ADVERTISEMENT

ರಾಮನಗರ: ಮೂಲಸೌಕರ್ಯಕ್ಕೆ ಅಭಿವೃದ್ಧಿ ಶುಲ್ಕ ನಿಗದಿ

ಮೂರು ಬಡಾವಣೆಗಳಲ್ಲಿ ಪ್ರತಿ ಚದರ ಅಡಿಗೆ ₹200 ನಿಗದಿಪಡಿಸಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

ಓದೇಶ ಸಕಲೇಶಪುರ
Published 11 ಫೆಬ್ರುವರಿ 2025, 4:49 IST
Last Updated 11 ಫೆಬ್ರುವರಿ 2025, 4:49 IST
<div class="paragraphs"><p>ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ</p></div>

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

   

ರಾಮನಗರ: ವಿವಾದಕ್ಕೆ ಕಾರಣವಾಗಿದ್ದ ರಾಮನಗರದ ಜೀಗೇನಹಳ್ಳಿಯ ಅರ್ಕಾವತಿ ಬಡಾವಣೆ, ಅರ್ಚಕರಹಳ್ಳಿಯ ಹೆಲ್ತ್ ಸಿಟಿ ಹಾಗೂ ಚನ್ನಪಟ್ಟಣದ ಸುಣ್ಣಘಟ್ಟದ ಕಣ್ವ ಬಡಾವಣೆಗಳಿಗೆ ಮೂಲಸೌಕರ್ಯದ ಕಾಲ ಸನಿಹವಾಗಿದೆ.‌ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಲು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ (ರುಡಾ) ಇದೀಗ ಮುಂದಾಗಿದೆ. ಅದಕ್ಕಾಗಿ, ಪ್ರತಿ ಚದರ ಅಡಿಗೆ ₹200 ಅಭಿವೃದ್ಧಿ ಶುಲ್ಕ ಸಂಗ್ರಹಿಸಲಿದೆ.

ಹಿಂದೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವಿದ್ದಾಗ ಮೂರು ಬಡಾವಣೆಗಳನ್ನು ನಿರ್ಮಿಸಲಾಗಿತ್ತು. ಒಟ್ಟು 1,837 ನಿವೇಶನಗಳ ಪೈಕಿ 1,246 ನಿವೇಶನಗಳನ್ನು ಹಂಚಿಕೆ ಮೂಲಕ ಹಾಗೂ 430 ನಿವೇಶನಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ನಿವೇಶನ ಖರೀದಿಸಿದವರಿಗೆ 10 ವರ್ಷವಾದರೂ ಕ್ರಯಪತ್ರ ಕೈ ಸೇರಿರಲಿಲ್ಲ.

ADVERTISEMENT

ಏನಾಗಿತ್ತು?: 43 ಎಕರೆ 29 ಗುಂಟೆ ಇರುವದ ಅರ್ಕಾವತಿ ಬಡಾವಣೆ, 7 ಎಕರೆ 36 ಗುಂಟೆ ಇರುವ ಹೆಲ್ತ್ ಸಿಟಿ ಬಡಾವಣೆ ಹಾಗೂ 49 ಎಕರೆ 2 ಗುಂಟೆ ಇರುವ ಕಣ್ವ ಬಡಾವಣೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದವು. ಈ ಪೈಕಿ, ಕಣ್ವ ಮತ್ತು ಜಿಗೇನಹಳ್ಳಿ ಬಡಾವಣೆಗಳು ಅಧಿಕೃತ ನಕ್ಷೆಯೇ ಇಲ್ಲದೆ ಹಂಚಿಕೆಯಾಗಿದ್ದವು. ಇನ್ನು ಹೆಲ್ತ್ ಸಿಟಿಯ ಭೂ ಮಾಲೀಕತ್ವವು ಮೂಲ ಖಾತೆದಾರರ ಹೆಸರಿನಲ್ಲೇ ಉಳಿದಿತ್ತು.

