
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬನ್ನಿಕುಪ್ಪೆಯಲ್ಲಿರುವ ಜಾಮೀಯ ಮಸೀದಿ ಮತ್ತು ಮುಸ್ಲಿಂ ಚಾರಿಟೇಬಲ್ ಫಂಡ್ ಟ್ರಸ್ಟ್‌ನ ಜೆ.ಯು ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ದಾರುಲ್ -ಖುರಾನ್ ಕ್ಯಾಂಪಸ್ ಅನ್ನು ಶನಿವಾರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ರಾಮನಗರ: ‘ದ್ವೇಷದಿಂದ ಪ್ರೀತಿ ಸಂಪಾದಿಸಲು ಸಾಧ್ಯವಿಲ್ಲ. ದ್ವೇಷ ಬಿಟ್ಟು ಪರಸ್ಪರ ಪ್ರೀತಿಸೋಣ. ಪರಸ್ಪರ ಸಹಬಾಳ್ವೆಯಿಂದ ಬದುಕೋಣ. ನಾವು ಮೊದಲು ಭಾರತೀಯರು. ಆಮೇಲೆ ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ. ಸಂವಿಧಾನದ ಮೂಲತತ್ವಗಳಾದ ಧರ್ಮ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಎಲ್ಲರೂ ಪಾಲಿಸೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಬಿಡದಿ ಹೋಬಳಿಯ ಬನ್ನಿಕುಪ್ಪೆಯಲ್ಲಿರುವ ಜಾಮೀಯ ಮಸೀದಿ ಮತ್ತು ಮುಸ್ಲಿಂ ಚಾರಿಟೇಬಲ್ ಫಂಡ್ ಟ್ರಸ್ಟ್‌ನ ಜೆ.ಯು ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ದಾರುಲ್ -ಖುರಾನ್ ಕ್ಯಾಂಪಸ್ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ವಿದ್ಯೆಯಿಂದ ಮಾತ್ರ ಸಾಮಾಜಿಕ ಸಂಕೋಲೆಗಳಿಂದ ಮುಕ್ತರಾಗಬಹುದು ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಸಂವಿಧಾನದ ಕಾರಣಕ್ಕೆ ನಮಗೆ ಶಿಕ್ಷಣ ಮತ್ತು ಒಂದು ಮಟ್ಟಕ್ಕೆ ಸಮಾನತೆ ಸಿಕ್ಕಿದೆ’ ಎಂದರು.
‘ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಸಮರ್ಪಿಸುವಾಗ, ನಾವೀಗ ವೈರುಧ್ಯ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ನಾವು ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸದ ಹೊರತು ರಾಜಕೀಯ ಸಮಾನತೆಗೆ ಯಾವುದೇ ಅರ್ಥವಿರುವುದಿಲ್ಲ ಎಂದಿದ್ದರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಬೇಕಾದರೆ ಶಿಕ್ಷಣ ಅತ್ಯಗತ್ಯ. ಹಾಗಾಗಿ, ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣಝ ಕೊಡಿಸಬೇಕು’ ಎಂದು ಸಲಹೆ ನೀಡಿದರು.
