ADVERTISEMENT

ಬತ್ತಿಹೋದ ಕಲ್ಯಾಣಿಗಳಿಗೆ ಮರುಜೀವ ನೀಡುತ್ತಿರುವ ರಾಮನಗರ ಜಿಲ್ಲಾ ಪಂಚಾಯಿತಿ

ಪ್ರಾಚೀನ ಜಲಮೂಲ ಸಂರಕ್ಷಣೆಗೆ ಜಿ.ಪಂ. ಯೋಜನೆ; ನರೇಗಾ ಅಡಿ ಕಾಮಗಾರಿ

ಆರ್.ಜಿತೇಂದ್ರ
Published 9 ಆಗಸ್ಟ್ 2020, 2:36 IST
Last Updated 9 ಆಗಸ್ಟ್ 2020, 2:36 IST
ತಿಪ್ಪಸಂದ್ರ ಗ್ರಾಮದಲ್ಲಿ ಅಭಿವೃದ್ಧಿಗೊಂಡ ಕಲ್ಯಾಣಿ
ತಿಪ್ಪಸಂದ್ರ ಗ್ರಾಮದಲ್ಲಿ ಅಭಿವೃದ್ಧಿಗೊಂಡ ಕಲ್ಯಾಣಿ   

ರಾಮನಗರ: ಕೆಂಪೇಗೌಡರು ಆಳಿದ ಊರಲ್ಲಿ ಇರುವ ಕಲ್ಯಾಣಿಗಳ ಸಂಖ್ಯೆ ಅದೆಷ್ಟೋ. ಇವುಗಳಲ್ಲಿ ಬಹುತೇಕ ತಮ್ಮ ಇರುವಿಕೆಯ ಗುರುತನ್ನೇ ಕಳೆದುಕೊಂಡಿದೆ. ಇಂತಹ ಕಲ್ಯಾಣಿಗಳಿಗೆ ಮರುಜೀವ ನೀಡುವ ಕೆಲಸವನ್ನು ಜಿಲ್ಲಾ ಪಂಚಾಯಿತಿ ಸದ್ದಿಲ್ಲದೆ ಮಾಡುತ್ತಿದೆ.

ನರೇಗಾ ಯೋಜನೆಯ ಅಡಿ ಜಿಲ್ಲೆಯಲ್ಲಿನ ಜಲಮೂಲಗಳ ಸಂರಕ್ಷಣೆಗೆ ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿತ್ತು. ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿರುವ ಕಲ್ಯಾಣಿಗಳಿಗೆ ಮತ್ತೆ ಜೀವ ಕೊಡುವ ಕೆಲಸಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಆಸಕ್ತಿ ತೋರಿದರು. ಅದರ ಪರಿಣಾಮವಾಗಿ ಇಂದು ಹತ್ತಾರು ಕಲ್ಯಾಣಿಗಳು ಪುನರುಜ್ಜೀವನಗೊಳ್ಳುತ್ತಿವೆ. ತಮ್ಮೂರಿನಲ್ಲೇ ಕಂಡು ಕಾಣದಂತೆ ಇದ್ದ ಜಲಮೂಲಗಳು ಮತ್ತೆ ನಳನಳಿಸಿದ್ದನ್ನು ಕಂಡು ಗ್ರಾಮೀಣ ಜನರೂ ಸಂತಸಗೊಂಡಿದ್ದಾರೆ.

ಹುಡುಕಾಟ: ಕಣ್ಮರೆಯಾದ ಕಲ್ಯಾಣಿಗಳಿಗಾಗಿ ಹುಡುಕಾಟ ನಡೆಸಿದ ಕಥೆಯೂ ರೋಚಕವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಸಿಬ್ಬಂದಿಯ ತಂಡ ರಚಿಸಿ, ಪ್ರತಿ ಹಳ್ಳಿಗಳಲ್ಲೂ ಇರುವ ಕಲ್ಯಾಣಿಗಳ ಮಾಹಿತಿ ಕಲೆ ಹಾಕಲಾಯಿತು. ಸಾಕಷ್ಟು ಕಲ್ಯಾಣಿಗಳಿಗೆ ರಸ್ತೆ ಇರಲಿ, ಕನಿಷ್ಠ ಕಚ್ಚಾ ಹಾದಿಯೂ ಇರಲಿಲ್ಲ. ಕೆಲವು ಕಡೆ ಪುರಾತನ ನಕ್ಷೆಗಳಲ್ಲಿ ಮಾತ್ರ ನಮೂದಾಗಿದ್ದವು. ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ ಅವುಗಳಿಗೆ ಮರುಜೀವ ನೀಡುವ ಕಾರ್ಯ ಆರಂಭಗೊಂಡಿತು. ಸ್ಥಳೀಯರನ್ನೇ ಬಳಸಿಕೊಂಡು ನರೇಗಾ ಯೋಜನೆಯ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು.

