ADVERTISEMENT

ಮರುನಾಮಕರಣ; ರಾಮನಗರ ಜಿಲ್ಲೆ ಇನ್ಮುಂದೆ ‘ಬೆಂಗಳೂರು ದಕ್ಷಿಣ’

ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಸಾಧಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಓದೇಶ ಸಕಲೇಶಪುರ
Published 23 ಮೇ 2025, 5:49 IST
Last Updated 23 ಮೇ 2025, 5:49 IST
ರಾಮನಗರ ಜಿಲ್ಲೆಯ ನಕ್ಷೆ
ರಾಮನಗರ ಜಿಲ್ಲೆಯ ನಕ್ಷೆ   

ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮಗಳಲ್ಲಿ ಆಗಾಗ ‘ನಾವು ಬೆಂಗಳೂರು ಜಿಲ್ಲೆಯವರು’ ಎಂದು ಹೇಳದೆ ಭಾಷಣ ಮುಗಿಸುತ್ತಿರಲಿಲ್ಲ. ಹೀಗೆ ಹೇಳುತ್ತಲೇ ಜಿಲ್ಲೆ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಬದಲಾಯಿಸುವುದಾಗಿ ಪ್ರತಿಪಾದಿಸುತ್ತಿದ್ದ ಅವರು, ಕಡೆಗೂ ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಸಾಧಿಸಿದ್ದಾರೆ.

ಜಿಲ್ಲೆಯ ಹಣೆಪಟ್ಟಿ ಹೊತ್ತಿದ್ದ ರಾಮನಗರದ ಹೆಸರು ಇನ್ಮುಂದೆ ನೇಪಥ್ಯಕ್ಕೆ ಸರಿಯಲಿದೆ. ಆ ಹಣೆಪಟ್ಟಿ ಮೇಲೆ ‘ಬೆಂಗಳೂರು ದಕ್ಷಿಣ’ ಎಂಬ ಹೊಸ ಬೋರ್ಡ್ ಬಂದಿದೆ. ಇದರೊಂದಿಗೆ ಜಿಲ್ಲೆ ರಚನೆಯಾದಾಗಿನಿಂದ ಹಾಗೂ ಮರುನಾಮಕರಣದ ವಿಷಯ ಪ್ರಸ್ತಾಪವಾದಾಗಲೆಲ್ಲಾ, ಅದರ ಪರ ಮತ್ತು ವಿರೋಧದ ಕುರಿತು ಡಿಕೆಶಿ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಧ್ಯೆ ನಡೆಯುತ್ತಿದ್ದ ಶಿಥಿಲ ಸಮರದಲ್ಲಿ ಡಿಕೆಶಿ ಕೈ ಮೇಲಾಗಿದೆ.

18 ವರ್ಷದ ಹಿಂದೆ ರಚನೆ: ಸರಿಯಾಗಿ 18 ವರ್ಷಗಳ ಹಿಂದೆ 2007ರ ಆಗಸ್ಟ್ 27ರಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ರಾಮನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದ್ದರು. ಬೆಂಗಳೂರು ಗ್ರಾಮಾಂತರದಿಂದ ಇಬ್ಬಾಗಗೊಂಡ ಹೊಸ ಜಿಲ್ಲೆಯು ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ಒಳಗೊಂಡ 4 ತಾಲ್ಲೂಕುಗಳ (ಈಗ ಹಾರೋಹಳ್ಳಿ ಸೇರಿ 5 ಇವೆ) ಜಿಲ್ಲೆಯಾಗಿ ರೂಪುಗೊಂಡಿತ್ತು.

ADVERTISEMENT

‘ಬೆಂಗಳೂರು’ ಹೆಸರು ಉಳಿಸಿಕೊಂಡೇ ಜಿಲ್ಲೆ ರಚಿಸಬೇಕಿತ್ತು ಎಂಬುದು ಡಿಕೆಶಿ ಸೇರಿದಂತೆ ಈ ಭಾಗದ ಕೈ ನಾಯಕರ ವಾದವಾಗಿತ್ತು. ಅದಕ್ಕಾಗಿಯೇ, ರಾಮನಗರ ಜಿಲ್ಲೆ ಹೆಸರಿಗೆ ಅಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಜಿಲ್ಲೆಯ ಹೆಸರಿನ ವಿಷಯದ ಚರ್ಚೆ ಬಂದಾಗಲೆಲ್ಲಾ ಡಿಕೆಶಿ ತಮ್ಮ ನಿಲುವು ಪ್ರಕಟಿಸುತ್ತಲೇ ಬಂದಿದ್ದಾರೆ.

