ADVERTISEMENT

ರಾಮನಗರ: ಬಾಂಧವ್ಯ ಬೆಸೆಯಲು ರಾಮೋತ್ಸವ

ರಾಮೋತ್ಸವ ನಿಮಿತ್ತ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದ ಶಾಸಕ ಇಕ್ಬಾಲ್ ಹುಸೇನ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:13 IST
Last Updated 15 ಡಿಸೆಂಬರ್ 2025, 2:13 IST
<div class="paragraphs"><p>ರಾಮೋತ್ಸವ ಪ್ರಯುಕ್ತ ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. </p></div>

ರಾಮೋತ್ಸವ ಪ್ರಯುಕ್ತ ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

   

ರಾಮನಗರ: ‘ಈ ನೆಲಕ್ಕೆ ರಾಮನ ಹೆಸರಿದೆ. ರಾಮ ದೇವರು ತಮ್ಮ ಪರಿವಾರದೊಂದಿಗೆ ನೆಲೆಸಿದ್ದ‌ ಐತಿಹ್ಯ ಈ ನೆಲಕ್ಕಿದೆ. ರಾಮನ ಹೆಸರಿನ‌ ಮೂಲಕ ಇಡೀ ಕ್ಷೇತ್ರದ ಜನರಲ್ಲಿ ಸಾಮರಸ್ಯ ಮತ್ತು ಬಾಂಧವ್ಯ ಬೆಸೆಯುವ ಉದ್ದೇಶದಿಂದ ರಾಮೋತ್ಸವ ನಡೆಸಲಾಗುತ್ತಿದೆ. ಇಡೀ ತಾಲ್ಲೂಕಿನ ಜನರು ಒಗ್ಗೂಡಿ ಈ ಉತ್ಸವವನ್ನು ಆಚರಿಸುತ್ತಿದ್ದೇವೆ’ ಎಂದು ಎಚ್.ಎ. ಶಾಸಕ‌‌ಇಕ್ಬಾಲ್ ಹುಸೇನ್‌ ಹೇಳಿದರು.

ರಾಮೋತ್ಸವ ನಿಮಿತ್ತ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಮೋತ್ಸವದ ಮೂಲಕ ಕ್ಷೇತ್ರದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯ ಮಾಡಲಾಗುತ್ತಿದೆ. ಈ ಉತ್ಸವ ಒಂದು ವರ್ಷಕ್ಕೆ ಸೀಮಿತವಲ್ಲ. ಬದಲಿಗೆ ಪ್ರತಿ ವರ್ಷವ ಆಚರಿಸಲಾಗುವುದು’ ಎಂದರು.

ADVERTISEMENT

‘ದೇವನೊಬ್ಬನೆ. ಆದರೆ, ನಾವು ಬೇರೆ ಬೇರೆ ಹೆಸರುಗಳಿಮದ ಕರೆಯುತ್ತೇವೆ. ನಮ್ಮನ್ನೆಲ್ಲ ಕಾಪಾಡುವ ಶಕ್ತಿ ಆ ಭಗವಂತ. ‌‌ನಾನು ಶಾಸಕನಾದ ಆರಂಭದಲ್ಲೇ ಇಂತಹ ಕಾರ್ಯಕ್ರಮ‌ ಆಯೋಜಿಸಲು ಉದ್ದೇಶಿಸಿದ್ದೆ. ಇಂದು ಅದು ಸಾಧ್ಯವಾಗಿದೆ. ಇದಕ್ಕೆ‌ ಸಹಕಾರ‌ ನೀಡಿದ‌ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

‘ರಾಮೋತ್ಸವದ ಪ್ರಯುಕ್ತ‌‌ ಇಂದು ಕಬ್ಬಡಿ, ವಾಲಿಬಾಲ್, ಥ್ರೋಬಾಲ್‌ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ, ಅಡುಗೆ ಮೊದಲಾದ ಸ್ಪರ್ಧೆಗಳನ್ನು ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಆಯೋಜಿಸಲಾಗುವುದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಉಡುಗೊರೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ ‌ನೀಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ನಡೆಸಿ ಪ್ರತಿಯೊಬ್ಬರಿಗೂ ತಿರುಪತಿ ಲಾಡು ವಿತರಿಸಲಾಗುವುದು. ಕೊನೆಯ ದಿನದಂದು ‌ಕ್ಷೇತ್ರದ ಎಲ್ಲಾ ಗ್ರಾಮಗಳ ಗ್ರಾಮದೇವತೆಗಳ‌ ಪೂಜೆಗಳನ್ನು ಕರೆಯಿಸಿ, ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುವುದು. ನೂರಕ್ಕೂ ಹೆಚ್ಚು ಪೂಜಾ ಕುಣಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಮಾತನಾಡಿ, ‘ಕೆಲ‌ ಶಕ್ತಿಗಳು ತಮ್ಮ ಲಾಭಕ್ಕಾಗಿ ಮತೀಯ ಭಾವನೆ ಸೃಷ್ಟಿಸಿ ಸಮಾಜದಲ್ಲಿ ಬಿರುಕು ಮೂಡಿಸುತ್ತಿವೆ. ಆದರೆ, ಇಂತಹ ಕೆಲಸಕ್ಕೆ ಕ್ಷೇತ್ರದಲ್ಲಿ ಆಸ್ಪದ ನೀಡದೆ ರಾಮೋತ್ಸವದ ಮೂಲಕ ಎಲ್ಲರ‌ ಮನಸ್ಸು ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ರಾಮನ ಹೆಸರಿನಲ್ಲಿ ಅಧಿಕಾರ‌ ಹಿಡಿಯುವವರಿಗೆ ಇಂತಹ ಯೋಚನೆಗಳು ಬಂದಿರಲಿಲ್ಲ’ ಎಂದು ಕುಟುಕಿದರು.

