯಲ್ಲಿ ಜಿಲ್ಲೆಯಿಂದ ಚನ್ನಪಟ್ಟಣದ ಅಂಬೆಗಾಲು ಕೃಷ್ಣನ ಸ್ತಬ್ಧಚಿತ್ರವು ಗಮನ ಸೆಳೆಯಲಿದೆ.

ಚನ್ನಪಟ್ಟಣ ತಾಲ್ಲೂಕಿನ ಮಳೂರಿನ ಅಪ್ರಮೇಯ ದೇವಾಲಯದಲ್ಲಿನ ಅಂಬೆಗಾಲು ಕೃಷ್ಣ ಸ್ತಬ್ಧ ಚಿತ್ರ ಈ ವರ್ಷ ಜಿಲ್ಲೆಯನ್ನು ಪ್ರತಿನಿಧಿಸುತ್ತಿದೆ. ಕಲಾವಿದ ರವೀಂದ್ರ ಸಿರವರ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿರುವ ಸ್ತಬ್ಧ ಚಿತ್ರ ಪ್ರವಾಸಿಗರ ಕಣ್ಮನ ಸೆಳೆಯಲು ಸಿದ್ಧವಾಗಿದೆ.

ಮಳೂರು ಅಪ್ರಮೇಯ ಸ್ವಾಮಿ ದೇವಾಲಯದ ಅಂಬೆಗಾಲು ಕೃಷ್ಣ ವಿಶ್ವ ಪ್ರಸಿದ್ಧ. ಪುರಂದರದಾಸರು ‘ಜಗದೊದ್ಧರಕನ ಹಾಡಿಸಿದಳೇ ಯಶೋಧೆ’ ಎಂಬ ಗೀತೆಯನ್ನು ಇಲ್ಲಿನ ಕೃಷ್ಣನ ಮೂರ್ತಿಯನ್ನು ನೋಡಿ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಚೋಳದ ಕಾಲದಲ್ಲಿ ಈ ದೇಗುಲವು ನಿರ್ಮಾಣಗೊಂಡಿದೆ. ಹಿಂದೆ ಈ ಪ್ರದೇಶವನ್ನು ರಾಜೇಂದ್ರ ಸಿಂಹ ನಗರ ಎಂದು ಕರೆಯಲಾಗುತ್ತಿತ್ತು. ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರು ದೇವಾಲಯ ಪ್ರಾಂಗಣವನ್ನು ನಿರ್ಮಿಸಿಕೊಟ್ಟಿದ್ದಾರೆ ಎಂಬುದಾಗಿ ಸ್ಥಳೀಯ ಇತಿಹಾಸ ಸಾರುತ್ತಿದೆ.

ADVERTISEMENT

ಸ್ತಬ್ಧ ಚಿತ್ರದ ವಿಶೇಷತೆ: ಕಳೆದ ಸೆಪ್ಟೆಂಬರ್‌ನಲ್ಲೇ ಇದರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಸದ್ಯ ಶೇ 70ರಷ್ಟು ಕಾಮಗಾರಿ ಮುಗಿದಿದೆ. ಪ್ರತಿ ನಿತ್ಯ 20 ಮಂದಿ ಕಲಾವಿದರು ಅಂಬೆಗಾಲು ಕೃಷ್ಣನಿಗೆ ಬೆವರು ಸುರಿದ್ದಾರೆ.