ಅಧಿಕಾರದ ಶಕ್ತಿ: ಎರಡು ವರ್ಷದ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಡಿಕೆಶಿ, ಸರ್ಕಾರದ ಎರಡನೇ ಶಕ್ತಿ ಕೇಂದ್ರವಾದರು. ಅಂದಿನಿಂದಲೂ ತಮ್ಮ ನಿಲುವನ್ನು ಬಹಿರಂಗವಾಗಿ ಹೇಳುತ್ತಾ, ಮರು ನಾಮಕರಣದ ಚರ್ಚೆಯನ್ನು ಹುಟ್ಟು ಹಾಕಿದ್ದರು. ಇದಕ್ಕೆ ಎಚ್‌ಡಿಕೆ ಸೇರಿದಂತೆ ವಿರೋಧ ಪಕ್ಷದವರು ವಿರೋಧ ವ್ಯಕ್ತಪಡಿಸಿದರೂ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಡಿಕೆಶಿ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

ಒಂದು ಕಾಲದಲ್ಲಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಜೊತೆಗೆ ದಳದ ಪ್ರಾತಿನಿಧ್ಯ ಇರುತ್ತಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ರಾಮನಗರ ಸೇರಿದಮತೆ 3 ಕ್ಷೇತ್ರಗಳಲ್ಲಿ  ಕೈ ಗೆಲುವು ಸಾಧಿಸಿತ್ತು. ಎಚ್‌ಡಿಕೆ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣಕ್ಕೆ 2024ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ಸಿ.ಪಿ. ಯೋಗೇಶ್ವರ್ ಅವರನ್ನು ಕರೆತಂದು ನಿಲ್ಲಿಸಿದ್ದ ಡಿಕೆ ಸಹೋದರರು, ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದರು.

ಆ ಮೂಲಕ ಇಡೀ ಜಿಲ್ಲೆಯಲ್ಲಿ ‘ಕೈ’ ಪತಾಕೆ ಹಾರಿಸಿದ್ದರು. ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿದ ಬೆನ್ನಲ್ಲೇ ಡಿಕೆಶಿ, ಕುಮಾರಸ್ವಾಮಿ ಅವರು ರಚಿಸಿದ್ದ ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಡಿಕೆಶಿ ಮತ್ತು ಎಚ್‌ಡಿಕೆ ನಡುವೆ ನಡೆಯುತ್ತಿರುವ ರಾಜಕೀಯ ಸಮರವು, ಮುಂದೆ ಯಾವ‍್ಯಾವ ಆಯಾಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೋರ್ಡ್‌ನಲ್ಲಿ ಜಿಲ್ಲೆ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ನಮೂದಿಸಿರುವುದು
ಡಿ.ಕೆ. ಶಿವಕುಮಾರ್
ಡಿ.ಕೆ. ಸುರೇಶ್
ನಿಖಿಲ್ ಕುಮಾರಸ್ವಾಮಿ
ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಹಿಂದೆ ಬೆಂಗಳೂರಿಗೆ ಒಳಪಟ್ಟಿದ್ದ ರಾಮನಗರವನ್ನು ಕೇಂದ್ರಾಡಳಿತವಾಗಿಟ್ಟುಕೊಂಡೇ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಇದೀಗ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವುದು ಸಂತೋಷದ ವಿಚಾರ. ಈ ಮಹತ್ವದ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು
– ಡಿ.ಕೆ. ಸುರೇಶ್ ಮಾಜಿ ಸಂಸದ
ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ಕೂಡಲೇ ಜಿಲ್ಲೆ ಅಭಿವೃದ್ಧಿ ಆಗುವುದಿಲ್ಲ. ರಾಜಕೀಯ ಲಾಭಕ್ಕಾಗಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದಾರೆ. ಜೊತೆಗೆ ಬಿಡದಿಯಲ್ಲಿ ಟೌನ್‌ಶಿಫ್ ಮಾಡೋಕೆ ಹೊರಟಿದ್ದಾರೆ. ರೈತರು ಅದಕ್ಕೆ ವಿರೋಧ ಮಾಡಿದ್ದಾರೆ
– ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷ ಜೆಡಿಎಸ್ ಯುವ ಘಟಕ
ವಿಶ್ವಮಟ್ಟದಲ್ಲಿ ನಮ್ಮ ಜಿಲ್ಲೆ ರಾರಾಜಿಸಬೇಕಾದರೆ ಜಿಲ್ಲೆ ಹೆಸರಿನೊಂದಿಗೆ ಬೆಂಗಳೂರು ಎಂಬ ಪದ ಇರಬೇಕು. ಇದನ್ನು ಮನಗಂಡ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಿದ್ದಾರೆ. ಇದರೊಂದಿಗೆ ಜಿಲ್ಲೆಗೆ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ
– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಪರ ಇರುವವರ ವಾದವೇನು?