ಉತ್ತಮ ಬೆಳವಣಿಗೆ: ‘ಹಿಂದೆ ಶೂದ್ರರು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವಿರಲಿಲ್ಲ. ಸಂವಿಧಾನ ಜಾರಿಗೆ ಬಂದ ಬಳಿಕ ಸಮಾನ ಶಿಕ್ಷಣ ಸಿಗುತ್ತಿದೆ. ಸಾಚಾರ್ ಆಯೋಗದ ವರದಿ ಪ್ರಕಾರ, ಮುಸ್ಲಿಂ ಸಮುದಾಯದಲ್ಲಿ ಶಿಕ್ಷಿತರ ಸಂಖ್ಯೆ ಕಡಿಮೆ ಇದೆ. ಇತ್ತೀಚೆಗೆ ಆ ಸಮುದಾಯದಲ್ಲೂ ಹೆಣ್ಣು ಮಕ್ಕಳಾದಿಯಾಗಿ ಶಿಕ್ಷಿತರು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಮುಸ್ಲಿಮರಲ್ಲಿ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಬೇಕು. ಅದಕ್ಕಾಗಿ, ಪ್ರಾಥಮಿಕ ಶಿಕ್ಷಣದಿಂದಿಡಿದು ಉನ್ನತ ಶಿಕ್ಷಣದವರೆಗೆ ವಸತಿ ಶಾಲಾ–ಕಾಲೇಜು ತೆರೆಯಬೇಕು. ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ದುಡ್ಡು ಬೇಕಾದರೂ ಕೊಡುವೆ. ಒಟ್ಟಿನಲ್ಲಿ ಎಲ್ಲರೂ ಶಿಕ್ಷಿತರಾಗಬೇಕು. ಆಗ ಮಾತ್ರ ನಾವು ಅಸಮಾನತೆ ಮೀರಿ ಮೆರೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ವಿಶ್ವಾಸ ಹೀಗೆಯೇ ಇರಲಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ‘ಅಲ್ಪಸಂಖ್ಯಾತ ಸಮುದಾಯಗಳ ವಿಷಯದಲ್ಲಿ ಸಿದ್ದರಾಮಯ್ಯ ಅವರ ಬದ್ಧತೆ ಹಾಗೂ ಪ್ರೀತಿ ಪ್ರಶ್ನಾತೀತ. ಇದಕ್ಕಾಗಿ ಸಮುದಾಯ ನಿಮಗೆ ಆಭಾರಿಯಾಗಿರುತ್ತದೆ. ನಮ್ಮ ಮೇಲಿನ ವಿಶ್ವಾಸ ಯಾವಾಗಲೂ ಹೀಗೆಯೇ ಇರಲಿ’ ಎಂದು ಹೇಳಿದರು.
ಜೆ.ಯು ಸಮೂಹ ಶಿಕ್ಷಣ ಸಂಸ್ಥೆಗಳ ಮೌಲಾನ ಸಯ್ಯದ್ ನೂರುಲ್ ಸಾಬ್ ಗಣ್ಯರನ್ನು ಸ್ವಾಗತಿಸಿದರು. ಪೌರಾಡಳಿತ ಸಚಿವ ರಹೀಂ ಖಾನ್, ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ಶಾಸಕ ಪ್ರಸಾದ ಅಬ್ಬಯ್ಯ, ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ, ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್, ಮುಖಂಡರಾದ ಅಬ್ದುಲ್ ಜಬ್ಬಾರ್, ಮನ್ಸೂರ್ ಅಲಿಖಾನ್, ಜೆ.ಯು ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಸ್ಥಳೀಯ ಶಾಸಕ ಮಾಗಡಿಯ ಎಚ್.ಸಿ. ಬಾಲಕೃಷ್ಣ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸಮಾನತೆ ಇದ್ದಾಗ ಸಾಮಾಜಿಕ ನ್ಯಾಯ ಸಿಗಲಿದೆ. ಸಂವಿಧಾನದ ಪೀಠಿಕೆ ಅರ್ಥ ಮಾಡಿಕೊಂಡವರು ಮಾತ್ರ ಸಮಾಜಮುಖಿಯಾಗಿರುತ್ತಾರೆ. ಸಂವಿಧಾನ ವಿರೋಧಿಸುವವರು ಸಮ ಸಮಾಜದ ವಿರೋಧಿಗಳುಸಿದ್ದರಾಮಯ್ಯ ಮುಖ್ಯಮಂತ್ರಿ
ವೇದಿಕೆಯಲ್ಲಿದ್ದ ಲಹರ್ ಸಿಂಗ್ ಕಾಲೆಳೆದ ಸಿ.ಎಂ! ‘
