ADVERTISEMENT

ರಾಮನಗರ | ಗಣ ರಾಜ್ಯೋತ್ಸವ; ಉಕ್ಕಿದ ದೇಶಭಕ್ತಿಯ ಭಾವ

ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ; ಗಮನ ಸೆಳೆದ ಸಾಂಸ್ಕೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 7:43 IST
Last Updated 27 ಜನವರಿ 2024, 7:43 IST
<div class="paragraphs"><p>ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಧ್ವಜಕ್ಕೆ ಗೌರವ ಸಲ್ಲಿಸಿದರು.&nbsp;&nbsp;</p></div>

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಧ್ವಜಕ್ಕೆ ಗೌರವ ಸಲ್ಲಿಸಿದರು.  

   

ರಾಮನಗರ: ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿಕೊಂಡ ದಿನವಾದ ಗಣ ರಾಜ್ಯೋತ್ಸವವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಬಾನೆತ್ತರದಲ್ಲಿ ಹಾರುತ್ತಿದ್ದ ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯು ಎಲ್ಲರೆದೆಯಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. ಸಂವಿಧಾನದ ಪೀಠಿಕೆಯ ಬೋಧನೆ ಅಭಿಮಾನ ಮೂಡಿಸಿತು.

ಕ್ರೀಡಾಂಗಣದಲ್ಲಿ ತ್ರಿವರ್ಣ ಕಂಗೊಳಿಸುತ್ತಿತ್ತು. ವರ್ಣರಂಜಿತ ವೈವಿಧ್ಯಮಯ ಧಿರಿಸಿನಲ್ಲಿ ಶಾಲಾ ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲಿದ್ದವರನ್ನು ಪರವಶಗೊಳಿಸಿತು. ಪೊಲೀಸ್ ಮತ್ತು ವಿವಿಧ ಶಾಲೆಗಳ ಸೇವಾದಳದ ತಂಡದ ಶಿಸ್ತಿನ ಪಥ ಸಂಚಲನ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.

ADVERTISEMENT

ಬಳಿಕ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರು, ಹರಿದು ಹಂಚಿಹೋಗಿದ್ದ ದೇಶವನ್ನು ಅಖಂಡ ಭಾರತವಾಗಿಸಲು ಶ್ರಮಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಶ್ರೇಷ್ಠ ಸಂವಿಧಾನ ರಚಿಸಿದ ಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಸದಾ ಸ್ಮರಣೀಯರು’ ಎಂದು ಹೇಳಿದರು.

‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನವೇ ಅಡಿಪಾಯ. ಇದರ ಹಿಂದಿರುವ ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ನಾವು ಸ್ಮರಿಸಬೇಕು. ಸಂವಿಧಾನ 1949 ನ. 26ರಂದು ಅರ್ಪಣೆಯಾದರೂ ಜಾರಿಗೆ ಬಂದಿದ್ದು 1950 ಜ. 26ರಿಂದ. ಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿತಕ್ಕೊಳಗಾಗಿದ್ದ ಜನರನ್ನು ಮೇಲೆತ್ತುವ ಕೆಲಸವನ್ನು ಸಂವಿಧಾನವು ಮಾಡಿದೆ’ ಎಂದು ಬಣ್ಣಿಸಿದರು.

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಲಾದ ಸಂವಿಧಾನ ಜಾಗೃತಿ ಜಾಥಾ ಸ್ಥಬ್ತಚಿತ್ರ ವಾಹನದ ಎದುರು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್. ಜಿಲ್ಲೆಯ ದಲಿತ ಮುಖಂಡರು ಇದ್ದಾರೆ

ಅಭಿವೃದ್ಧಿಗೆ ಮುನ್ನುಡಿ: ‘ರಾಜ್ಯ ಸರ್ಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿ, ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 8.78 ಲಕ್ಷ ನೋಂದಣಿಯಾಗಿದ್ದು ₹14.49 ಕೋಟಿ ನೀಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ₹2.38 ಕೋಟಿ ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 2.27 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಯುವನಿಧಿಗೆ 1,512 ಮಂದಿ ನೋಂದಾಯಿಸಿಕೊಂಡಿದ್ದಾರೆ. ವನ್ಯಜೀವಿಯಿಂದಾದ ಜೀವ ಮತ್ತು ಬೆಳೆಹಾನಿಗೆ ₹39.3 ಕೋಟಿ ಪರಿಹಾರ ಪಾವತಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ’ ಎಂದರು.

ವೇದಿಕೆಯಲ್ಲಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸಿ. ಸೋಮಶೇಖರ್ ಮಣಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ಲಕ್ಷ್ಮಿನಾರಾಯಣ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಇದ್ದರು.

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು
ಶ್ರೇಷ್ಠ ಸಂವಿಧಾನದಡಿ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆ ನಮ್ಮದು. ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಗಮನ ಹರಿಸಬೇಕು
– ರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ.

ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ

ಸಂವಿಧಾನದ ಮಹತ್ವದ ಅರಿವು ಮೂಡಿಸುವ ಉದ್ದೇಶದ ಸಂವಿಧಾನ ಜಾಗೃತಿ ಜಾಥಾ ಸ್ಥಬ್ತಚಿತ್ರದ ವಾಹನಕ್ಕೆ ರಾಮಲಿಂಗಾರೆಡ್ಡಿ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಸ್ಥಬ್ತಚಿತ್ರ ಜ. 26ರಿಂದ ಫೆ. 23ರವರೆಗೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸ್ತಬ್ಧಚಿತ್ರ ಸಂಚರಿಸಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಿದೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಜೊತೆಗೆ ಸಂವಿಧಾನದ ಪೀಠಿಕೆ ಸಂಸತ್ತು ಸಂವಿಧಾನ ಹಸ್ತಾಂತರ ಸಮಾನತೆ ಸಂದೇಶ ಸಾರಿದ ಮಹನೀಯರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರದ ಚಿತ್ರಗಳನ್ನು ಸ್ತಬ್ಧಚಿತ್ರ ಒಳಗೊಂಡಿದೆ. ಎಲ್‌ಇಡಿ ಪರದೆಗಳಲ್ಲಿ ಸಂವಿಧಾನದ ಮಹತ್ವದ ವಿಡಿಯೊಗಳ ಪ್ರಸಾರ ಸಹ ಸ್ತಬ್ಧಚಿತ್ರದ ವಿಶೇಷವಾಗಿದೆ. ದಲಿತ ಮುಖಂಡರ ಆಕ್ರೋಶ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರವು ಚನ್ನಾಗಿ ಮೂಡಿಬಂದಿಲ್ಲ. ಸ್ತಬ್ಧಚಿತ್ರ ಬಲಕ್ಕೆ ಸ್ವಲ್ಪ ವಾಲಿದಂತಿದೆ. ಅಂಬೇಡ್ಕರ್ ಪ್ರತಿಮೆ ಚನ್ನಾಗಿ ಕಾಣುತ್ತಿಲ್ಲ. ಸಂವಿಧಾನದ ಪೀಠಿಕೆಯನ್ನು ಸಮಾರಂಭದ ಆರಂಭದಲ್ಲೇ ಬೋಧಿಸಬೇಕಿತ್ತು. ಎಲ್ಲರೂ ಎದ್ದು ಹೋಗುವಾಗ ಕಾಟಾಚಾರಕ್ಕೆ ಬೋಧಿಸಿದ್ದು ಸರಿಯಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರ ಮಾತಿಗೆ ದನಿಗೂಡಿಸಿದ ಶಾಸಕ ಇಕ್ಬಾಲ್ ಹುಸೇನ್ ‘ಸಮಾರಂಭವನ್ನು ಅದ್ಭುತವಾಗಿ ಮಾಡಬೇಕಿತ್ತು. ನಮ್ಮ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅಧಿಕಾರಿಗಳು ಈ ಬಗ್ಗೆ ಚರ್ಚಿಸಬೇಕಿತ್ತು. ಅದ್ಯಾವುದನ್ನೂ ಮಾಡದೆ ನನ್ನೆದುರು ಆಹ್ವಾನ ಪತ್ರಿಕೆ ತಂದಿಟ್ಟರು. ಅದನ್ನು ನೋಡುತ್ತಿದ್ದಂತೆ ಬೇಸರಗೊಂಡು ಏನಾದರೂ ಮಾಡಿಕೊಳ್ಳಿ ಎಂದು ವಾಪಸ್ ಕಳಿಸಿದೆ’ ಎಂದರು. ‘ಸ್ತಬ್ಧಚಿತ್ರ ನಿರ್ಮಿಸುವಾಗ ಮುಂದೆ ಇಂತಹ ತಪ್ಪುಗಳಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿರುವೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ  ಹೇಳಿದರು.

ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಿರುವ ಆಕರ್ಷಕ ಸ್ಥಬ್ತಚಿತ್ರ

ನೇತಾಜಿ ಕ್ರೆಸೆಂಟ್ ಶಾಲೆ ಪ್ರಥಮ

ಸಮಾರಂಭದಲ್ಲಿ ವಿವಿಧ ಶಾಲೆಗಳ ಸೇವಾದಳಗಳಿಂದ ಪಥ ಸಂಚಲನ ನಡೆಯಿತು. ಈ ಪೈಕಿ ನೇತಾಜಿ ಪಾಪ್ಯುಲರ್ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಥಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ದ್ವಿತೀಯ ಹಾಗೂ ಶಾಂತಿನಿಕೇತನ ಇಂಗ್ಲಿಷ್ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಥಮ ಬಿಡದಿಯ ಜ್ಞಾನ ವಿಕಾಸ ಶಾಲೆ ದ್ವಿತೀಯ ಹಾಗೂ ಸೇಂಟ್ ಮೈಕಲ್ ಇಂಗ್ಲಿಷ್ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು. ಬ್ಯಾಂಡ್ ಸೆಟ್‌ನಲ್ಲಿ ಶರತ್ ಮೆಮೋರಿಯಲ್ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಶಸ್ತಿಗೆ ಪಾತ್ರವಾಯಿತು. ವಿಜೇತ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಗಣ್ಯರು ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.