ಮುಂದೆ ರಾಮನಗರ –ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವನ್ನು ವಿಭಜಿಸಿ, ಎರಡೂ ನಗರಗಳಿಗೆ ಪ್ರತ್ಯೇಕವಾಗಿ ಪ್ರಾಧಿಕಾರವನ್ನು ರಚಿಸಲಾಯಿತು. ಆದರೆ, ಹಿಂದೆ ಇದ್ದ ಬಡಾವಣೆಗಳ ಅಭಿವೃದ್ಧಿ ಜವಾವ್ದಾರಿ ರಾಮನಗರ ಪ್ರಾಧಿಕಾರದ್ದಾಯಿತು. ಬಡಾವಣೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಹಸ್ತಾಂತರಿಸಿರೆ ಖಾತೆ ಮಾಡಿಕೊಡುವುದಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಹೇಳಿದ್ದವು.

ಸರ್ಕಾರ ಸಮ್ಮತಿ: ಜಟಿಲವಾಗಿದ್ದ ಸಮಸ್ಯೆಯನ್ನು ಬಗೆಹರಿಸಲು ಪ್ರಾಧಿಕಾರವು ಸರ್ಕಾರದೊಂದಿಗೆ ಸತತ ಪತ್ರ ವ್ಯವಹಾರ ನಡೆಸಿತ್ತು. ವಿಷಯವು ಕೆಡಿಪಿ ಸಭೆಗಳಲ್ಲೂ ಪ್ರತಿಧ್ವನಿಸುತ್ತಿತ್ತು. ಕಡೆಗೆ ಸಚಿವ ಸಂಪುಟದ ಅಂಗಳ ತಲುಪಿತ್ತು. ಕೆಲ ನಿಯಮಗಳಿಗೆ ಒಳಪಟ್ಟು ಕ್ರಯಪತ್ರ ನೀಡಲು ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಮೂಲಸೌಕರ್ಯ ಅಭಿವೃದ್ಧಿ ಕುರಿತು ಪ್ರಶ್ನೆ ಎದ್ದಿತ್ತು.

ಆರ್ಥಿಕ ಬರದಲ್ಲಿರುವ ಪ್ರಾಧಿಕಾರದ ಬಳಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಅನುದಾನವಿಲ್ಲ. ಹಾಗಾಗಿ, ನಿವೇಶನ ಖರೀದಿದಾರರಿಂದಲೇ ಅಭಿವೃದ್ಧಿ ಶುಲ್ಕ ಪಡೆಯಲು ಅನುಮತಿ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಅದರಂತೆ, ಮೂರೂ ಬಡಾವಣೆಗಳ ನಿವೇಶನ ಮಾಲೀಕರಿಂದ ಅಭಿವೃದ್ಧಿ ಶುಲ್ಕವಾಗಿ ಪ್ರತಿ ಚದರ ಅಡಿಗೆ ₹200 ಪಡೆಯಲು ಇಲಾಖೆಯಿಂದ ಆದೇಶವಾಗಿದೆ.