ಸಹಿಷ್ಣುತೆ ಮತ್ತು ಸಹಭಾಳ್ವೆ ನಮ್ಮ ಸಂವಿಧಾನದ ಮೂಲತತ್ವಗಳು. ಅದನ್ನು ಎಲ್ಲರೂ ಪಾಲಿಸಬೇಕು. ಯಾವ ಧರ್ಮವೂ ದ್ವೇಷಿಸಿ ಎಂದು ಹೇಳುವುದಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ’ ಎಂದ ಸಿದ್ದರಾಮಯ್ಯ ವೇದಿಕೆಯಲ್ಲಿ ಕುಳಿತಿದ್ದ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರತ್ತ ತಿರುಗಿ ‘ಅರ್ಥ ಆಯ್ತೆನೆಪ್ಪಾ ಲಹರ್ ಸಿಂಗ್. ಮಾಲುಮ್ ಹೇ...’ ಎಂದರು. ಅದಕ್ಕೆ ಸಿಂಗ್ ‘ನಾನು ದ್ವೇಷ ಮಾಡಲ್ಲ’ ಎಂದು ಪ್ರತಿಕ್ರಿಯಿಸಿದರು. ಆಗ ಸಿ.ಎಂ ‘ನೀನು ದ್ವೇಷ ಮಾಡಲ್ಲಪ್ಪ. ಆದರೆ ಬೇರೆಯವರು ಮಾಡುತ್ತಾರಲ್ಲ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ರಾಜ್ಯ ದಿವಾಳಿಯಾಗುತ್ತದೆ ಎಂದು ನೀನೇ ಭಾಷಣ ಮಾಡಿದ್ದೆ. ಆದರೆ ನಮ್ಮ ಗ್ಯಾರಂಟಿಯನ್ನೇ ಈಗ ನಕಲು ಮಾಡುತ್ತಿದ್ದೀರಿ. ನಮ್ಮ ಸಂವಿಧಾನ ಸಮ ಸಮಾಜ ಮತ್ತು ಸಾಮಾಜಿಕ ನ್ಯಾಯ ಬಯಸುತ್ತದೆ. ಆದರೆ ನಿಮ್ಮ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಆ ಸಂವಿಧಾನವನ್ನೇ ವಿರೋಧಿಸಿದರು’ ಎಂದು ಸಿದ್ದರಾಮಯ್ಯ ಅವರು ಸಿಂಗ್ ಕಾಲೆಳೆದರು. ಜೈ ಹಿಂದ್ ಜೈ ಕರ್ನಾಟಕ ಜೈ ಸಂವಿಧಾನ್ ಎಂದು ಭಾಷಣ ಮುಗಿಸಿದರು.
ಅನುದಾನ ಕಡಿತಗೊಳಿಸಿದ್ದ ಎಚ್‌ಡಿಕೆ: ಜಮೀರ್
‘2013ಕ್ಕೂ ಮುಂಚೆ ಯಾವ ಮುಖ್ಯಮಂತ್ರಿಯೂ ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಯೋಚಿಸಿರಲಿಲ್ಲ. ಸಿದ್ದರಾಮಯ್ಯ ಅವರು ಸಿ.ಎಂ ಆದ ಬಳಿಕ 2013ರಿಂದ 2018ರವರೆಗೆ ₹3200 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದ್ದರು. 2018ರಲ್ಲಿ ಸಿ.ಎಂ ಆದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಅನುದಾನ ಕಡಿತಕ್ಕೆ ಮುಮದಾದರು. ಆಗ ನಾವು ಅವರನ್ನು ಭೇಟಿ ಮಾಡಿ ಅನುದಾನ ಕಡಿತಗೊಳಿಸದಂತೆ ಮನವಿ ಮಾಡಿದೆವು. ಅದಕ್ಕೆ ಒಪ್ಪಿಕೊಂಡ ಎಚ್‌ಡಿಕೆ ಕಡೆಗೆ ಬಜೆಟ್‌ನಲ್ಲಿ ₹850 ಕೋಟಿ ಕಡಿತಗೊಳಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಅವಧಿಯಲ್ಲಿ ಅನುದಾನ ಇಳಿಕೆಯಾಯಿತು. 2023ರಲ್ಲಿ ಸಿದ್ದರಾಮಯ್ಯ ಅವರ ಮತ್ತೆ ಸಿ.ಎಂ ಆದ ಬಳಿಕ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ₹4500 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಇದರಿಂದಾಗಿ ಸಮುದಾಯದ ಅಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಿದೆ’ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಹೇಳಿದರು.
