ADVERTISEMENT

ಹೋರಾಟಕ್ಕೆ ಸಿದ್ಧಲಿಂಗಯ್ಯ ಸ್ಫೂರ್ತಿ

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸೇವೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 3:18 IST
Last Updated 14 ಜೂನ್ 2021, 3:18 IST
ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಎಚ್‌.ಎಸ್‌. ದೊರೆಸ್ವಾಮಿ ಮತ್ತು ಡಾ.ಸಿದ್ಧಲಿಂಗಯ್ಯ ಅವರಿಗೆ ಕನ್ನಡಪರ ಸಂಘಟನೆಯ ಮುಖಂಡರು ನುಡಿ ನಮನ ಸಲ್ಲಿಸಿದರು
ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಎಚ್‌.ಎಸ್‌. ದೊರೆಸ್ವಾಮಿ ಮತ್ತು ಡಾ.ಸಿದ್ಧಲಿಂಗಯ್ಯ ಅವರಿಗೆ ಕನ್ನಡಪರ ಸಂಘಟನೆಯ ಮುಖಂಡರು ನುಡಿ ನಮನ ಸಲ್ಲಿಸಿದರು   

ಕನಕಪುರ: ‘ಸಾಹಿತ್ಯದ ಮೂಲಕ ಶೋಷಿತ ಸಮಾಜವನ್ನು ಜಾಗೃತಿಗೊಳಿಸಿ ಹೋರಾಟದ ಜ್ಯೋತಿ ಹಚ್ಚಿದ ಕವಿ ಡಾ.ಸಿದ್ಧಲಿಂಗಯ್ಯ ಅವರ ಆಚಾರ, ವಿಚಾರ ಸಾರ್ವಕಾಲಿಕವಾಗಿವೆ. ಸ್ವಾತಂತ್ರ‍್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರ ಸಾಮಾಜಿಕ ನಿಷ್ಠೆ ಪೂಜನೀಯವಾದುದು’ ಎಂದು ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಡಾ.ಕೆ.ಎಸ್. ಭಾಸ್ಕರ್ ತಿಳಿಸಿದರು.

ನಗರದ ಚನ್ನಬಸಪ್ಪ ವೃತ್ತದಲ್ಲಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ, ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮತ್ತು ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಇಬ್ಬರೂ ರಾಮನಗರ ಜಿಲ್ಲೆಯ ಹೆಮ್ಮೆಯ ಸುಪುತ್ರರಾಗಿದ್ದಾರೆ. ಸಮಾಜದ ಬದಲಾವಣೆಗಾಗಿ ತಮ್ಮ ಅಮೂಲ್ಯ ಜೀವನವನ್ನೇ ಮುಡುಪಾಗಿಟ್ಟಿದ್ದರು. ನೊಂದ ಸಮಾಜದ ಪರವಾಗಿ ಧ್ವನಿ ಎತ್ತಿದ ಅಮೂಲ್ಯ ರತ್ನಗಳು. ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಹಲವಾರು ಸಂಘಟನೆಗಳಿಗೆ ಹೋರಾಟದ ದೀಪವಾಗಿದ್ದರು. ಅವರ ಆದರ್ಶ, ಚಿಂತನೆಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ ಎಂದರು.

ADVERTISEMENT

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಸಿದ್ಧಲಿಂಗಯ್ಯ ಅವರು ಬಹುಜನ ಚಳವಳಿಗಳಿಂದ ಪ್ರೇರಣೆಗೊಂಡು ಸಮಾಜ ಸುಧಾರಕರಾದ ಬುದ್ಧ, ಬಸವ, ಪೆರಿಯಾರ್, ಅಂಬೇಡ್ಕರ್ ಅವರ ಚಿಂತನೆ, ತತ್ವ, ಸಿದ್ಧಾಂತಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಮೈಗೂಡಿಸಿಕೊಂಡಿದ್ದರು. ಸ್ವಾತಂತ್ರ್ಯ ನಂತರದಲ್ಲಿ ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ. ಅವರನ್ನು ಕುರಿತು ಮ್ಯೂಸಿಯಂ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ. ಚಂದ್ರ ಮಾತನಾಡಿ, ‘ಸಿದ್ಧಲಿಂಗಯ್ಯ ನಾಡು ಕಂಡ ಸಂವೇದನಾಶೀಲ ಜನಪರ ಕವಿ. ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಜನಪರ ಚಳವಳಿಗಳ ನಾಯಕರಾಗಿದ್ದರು. ಅವರ ಚಿಂತನೆ, ಆದರ್ಶ ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕುರುಪೇಟೆ ಮುತ್ತುರಾಜ್, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಅಪ್ಪಾಜಿ, ತಾಲ್ಲೂಕು ಅಧ್ಯಕ್ಷ ಅಂಗಡಿ ರಮೇಶ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಅಸ್ಗರ್ ಖಾನ್, ತಾಲ್ಲೂಕು ಉಪಾಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ವರದರಾಜು, ಹಾಸ್ಯ ಕಲಾವಿದ ನಗೆಮಳೆರಾಜ ಚಂದ್ರಾಜ್, ಅಖಿಲೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.