60X40 ಅಡಿ ಎತ್ತರ ಹೊಂದಿರುವ ಸ್ತಬ್ಧ ಚಿತ್ರದಲ್ಲಿ, 13X30ರಷ್ಟು ಎತ್ತರ ಹಾಗೂ ಉದ್ದವನ್ನು ಅಂಬೆಗಾಲು ಕೃಷ್ಣನ ಮೂರ್ತಿ ಆವರಿಸಿಕೊಂಡಿದೆ. ಸ್ತಬ್ಧ ಚಿತ್ರದ ಮುಂಭಾಗ ಕೀರ್ತನೆ ಹಾಡುವ ಭಂಗಿಯಲ್ಲಿ ಪುರಂದಾಸರ ಪ್ರತಿಮೆಯನ್ನು ಇಡಲಾಗಿದೆ. ಇದರ ಹಿಂದೆ ಬೃಹತ್ ನವಿಲುಗರಿ, ಅದರ ಹಿಂದೆ ಅಂಬೆಗಾಲು ಕೃಷ್ಣ, ಇದರ ಹಿಂದೆ ನವಿಲು ಮುಖವನ್ನು ಜೋಡಿಸಲಾಗಿದೆ. ಸ್ತಬ್ಧ ಚಿತ್ರ ಅಕ್ಕ ಪಕ್ಕದಲ್ಲಿ ದೇವಾಲಯ ಹಾಗೂ ಸ್ಥಳ ಪುರಣಾದ ಕುರಿತು ಮಾಹಿತಿ ಅಳವಡಿಸಲಾಗಿದೆ. ಅಂಬೆಗಾಲು ಕೃಷ್ಣನ ಸ್ತಬ್ಧ ಚಿತ್ರದಲ್ಲಿ ಕೃಷ್ಣನಿಗೆ ಬೆಣ್ಣೆ ಅಲಂಕಾರ ಮಾಡಿರುವುದು ಮೂರ್ತಿಯನ್ನು ನಿರ್ಮಾಣ ಮಾಡಲಾಗಿರುವುದು ಇದರ ಮತ್ತೊಂದು ವಿಶೇಷ.

₹11 ಲಕ್ಷ ವೆಚ್ಚ: ಅಂಬೆಗಾಲು ಕೃಷ್ಣ ಸ್ತಬ್ಧ ಚಿತ್ರದ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯಿತಿ ₹11 ಲಕ್ಷ ವ್ಯಯಿಸುತ್ತಿದೆ. ನಿರ್ಮಿತಿ ಕೇಂದ್ರದ ಮೂಲಕ ಕಲಾವಿದನಿಗೆ ಹಸ್ತಾಂತರ ಮಾಡಲಾಗಿದೆ.

‘ಅಪ್ರಮೇಯ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಿದ್ದೆ. ಇದು ಸ್ತಬ್ಧ ಚಿತ್ರ ನಿರ್ಮಾಣದ ಹಂತದಲ್ಲಿ ಸಹಾಯ ಮಾಡಿತು. ಇಷ್ಟ ಪಟ್ಟು ಅಲ್ಲ ತುಂಬಾ ಆಸೆಯಿಂದ ಇದನ್ನು ನಿರ್ಮಿಸುತ್ತಿದ್ದೇನೆ’ ಎಂದು ಕಲಾವಿದ ರವೀಂದ್ರ ಹೇಳುತ್ತಾರೆ.

ರವೀಂದ್ರ ಈ ಹಿಂದೆಯೂ ಹಲವು ಸ್ತಬ್ಧಚಿತ್ರಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. 2011ರಲ್ಲಿ ಗಣರಾಜೋತ್ಸವದಂದು ರಾಜ್ಯ ಪ್ರತಿನಿಧಿಸಿದ್ದ ಭೂತರಾಧನೆಯ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ ಪಡೆದುಕೊಂಡಿತ್ತು. ಆ ಕಾರ್ಯದಲ್ಲಿ ರವೀಂದ್ರ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

*
ಬಹಳ ಇಷ್ಟಪಟ್ಟು ಈ ಕಲಾಕೃತಿ ಮಾಡುತ್ತಿದ್ದೇನೆ. ಭಾನುವಾರ ಸ್ತಬ್ಧಚಿತ್ರದ ಕಾಮಗಾರಿ ಪೂರ್ಣಗೊಳ್ಳಲಿದೆ.
–ರವೀಂದ್ರ ಸಿರಿವರ, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.