ADVERTISEMENT

ಜಿಲ್ಲೆಯಲ್ಲಿ ಈವರೆಗೆ ನೂರಕ್ಕೂ ಹೆಚ್ಚು ಕಲ್ಯಾಣಿಗಳನ್ನು ಜಿಲ್ಲಾ ಪಂಚಾಯಿತಿ ಗುರುತಿಸಿದೆ. ಅದರಲ್ಲಿಯೂ ಕೆಂಪೇಗೌಡರ ನಾಡು ಮಾಗಡಿಯಲ್ಲಿ ಕೆದಕಿದಷ್ಟೂ ಹೆಚ್ಚೆಚ್ಚು ಸಿಗುತ್ತಿವೆ. ಈ ತಾಲ್ಲೂಕು ಒಂದರಲ್ಲಿಯೇ ಈವರೆಗೆ 17 ಕಲ್ಯಾಣಿಗಳಿಗೆ ಹೊಸ ರೂಪ ನೀಡಲಾಗಿದೆ. ಇದರೊಂದಿಗೆ ಚನ್ನಪಟ್ಟಣ ತಾಲ್ಲೂಕಿನ 2, ರಾಮನಗರ ತಾಲ್ಲೂಕಿನ 2 ಹಾಗೂ ಕನಕಪುರ ತಾಲ್ಲೂಕಿನ ಒಂದು ಕಲ್ಯಾಣಿ ಅಭಿವೃದ್ದಿಪಡಿಸಲಾಗಿದೆ.

’ಕಲ್ಯಾಣಿಗಳನ್ನು ಹುಡುಕುತ್ತಾ ಹೊರಟ ನಮ್ಮ ಸಿಬ್ಬಂದಿಗೆ ಸಾಕಷ್ಟು ಅಚ್ಚರಿ ಕಾದಿದ್ದವು. ಎಷ್ಟೋ ಕಡೆ ಜನರು ತೋರಿಸಿದ ಕಡೆ ಅದರ ಗುರುತೂ ಸಹ ಇರಲಿಲ್ಲ. ಮುಳ್ಳುಗಂಟಿ, ಪೊದೆಗಳನ್ನು ಸರಿಸಿದಾಗ ಅಲ್ಲೊಂದು ಅಚ್ಚರಿಯೇ ಕಾದಿತ್ತು. ನಾವು ನಿರೀಕ್ಷಿಸದಷ್ಟು ದೊಡ್ಡ ಮಟ್ಟದಲ್ಲಿ ಜಲಮೂಲಗಳು ಪತ್ತೆಯಾದವು’ ಎಂದು ವಿವರಿಸುತ್ತಾರೆ ಜಿ.ಪಂ ಸಿಇಒ ಇಕ್ರಂ.

‘ಇಂದು ಕಲ್ಯಾಣಿಗಳನ್ನು ನೋಡಿದಾಗ ಖುಷಿ ಆಗುತ್ತಿದೆ. ನೆಲಮಟ್ಟದಿಂದ 40-50 ಅಡಿ ಆಳದವರೆಗೂ ಮಣ್ಣಿನಲ್ಲಿ ಹುದುಗಿಹೋಗಿದ್ದವುಗಳನ್ನು ಪತ್ತೆ ಹಚ್ಚಿ, ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ. ಈಗಾಗಲೇ ಅನೇಕ ಕಲ್ಯಾಣಿಗಳಲ್ಲಿ ನೀರು ನಿಂತಿದೆ. ಇದರಿಂದ ಮಳೆ ನೀರು ಸಂಗ್ರಹ, ಅಂತರ್ಜಲ ಮಟ್ಟದ ಸುಧಾರಣೆಯೂ ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.