ಕನಕಪುರ: ರಾಮನಗರ ಜಿಲ್ಲೆ ಹೆಸರು ಬದಲಿಸಲು ಹೊರಟಿರುವುದು ಖಂಡನೀಯ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಅಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದಿಂದ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಜಿಲ್ಲೆ ಹೆಸರು ಬದಲಾವಣೆ ಮಾಡಿ ಭೂಮಿಗೆ ಹೆಚ್ಚಿನ ಬೆಲೆ ಬರಬಹುದು. ಬೆಲೆ ಬಂದರೆ ರೈತರು ಕೃಷಿ ಮಾಡುವುದನ್ನು ಬಿಟ್ಟು ತಮ್ಮ ಜಮೀನು ಮಾರಾಟ ಮಾಡಿ ತಮ್ಮದೇ ಜಮೀನಿನಲ್ಲಿ ಕಾವಲುಗಾರ, ಕೂಲಿ ಕಾರ್ಮಿಕರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ‘ರಾಮನಗರವನ್ನು ನವಬೆಂಗಳೂರಾಗಿ ಮಾಡಿದರೆ ಚೆನ್ನಾಗಿ ಅಭಿವೃದ್ಧಿ ಆಗಲಿದೆ ಎಂದು ಹೇಳುತ್ತಿದ್ದೀರಿ. ನಾಳೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆ ಜನರು ಬೆಂಗಳೂರು ಜಿಲ್ಲೆಯನ್ನಾಗಿ ಮಾಡಿ ಎಂದರೆ ಮಾಡುತ್ತೀರಾ’ ಎಂದು ಪ್ರಶ್ನಿಸಿದರು.
35 ವರ್ಷಗಳಿಂದ ಚನ್ನಪಟ್ಟಣದ ಅಭಿವೃದ್ಧಿಗೆ ಗಮನ ಕೊಡದ ಉಪಮುಖ್ಯಮಂತ್ರಿ ಶಿವಕುಮಾರ್ ಅವರು, ರಾಜಕೀಯ ಲಾಭಕ್ಕಾಗಿ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಜನರನ್ನು ನಂಬಿಸಿ ವಂಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸಂಘಟನೆ ಮುಖಂಡರಾದ ಬಸವರಾಜು, ಕೆ.ಎಸ್.ಭಾಸ್ಕರ್, ನಂಜರಾಜ ಅರಸು, ಕುಮಾರ್, ರವಿ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.