ಹಾರೋಹಳ್ಳಿ: ಗಣ ರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರಿಗೂ ಮಹತ್ವದ ದಿನ. ಪ್ರತಿಯೊಬ್ಬರು ಕೂಡ ಹೆಮ್ಮೆಪಡಬೇಕೆಂದು ಹಾರೋಹಳ್ಳಿ ತಹಶೀಲ್ದಾರ್ ವಿಜಿಯಣ್ಣ ಹೇಳಿದರು.
ಕೆ.ಪಿಎಸ್ ಶಾಲೆ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ.26 ಸಂವಿಧಾನ ಸಮರ್ಪಣೆ ದಿನವಾಗಿದ್ದು ಭಾರತದ ಸಂವಿಧಾನದಿಂದ ದೇಶದೆಲ್ಲೆಡೆ ಜನರು ಶಾಂತಿ, ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ದೇಶದಲ್ಲಿ ಸ್ವಾತಂತ್ಯ್ಯ ಮತ್ತು ಸಮಾನವಾಗಿ ಬದುಕುವ ಹಕ್ಕನ್ನು ಭಾರತ ಸಂವಿಧಾನ ನೀಡಿದೆ ಎಂದರು.
ದೇಶದ ಪ್ರತಿಯೊಬ್ಬರೂ ಕೂಡ ಸಂವಿಧಾನ ಗೌರವಿಸುವ ಕೆಲಸ ಮಾಡಬೇಕು ಎಂದರು. ’ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಎಂಬ ಕವಿವಾಣಿಯಂತೆ ದೇಶವನ್ನು ಕಟ್ಟಬೇಕಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜು ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಸಮಾನವಾಗಿ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಇದೇ ಆಶಯಗಳೊಂದಿಗೆ ದೇಶ ಕೂಡ ಮುನ್ನಡೆಯುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಗತಿ ಶಾಲೆ, ಮಾರ್ಡನ್ ಶಾಲೆ, ಕೆಪಿಎಸ್ ಶಾಲೆ, ಡೆಕ್ಕನ್ ಶಾಲೆ ಮಕ್ಕಳ ನೃತ್ಯ ಎಲ್ಲರ ಗಮನ ಸೆಳೆಯಿತು. ಇದೇ ವೇಳೆ ಶಿರಸ್ತೇದಾರ್ ನವೀನ್ ಕುಮಾರ್ ಸೇರಿದಂತೆ ಹಾರೋಹಳ್ಳಿ ಪಟ್ಟಣದ ಎಲ್ಲ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.