ADVERTISEMENT

ಎಳವೆಯಲ್ಲೇ ನೈತಿಕ ಮೌಲ್ಯ ಬಿತ್ತಿ: ವಿಜಯ್ ರಾಂಪುರ

ವಂದಾರಗುಪ್ಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ ಬೆಳಕು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:04 IST
Last Updated 8 ಫೆಬ್ರುವರಿ 2021, 3:04 IST
ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಏರ್ಪಡಿಸಿದ್ದ ಓದುವ ಬೆಳಕು ಕಾರ್ಯಕ್ರಮವನ್ನು ಸಾಹಿತಿ ವಿಜಯ್ ರಾಂಪುರ ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಏರ್ಪಡಿಸಿದ್ದ ಓದುವ ಬೆಳಕು ಕಾರ್ಯಕ್ರಮವನ್ನು ಸಾಹಿತಿ ವಿಜಯ್ ರಾಂಪುರ ಉದ್ಘಾಟಿಸಿದರು   

ಚನ್ನಪಟ್ಟಣ: ಮಕ್ಕಳಲ್ಲಿ ಅನುಕರಣಾ ಪ್ರವೃತ್ತಿ ಸದಾ ಜಾಗೃತವಾಗಿರುತ್ತದೆ. ನೈತಿಕ ಮೌಲ್ಯಗಳನ್ನು ಎಳವೆಯಲ್ಲಿಯೇ ಬಿತ್ತಿದರೆ ಭವಿಷ್ಯದಲ್ಲಿ ಉತ್ತಮ ಫಲ ಲಭಿಸುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಇಲಾಖೆಯಿಂದ ಈಚೆಗೆ ಏರ್ಪಡಿಸಿದ್ದ ಓದುವ ಬೆಳಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಓದುವ ಬೆಳಕು ವಿನೂತನ ಯೋಜನೆ ಪ್ರಶಂಸನೀಯ ಎಂದರು.

ADVERTISEMENT

ಗ್ರಾಮೀಣ ಭಾಗದ ಗ್ರಂಥಾಲಯಗಳಲ್ಲಿ ಸಹಸ್ರಾರು ಸಂಖ್ಯೆಯ ಅಮೂಲ್ಯ ಗ್ರಂಥಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಇದು ಮಕ್ಕಳ ಕಲಿಕೆ ಮತ್ತು ವ್ಯಕ್ತಿತ್ವ ನಿರ್ಮಿಸಿಕೊಳ್ಳುವಲ್ಲಿ ಉತ್ತಮ ಪ್ರಭಾವ ಮತ್ತು ಪ್ರೇರಣೆ ಒದಗಿಸುತ್ತದೆ. ಮೊಬೈಲ್ ಹಾವಳಿಯಿಂದ ನಲುಗುತ್ತಿರುವ ಮಕ್ಕಳ ಬದುಕಿಗೆ ಸಾಹಿತ್ಯ ಚೇತೋಹಾರಿಯಾಗಿದೆ. ಈ ಬಗ್ಗೆ ಪೋಷಕರು ಸಹ ಗಮನಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪಾಪಣ್ಣ ಮಾತನಾಡಿ, ಓದುವ ಹವ್ಯಾಸ ಸದಭಿರುಚಿಯ ಚಿಂತನೆಯನ್ನು ಹುಟ್ಟು ಹಾಕುತ್ತದೆ. ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಜ್ಞಾನಕ್ಕೆ ವಿಶೇಷ ಗೌರವ ಇದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಗ್ರಂಥಾಲಯಗಳು ದಾರಿದೀಪವಾಗಿವೆ ಎಂದರು.

ಜಾನಪದ ಗಾಯಕ ಚೌ.ಪು. ಸ್ವಾಮಿ, ವಂದಾರಗುಪ್ಪೆ ಗ್ರಾಮ ಪಂಚಾಯತಿ ಪಿಡಿಒ ಕೃಷ್ಣ, ಕಾರ್ಯದರ್ಶಿ ರಾಜೇಶ್, ಗ್ರಂಥಾಲಯ ಮೇಲ್ವಿಚಾರಕ ಶಿವರಾಂ, ದೈಹಿಕ ಶಿಕ್ಷಣ ಶಿಕ್ಷಕ ಗಂಗಣ್ಣ, ಶಿಕ್ಷಕರಾದ ಎಂ. ರತ್ನಮ್ಮ, ಕಲಾವತಮ್ಮ, ಗೌರಮ್ಮ, ಶ್ರೀನಿವಾಸ್, ಲೀಲಾವತಿ ಹಾಜರಿದ್ದರು. ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸದಸ್ಯತ್ವ ಕಾರ್ಡ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.