ಮೂಲಸೌಕರ್ಯಕ್ಕೆ ಬೇಕು ₹88 ಕೋಟಿ

‘ಮೂರು ಬಡಾವಣೆಗಳಿಗೆ ವಿದ್ಯುತ್ ಕುಡಿಯುವ ನೀರು ರಸ್ತೆ ಒಳಚರಂಡಿ ಸೇರಿದಂತೆ ಮೂಸೌಕರ್ಯ ಕಲ್ಪಿಸಲು ₹88.77 ಕೋಟಿ ಬೇಕಿದೆ. ಜಿಗೇನಹಳ್ಳಿ ಬಡಾವಣೆಗೆ ₹35.95 ಕೋಟಿ ಹೆಲ್ತ್ ಸಿಟಿ ಬಡಾವಣೆಗೆ ₹6.85 ಕೋಟಿ ಹಾಗೂ ಕಣ್ವ ಬಡಾವಣೆಗೆ ₹45.95 ಕೋಟಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು ₹88.77 ಕೋಟಿ ಅಂದಾಜು ಮೊತ್ತದ ಪ್ರಸ್ತಾವವನ್ನು ಪ್ರಾಧಿಕಾರದಿಂದ ಸಿದ್ದಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳಿಸಲಾಗಿತ್ತು’ ಎಂದು ಪ್ರಾಧಿಕಾರದ ಆಯುಕ್ತ ಶಿವನಂಕಾರಿ ಗೌಡ ‘ಪ್ರಜಾವಾಣಿಗೆ ತಿಳಿಸಿದರು. ಮೂರೂ ಬಡಾವಣೆಗಳ ನಿವೇಶನದ ಅಳತೆ ಒಟ್ಟು 2174567 ಚದರ ಅಡಿ ಇದೆ. ಮೂಲಸೌಕರ್ಯ ಒದಗಿಸಲು ₹88.77 ಕೋಟಿ ಅಗತ್ಯವಿದೆ. ಅದನ್ನು ನಿವೇಶನದಾರರಿಂದಲೇ ಸಂಗ್ರಹಿಸಬೇಕಾದರೆ ಅವರಿಗೆ ಪ್ರತಿ ಚದರ ಅಡಿಗೆ ₹400 ವಿಧಿಸಬೇಕು. ಇದು ಅವರಿಗೆ ಹೊರೆಯಾಗುತ್ತದೆ ಎಂದು ₹200 ನಿಗದಿಪಡಿಸಿ ಉಳಿದ ಮೊತ್ತವನ್ನು ಪರ್ಯಾಯ ಮೂಲದಿಂದ ಹೊಂದಿಸಲು ಪ್ರಾಧಿಕಾರ ನಿರ್ಧರಿಸಿ. ನಿವೇಶನದಾರರಿಂದ ₹200ರಂತೆ ₹43.43 ಕೋಟಿ ಅಭಿವೃದ್ಧಿ ಶುಲ್ಕ ಸಂಗ್ರಹವಾಗುತ್ತದೆ ಎಂದು ಮೂಲಗಳು ಹೇಳಿವೆ.

‘ಅನುದಾನಕ್ಕೆ ಶಾಸಕರ ನೇತೃತ್ವದಲ್ಲಿ ಸಭೆ’

ಮಾಜಿ ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರ ಶ್ರಮದಿಂದಾಗಿ ನನೆಗುದಿಗೆ ಬಿದ್ದಿದ್ದ ಈ ಬಡಾವಣೆಗಳ ಸಮಸ್ಯೆಗೆ ಮುಕ್ತಿ ಸಿಗುತ್ತಿದೆ. ನಿವೇಶನದಾರರಿಂದ ಪ್ರತಿ ಚದರ ಅಡಿಗೆ ₹200ರಂತೆ ಸಂಗ್ರಹಿಸುವ ಶುಲ್ಕವು ಬಡಾವಣೆಗಳ ಅಭಿವೃದ್ಧಿಗೆ ಸಾಲದು. ಅಗತ್ಯವಿರುವ ₹88.77 ಕೋಟಿ ಮೊತ್ತದ ಅರ್ಧದಷ್ಟು ಮಾತ್ರ ಸಂಗ್ರಹವಾಗುತ್ತದೆ. ಹಾಗಾಗಿ ಸದ್ಯದಲ್ಲೇ ಶಾಸಕರ ನೇತೃತ್ವದಲ್ಲಿ ನಿವೇಶನದಾರರ ಜೊತೆ ಸಭೆ ನಡೆಸಲಾಗುವುದು. ಶಾಸಕರ ಮೂಲಕ ಸರ್ಕಾರಕ್ಕೆ ಅನುದಾನ ಕೋರಲಾಗುವುದು. ಶೀಘ್ರ ಸಭೆ ದಿನಾಂಕ ನಿಗದಿಪಡಿಸಿ ನಿವೇಶನದಾರರಿಗೆ ಆಹ್ವಾನ ನೀಡಲಾಗುವುದು. ಬಳಿಕ ₹200ರಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳಲು ಚಾಲನೆ ನೀಡಲಾಗುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.