ಮಾಗಡಿ: ರಂಗನಾಥ ರಥೋತ್ಸವದ ಎರಡನೇ ದಿನ ನಡೆಯುವ ತೆಪ್ಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು.
ತಿರುಮಲೆಯಿಂದ ಭಾನುವಾರ ರಾತ್ರಿ ರಂಗನಾಥ ಉತ್ಸವ ಮೂರ್ತಿಯನ್ನು ತಂದು ತೆಪ್ಪದಲ್ಲಿ ಕೂರಿಸಿ ಗೌರಮ್ಮನ ಕೆರೆಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು.
ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್ಎಂ ರೇವಣ್ಣ ತೆಪೋತ್ಸವಕ್ಕೆ ಚಾಲನೆ ನೀಡಿದರು. ತೆಪ್ಪಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೂರಾರು ಭಕ್ತರು ತೆಪ್ಪೋತ್ಸವ ಕಣ್ತುಂಬಿಕೊಂಡರು.
ತೆಪ್ಪೋತ್ಸವದ ನಂತರ ರಾತ್ರಿ 12ಕ್ಕೆ ತಿರುಮಲೆ ರಂಗನಾಥ ದೇವಾಲಯದಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಲ್ಲಕ್ಕಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಬೆಳಗಿನ ಜಾವ 5ಕ್ಕೆ ದೇವಸ್ಥಾನದ ಮುಂಭಾಗಕ್ಕೆ ಬಂದಿತು. ವಿವಿಧ ವೇಷಧಾರಿಗಳು, ತಮಟೆ ವಾದ್ಯ ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆದವು.
ಅದ್ದೂರಿ ಬಾಣಬಿರಿಸು ಪ್ರದರ್ಶನ: ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ಬಾಣ,ಬಿರುಸುಗಳ ಪ್ರದರ್ಶನ ಮೆರುಗು ತಂದಿತು. ಒಂದು ತಾಸು ನಡೆದ ಪಟಾಕಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಹನುಮೋತ್ಸವ, ಆನೆ ಉತ್ಸವ ಸೇವೆ, ಪುಷ್ಪಯಾಗ ಸೇವೆ ಹಾಗೂ ಚಿಕ್ಕ ಗರುಡೋತ್ಸವದೊಂದಿಗೆ ರಂಗನಾಥ ರಥೋತ್ಸವಕ್ಕೆ ಏ.17 ರಂದು ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.