ADVERTISEMENT

ರಾಮನಗರ: ಇಂದಿನಿಂದ 4 ದಿನ ರಾಮೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:08 IST
Last Updated 15 ಜನವರಿ 2026, 7:08 IST
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ರಾಮೋತ್ಸವದ ಕುರಿತು ಮಾಹಿತಿ ನೀಡಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಹಾಗೂ ಇತರರು ಇದ್ದಾರೆ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ರಾಮೋತ್ಸವದ ಕುರಿತು ಮಾಹಿತಿ ನೀಡಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ನಗರದಲ್ಲಿ ಜ. 15ರಿಂದ 18ರವರೆಗೆ ನಾಲ್ಕು ದಿನ ರಾಮೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಉತ್ಸವವು ಕ್ಷೇತ್ರದಲ್ಲಿ ಹೊಸ ಚರಿತ್ರೆ ಬರೆಯಲಿದೆ. ಇದು ಪಕ್ಷಾತೀತ ಮತ್ತು ಧರ್ಮಾತೀತವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್, ವಿವಿಧ ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ನಡೆಯಲಿವೆ’ ಎಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯೋಗಾಭ್ಯಾಸಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಎಲ್ಲರಿಗೂ ಯೋಗ ಮ್ಯಾಟ್‌, ಟೀ ಶರ್ಟ್‌ ಹಾಗೂ ಉಡುಗೊರೆಯೊಂದನ್ನು ನೀಡಲಾಗುವುದು. ಎಲ್ಲಾ ವಾರ್ಡುಗಳಲ್ಲಿ ನಡೆಯುವ ರಂಗೋಲಿ ಸ್ಪರ್ಧೆಗೆ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗೆ 5 ಸಾವಿರ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಎಸ್ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 4800 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಗುವುದು’ ಎಂದು ಹೇಳಿದರು.

‘ಶ್ರೀನಿವಾಸ ಕಲ್ಯಾಣೋತ್ಸವ ಪ್ರಯುಕ್ತ ತಿರುಪತಿ ಮಾದರಿ ದೇವಾಲಯ ನಿರ್ಮಿಸಲಾಗುವುದು. ಎಲ್ಲರಿಗೂ ತಿರುಪತಿ ಲಡ್ಡು ವಿತರಿಸಿ, ಮನೆ ಮನೆಗೂ ಹಂಚಲಾಗುವುದು. ಕ್ಷೇತ್ರದ ಸುಮಾರು 450 ಗ್ರಾಮದೇವತೆಗಳ ಭವ್ಯ ಮೆರವಣಿಗೆಯು 2 ಸಾವಿರ ತಮಟೆ– ನಗಾರಿಯೊಂದಿಗೆ ನಡೆಯಲಿದೆ. ಜೊತೆಗೆ 130 ಪಲ್ಲಕ್ಕಿಗಳ ಮೆರವಣಿಗೆ ಇರಲಿದೆ. ಗಣೇಶ, ಚಾಮುಂಡೇಶ್ವರಿ ಮಹಿಮೆ ಹಾಗೂ ರಾಮನಗರಕ್ಕೆ ರಾಮನ ನಂಟಿನ ಸ್ತಬ್ಧಚಿತ್ರದ ಪ್ರದರ್ಶನ ಆಯ್ದ ಸ್ಥಳಗಳಲ್ಲಿ ನಡೆಯಲಿದೆ’ ಎಂದರು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ ಕುಮಾರ್‌, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಮುಖಂಡರಾದ ಸಿಎನ್‌ ಆರ್‌ ವೆಂಕಟೇಶ್‌, ಅಶೋಕ್‌, ಜಯಣ್ಣ, ರಘು, ರಾಜಶೇಖರ್‌, ನಾಗಮ್ಮ, ಅಜ್ಮತ್‌, ನರಸಿಂಹಯ್ಯ, ಲೋಹಿತ್‌, ನಾಗೇಶ್‌, ಪುಟ್ಟಣ್ಣ, ಶ್ರೀನಿವಾಸ್‌, ಗೋವಿಂದರಾಜು, ಶಿವಸ್ವಾಮಿ, ರಮೇಶ್‌ ಹಾಗೂ ಇತರರು ಇದ್ದರು.

Quote - ರಾಮೋತ್ಸವವನ್ನು ಚುನಾವಣೆ ದೃಷ್ಟಿಯಿಂದ ಮಾಡುತ್ತಿಲ್ಲ. ಜನರನ್ನು ಸಾಂಸ್ಕೃತಿಕವಾಗಿ ಬೆಸೆಯುವ ರಾಮೋತ್ಸವವನ್ನು ಎರಡ್ಮೂರು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಮಾಡಲಾಗುವುದು – ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

ಯಾವಾಗ ಏನು?