ಬಮೂಲ್‌ ನಿರ್ದೇಶಕ ಪಿ. ನಾಗರಾಜ್ ಮಾತನಾಡಿ, ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಮ್ಮ ಶಾಸಕ‌ರು ರಾಮೋತ್ಸವ ಆಚರಿಸುತ್ತಿರುವುದು ಮಾದರಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣ. ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾಗಿದ್ದರೂ ಇಂತಹ ಕಾರ್ಯಕ್ರಮ ಮಾಡಿರಲಿಲ್ಲ. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಇಂತಹ ಮಾದರಿ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭಾ ಉಪಾಧ್ಯಕ್ಷೆ ‌ಆಯಿಷಾ ಬಾನು, ನಗರಸಭೆ ಸದಸ್ಯರು ಹಾಗೂ ಇತರರು ಇದ್ದರು.

ಎಚ್‌ಡಿಕೆ ವಿರುದ್ಧ ವಾಗ್ದಾಳಿ ‘

ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ಇಲ್ಲಿನ ಜನರ ಕಷ್ಟ–ಸುಖ ಕೇಳಲಿಲ್ಲ. ಅಭಿವೃದ್ಧಿಗೂ ಯಾವುದೇ ಕೊಡುಗೆ ನೀಡಲಿಲ್ಲ. ಆದರೆ‌ ನಾನು ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಅರ್ಕಾವತಿ ನದಿ ದಂಡೆಯಲ್ಲಿ‌ ಉದ್ಯಾನ ಜಿಲ್ಲಾ‌ಕ್ರೀಡಾಂಗಣ ಅಭಿವೃದ್ಧಿ ನಗರಕ್ಕೆ‌ ಕಾವೇರಿ ನೀರು ಸರಬರಾಜು‌ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ‌ ಮೂಲಸೌಕರ್ಯ ಕಲ್ಪಿಸುವ ಕೆಲಸ‌ ಮಾಡಲಾಗುವುದು’ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವಿಸ್ಮರಣೀಯ ಕಾರ್ಯಕ್ರಮ

‘ರಾಮೋತ್ಸವವರು ಅವಿಸ್ಮರಣೀಯ ಹಾಗೂ ರಾಮನಗರದ ಇತಿಹಾಸದಲ್ಲಿ ‌ಉಳಿಯುವ ಕಾರ್ಯಕ್ರಮವಾಗಿದೆ. ತಾಲ್ಲೂಕಿನ ಎಲ್ಲಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮ ಇದಾಗಿದೆ. ಹಿಂದಿನ ಕ್ಲೋಸ್‌ಪೇಟೆಯನ್ನು ಕೆಂಗಲ್‌ ಹನುಮಂತಯ್ಯ ಅವರು ರಾಮನಗರ ಎಂದು ನಾಮಕರಣ ಮಾಡಿದರು. ಈ‌ ಹೆಸರನ್ನು ಬೆಳೆಸುವ ನಿಟ್ಟಿನಲ್ಲಿ ರಾಮೋತ್ಸವ ಆಚರಿಸಲಾಗುತ್ತಿದೆ. ಇಂತಹದ್ದೊಂದು ವೇದಿಕೆ ನಿರ್ಮಾಣಕ್ಕೆ ಕಾರಣರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಜಿ ಸಂಸದ‌ ಡಿ.ಕೆ. ಸುರೇಶ್ ಹಾಗೂ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ತಾಲ್ಲೂಕಿನ ಜನರ ಪರವಾಗಿ ಧನ್ಯವಾದ ಸಲ್ಲಿಸುವೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.