ಭೂ ಸ್ವಾಧೀನಕ್ಕೆ ವಿರೋಧ: ಸಿ.ಎಂ.ಗೆ ರೈತರ ಮನವಿ
ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ತಾಲ್ಲೂಕಿನ ಬೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸುಮಾರು 50 ಮಂದಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರು.
ಕಡೆಗೆ ಪೊಲೀಸರು ಕೇವಲ ಇಬ್ಬರು ಪ್ರತಿನಿಧಿಗಳಿಗೆ ಮಾತ್ರ ಮನವಿ ಸಲ್ಲಿಸಲು ಅವಕಾಶ ಕೊಟ್ಟರು. ಸಿದ್ದರಾಮಯ್ಯ ಅವರು ಊಟ ಮುಗಿಸಿ ಹೊರ ಬರುತ್ತಿದ್ದಂತೆ ಮನವಿ ಸಲ್ಲಿಸಿದ ರೈತರು ‘ಭೂ ಸ್ವಾಧೀನ ಕೈ ಬಿಡಿ’ ಎಂದರು. ಅದಕ್ಕೆ ಸಿ.ಎಂ. ‘ಯಾಕ್ರಪ್ಪ ನಿಮಗೆ ಟೌನ್‌ಶಿಫ್ ಮತ್ತು ಕೈಗಾರಿಕೆಗಳು ಬೇಡ್ವಾ’ ಎಂದರು. ‘ಏನೂ ಬೇಡ. ನಮ್ಮ ಭೂಮಿ ಬಿಟ್ಟು ಬಿಡಿ’ ಎಂದು ರೈತರು ಹೇಳಿದಾಗ ‘ಸರಿ ನೋಡೋಣ’ ಎಂದು ಸಿದ್ದರಾಮಯ್ಯ ಹೊರಟರು.
‘ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಪೊಲೀಸರಿಗೆ ನಾವು ಮನವಿ ಮಾಡಿದ್ದೆವು. ಅದಕ್ಕೆ ಒಪ್ಪಿದ ಪೊಲೀಸರು ಬಸ್ಸೊಂದನ್ನು ಕಳಿಸಿ ಕೇವಲ 50 ಜನರನ್ನು ಕರೆಯಿಸಿಕೊಂಡರು. ಎಲ್ಲರನ್ನು ಕಾರ್ಯಕ್ರಮ ಸ್ಥಳದ ಪಕ್ಕದಲ್ಲಿರುವ ವಂಡರ್‌ಲಾ ರೆಸಾರ್ಟ್‌ನಲ್ಲಿ ಬಿಟ್ಟರು. ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಪೊಲೀಸರು ಕಡೆಗೆ ಕೇವಲ ಇಬ್ಬರು ಹೋಗಿ ಮನವಿ ಸಲ್ಲಿಸಬೇಕು ಎಂಬ ಷರತ್ತು ಹಾಕಿದರು. ಎಲ್ಲರಿಗೂ ಭೇಟಿ ಮಾಡಲು ಬಿಡಿ ಎಂದು ಕೇಳಿಕೊಂಡರೂ ಸಾಧ್ಯವಾಗಲಿಲ್ಲ. ಕಡೆಗೆ ಇಬ್ಬರು ಮಾತ್ರ ಹೋಗಿ ಮನವಿ ಕೊಟ್ಟು ಬಂದೆವು’ ಎಂದು ಭೈರಮಂಗಲ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಂಘದ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.