ಜ. 15: ನಗರದ ಬನ್ನಿ ಮಂಟಪದಲ್ಲಿ ಬೆಳಿಗ್ಗೆ 7 ಗಂಟೆಗೆ 101 ಪುರೋಹಿತರಿಂದ ಶ್ರೀ ರಾಮತಾರಕ ಯಜ್ಞ. ಜ. 16: ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 5.30ರಿಂದ 7.30ರವರೆಗೆ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗಾಭ್ಯಾಸ. ಬೆಳಿಗ್ಗೆ 8ರಿಂದ 10ವರೆಗೆ ರಂಗೋಲಿ ಸ್ಪರ್ಧೆ. 10ರಿಂದ 11ರವರೆಗೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ. ಅದೇ ವೇಳೆಗೆ ಕ್ರೀಡಾಂಗಣದಲ್ಲಿ ರಂಗ ಗೀತೆಗಳು ವಾಯ್ಸ್ ಆಫ್ ರಾಮನಗರ ಸ್ಪರ್ಧೆ. ಮಧ್ಯಾಹ್ನ 3ರಿಂದ 4ರವರೆಗೆ ಕರ್ನಾಟಕ ಸಾಹಸ ಕಲಾ ಕೇಂದ್ರದಿಂದ ಕ್ರೀಡಾಂಗಣದಲ್ಲಿ ಮಲ್ಲಕಂಬ ಪ್ರದರ್ಶನ. ಸಂಜೆ 4ಕ್ಕೆ ದಂಪತಿಗಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆ–ತೊಡುಗೆ ಸ್ಪರ್ಧೆ. ಸಂಜೆ 6ಕ್ಕೆ ನಗರದಲ್ಲಿ ಕ್ಷೇತ್ರದ ಗ್ರಾಮದೇವತೆಗಳ ಮೆರವಣಿಗೆ.ವಿವಿಧ ಕಲಾ ತಂಡಗಳು ಹಾಗೂ ಮಡಿಕೇರಿಯ ಸ್ತಬ್ಧಚಿತ್ರಗಳ ಪ್ರದರ್ಶನ. * ಜ. 17: ಬೆಳಿಗ್ಗೆ 6ರಿಂದ 8ರವೆಗೆ ಆಂಜನೇಯ ಗೋಪುರದ ಮುಂಭಾಗದಿಂದ 16 ವರ್ಷ ಮೇಲ್ಪಟ್ಟ ಮಹಿಳೆ ಮತ್ತು ಪುರುಷರಿಗೆ ಮ್ಯಾರಾಥಾನ್. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕ್ರೀಡಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ. ಸಂಜೆ 5ರಿಂದ 7ರವರೆಗೆ ಶ್ರೀನಿವಾಸ ಕಲ್ಯಾಣೋತ್ಸವ. 7 ಗಂಟೆಗೆ ಸಿನಿಮಾ ಗೀತೆ ದೇಶಭಕ್ತಿ ಗೀತೆ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ. * ಜ. 18: ಬೆಳಿಗ್ಗೆ 8ಕ್ಕೆ ಕೆಂಗಲ್ ಹನುಮಂತಯ್ಯ ಸ್ಫೋರ್ಟ್ಸ್‌ ಆ್ಯಂಡ್ ಕಲ್ಚರಲ್ ಸೆಂಟರ್‌ನಲ್ಲಿ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ. ಶಾಂತಿನಗರದ ಈಜುಕೊಳದಲ್ಲಿ ಈಜು ಸ್ಪರ್ಧೆ. 11 ಗಂಟೆಗೆ ಎಲ್‌ಕೆಜಿ–ಯುಕೆಜಿ ಹಾಗೂ 1ರಿಂದ 4ನೇ ತರಗತಿ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ. 10ಕ್ಕೆ ಟಿಪ್ಪುನಗರದ ಯೂನಿವರ್ಸಲ್ ಪಬ್ಲಿಕ್ ಶಾಲೆಯಲ್ಲಿ ಮೆಹಂದಿ ಸ್ಪರ್ಧೆ. ಸಂಜೆ 5.30ರಿಂದ 6.30ರವರೆಗೆ ಕ್ರೀಡಾಂಗಣದಲ್ಲಿ ದೇಹದಾರ್ಡ್ಯ ಸ್ಪರ್ಧೆ. ಸಂಜೆ 6.30ರಿಂದ ಅರ್ಜನ್ ಜನ್ಯ ಮತ್ತು ತಂಡದ ಸಂಗೀತ ಸಂಜೆ.

ಸಂಗೀತ ಸಂಜೆಗೆ ತಾರಾ ಮೆರಗು

ಕಡೆಯ ದಿನವಾದ 18ರಂದು ಸಂಜೆ ನಡೆಯುವ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ನೇತೃತ್ವದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿನಿಮಾ ನಟರಾದ ಕಿಚ್ಚ ಸುದೀಪ್ ಧ್ರುವ ಸರ್ಜಾ ನಟಿಯರಾದ ರಚಿತಾ ರಾಮ್ ರಾಗಿಣಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸಚಿವ ಜಮೀರ್‌ ಅಹಮದ್‌ ಖಾನ್‌ ಉದ್ಘಾಟಿಸಲಿದ್ದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹುಸೇನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.