ಐ.ಟಿ ಬಿ.ಟಿ ಸೇರಿದಂತೆ ಹಲವು ವಿಷಯಗಳಲ್ಲಿ ಗಮನ ಸೆಳೆದಿರುವ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾನಗರ. ಹಾಗಾಗಿ ಜಿಲ್ಲೆಯ ಹೆಸರಿನ ಜೊತೆಗೆ ‘ಬೆಂಗಳೂರು’ ಎಂಬ ಟ್ಯಾಗ್ ಇದ್ದರೆ ಅಭಿವೃದ್ಧಿಗೆ ವೇಗ ನೀಡಲಿದೆ ಎಂಬ ಅಭಿಪ್ರಾಯ ಮರುನಾಮಕರಣ ಪರ ಇರುವವರದ್ದು. ರಾಜಧಾನಿಗೆ ಕೂಗಳತೆ ದೂರದಲ್ಲಿದ್ದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಣದ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಹೆಸರು ಪ್ರಗತಿಯ ಬಾಗಿಲು ತೆರೆಯಲಿದೆ. ‘ಬಿಯಾಂಡ್ ಬೆಂಗಳೂರು’ ಅಭಿವೃದ್ಧಿಗೆ ಜಿಲ್ಲೆ ಹೇಳಿ ಮಾಡಿಸಿದ ನೆಲೆಯಾಗಿದೆ. ಬಂಡವಾಳ ಹೂಡಿಕೆ ಕೈಗಾರಿಕೆ ಮತ್ತು ತಂತ್ರಜ್ಞಾನ ಪಾರ್ಕ್ ಸ್ಥಾಪನೆ ಮೂಲಸೌಕರ್ಯ ಅಭಿವೃದ್ಧಿ ಭೂಮಿ ಮೌಲ್ಯ ಹೆಚ್ಚಳದಿಂದ ಈ ಭಾಗದವರು ಬದುಕು ಬಂಗಾರವಾಗಲಿದೆ.

ವಿರೋಧಿಸುವವರ ಹೇಳುವುದೇನು?

ಮರುನಾಮಕರಣದಿಂದ ಮಾತ್ರ ಜಿಲ್ಲೆ ಅಭಿವೃದ್ಧಿಯಾಗುವುದಾದರೆ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದಾಗಲೇ ಯಾಕೆ ಆಗಲಿಲ್ಲ? ಹೆಸರು ಬದಲಾವಣೆಯಾದರೆ ಅಭಿವೃದ್ಧಿಯಾಗುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ ಇರುವ ಜನಪ್ರತಿನಿಧಿಗಳು ಇರಬೇಕಷ್ಟೆ. ‘ಬೆಂಗಳೂರು ದಕ್ಷಿಣ’ ಹೆಸರು ಮರುನಾಮಕರಣದಿಂದ ರಾಮನಗರ ಜಿಲ್ಲೆ ಹೆಸರಿನೊಂದಿಗೆ ಬೆಸೆದುಕೊಂಡಿದ್ದ ಸ್ಥಳೀಯ ಅಸ್ಮಿತೆ ಅಳಿಸಿ ಹೋಗಲಿದೆ. ಬೆಂಗಳೂರು ಹೆಸರಿನಲ್ಲಿ ಈಗಾಗಲೇ ಜಿಲ್ಲೆ ತಾಲ್ಲೂಕು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಹೆಸರುಗಳಿವೆ. ನಗರ ಮತ್ತು ಗ್ರಾಮೀಣ ಸೊಗಡಿನ ರಾಮನಗರವನ್ನು ಅಭಿವೃದ್ಧಿ ‘ಬ್ರಾಂಡ್‌‘ಗಾಗಿ ‘ಬೆಂಗಳೂರು ದಕ್ಷಿಣ’ ಮಾಡುವ ಬದಲು ರಾಮನಗರವನ್ನೇ ಬ್ರಾಂಡ್‌ ಮಾಡಿ ಅಭಿವೃದ್ಧಿ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.