ADVERTISEMENT

ರಸ್ತೆ ಡಾಂಬರೀಕರಣಕ್ಕೆ ಚಾಲನೆ

ಮಾರಪ್ಪನಪಾಳ್ಯದ ಕಾಮಗಾರಿಗೆ ₹ 50 ಲಕ್ಷ: ಶಾಸಕ ಎ.ಮಂಜುನಾಥ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 13:37 IST
Last Updated 14 ಡಿಸೆಂಬರ್ 2019, 13:37 IST
ಮಾಗಡಿ ಮಾರಪ್ಪನ ಪಾಳ್ಯದ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎ.ಮಂಜುನಾಥ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಮಾಗಡಿ ಮಾರಪ್ಪನ ಪಾಳ್ಯದ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎ.ಮಂಜುನಾಥ ಪೂಜೆ ಸಲ್ಲಿಸಿ ಚಾಲನೆ ನೀಡಿದರು.   

ಕುದೂರು(ಮಾಗಡಿ): ರಸ್ತೆ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದ ಮಾರಪ್ಪನಪಾಳ್ಯ ಗ್ರಾಮಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ.50 ಲಕ್ಷ ವೆಚ್ಚದಲ್ಲಿ ಗುಣಮಟ್ಟದ ಸುಸಜ್ಜಿತ ರಸ್ತೆ ನಿರ್ಮಿಸಿ, ಡಾಂಬರೀಕರಣ ಮಾಡಿಸುತ್ತಿದ್ದೇನೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಮಾರಪ್ಪನಪಾಳ್ಯದ ಬಳಿ ಶನಿವಾರ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಮೂಲಕ ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿಸುತ್ತಿದ್ದಾರೆ. ನನ್ನ ವಿರೋಧಿಗಳಿಗೆ ಕನ್ನಡಕ ಕೊಡಿಸುತ್ತೇನೆ. ನಾನು ಮಾಡಿಸುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸ್ವತಃ ಕನ್ನಡಕ ಹಾಕಿಕೊಂಡು ನೋಡಲಿ. ಇಲ್ಲ ನನ್ನೊಂದಿಗೆ ಬಂದರೆ, ಕಾಮಗಾರಿಗಳನ್ನು ತೋರಿಸುತ್ತೇನೆ’ ಎಂದು ಸವಾಲೆಸೆದರು.

ADVERTISEMENT

‘25 ವರ್ಷಗಳಿಂದಲೂ ಮತ ಪಡೆದವರು ಹಿಂದುಳಿದ ತಿಗಳ ಸಮುದಾಯದವರು ಇರುವ ಮಾರಪ್ಪನ ಪಾಳ್ಯಕ್ಕೆ ರಸ್ತೆ ಮಾಡಿಸಿರಲಿಲ್ಲ. ಪಕ್ಷಾತೀತವಾಗಿ ತಾಲ್ಲೂಕಿನ ಮತದಾರರಿಗೆ ಅನುಕೂಲ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಮಾರಪ್ಪನ ಪಾಳ್ಯದ ಗ್ರಾಮದೊಳಗೆ ಹೋಗಲು ರೈತರು ತಮ್ಮ ಜಮೀನಿನಲ್ಲಿ 250 ಮೀಟರ್‌ ನಷ್ಟು ಅವಕಾಶ ಮಾಡಿಕೊಡಬೇಕು ಎಂದರು.

ಯೋಜನೆಗಳು ಬರುವುದು ಒಮ್ಮೆ ಮಾತ್ರ. ಬಂದ ಅವಕಾಶವನ್ನು ಬಳಸಿಕೊಳ್ಳಬೇಕು. ರಸ್ತೆಗೆ ಭೂಮಿ ನೀಡಿದವರಿಗೆ ಪರ್ಯಾಯವಾಗಿ ಅನುಕೂಲ ಮಾಡಿಕೊಡುವೆ ಎಂದು ಶಾಸಕರು ತಿಳಿಸಿದರು.

ರಥಬೀದಿ: ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ರಥಬೀದಿಯಲ್ಲಿ ₹1.75 ಕೋಟಿ ವೆಚ್ಚದಲ್ಲಿ ಚರಂಡಿ, ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ಮಾಡಿಸಿಕೊಳ್ಳಲು, ಗ್ರಾಮಸ್ಥರಿಗೆ ಅವಕಾಶ ಮಾಡಿದ್ದು, ದೇವರ ಭಕ್ತ ನರಸಿಂಹಮೂರ್ತಿ ಎಂಬಾತ ಗುಣಮಟ್ಟದಲ್ಲಿ ದೇವರ ಕಾಮಗಾರಿ ಮಾಡಿಸುವುದಾಗಿ ಮುಂದೆ ಬಂದಿದ್ದಾರೆ ಎಂದರು.

ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ದೇವಾಲಯಕ್ಕೆ ₹70 ಲಕ್ಷ ವೆಚ್ಚದಲ್ಲಿ ಮೆಟ್ಟಿಲು ನಿರ್ಮಿಸಲಾಗುವುದು ಎಂದರು.

ಮರುನಿರ್ಮಾಣ: ‘ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇವಾಲಯದಲ್ಲಿ ₹1ಕೋಟಿ ವೆಚ್ಚದಲ್ಲಿ ರಥಬೀದಿಯ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗುತ್ತಿದೆ. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದು, ₹4.70 ಕೋಟಿ ವೆಚ್ಚದಲ್ಲಿ ಚಾರಿತ್ರಿಕ ಸ್ಮಾರಕವನ್ನು ಮರುನಿರ್ಮಾಣ ಮಾಡಿಸಲು ನೀಲನಕ್ಷೆ ತಯಾರಿಸಲಾಗಿದೆ’ ಎಂದು ತಿಳಿಸಿದರು.

‘ಕುದೂರು –ಸುಗ್ಗನಹಳ್ಳಿ ರಸ್ತೆಯಿಂದ ರ₹1.50 ಕೋಟಿ ವೆಚ್ಚದಲ್ಲಿ ತಮ್ಮೇನಹಳ್ಳಿ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದೇವೆ. ಬಡವರ ಮಗನಿಗೆ ಮತನೀಡಿ ಶಾಸಕ ಸ್ಥಾನನೀಡಿ ಗೌರವಿಸುತ್ತಿರುವ ಮಾಗಡಿ ಕ್ಷೇತ್ರದ ಮತದಾರನೆ ನನಗೆ ದೇವರು. ಕ್ಷೇತ್ರದ ಸರ್ವಜನರ, ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು ನನ್ನ ಮೊದಲ ಕರ್ತವ್ಯವಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಂ.ಜಿ.ನರಸಿಂಹಮೂರ್ತಿ, ಹನುಮೇಗೌಡ, ಕುದೂರು ಗ್ರಾಮಪಂಚಾಯಿತಿ ಸದಸ್ಯರಾದ ಕೆ.ಎಂ.ರಾಘವೇಂದ್ರ, ಎಂ.ಜಿ. ರಮೇಶ್‌, ಬಾಲಕೃಷ್ಣ, ಶ್ರೀನಿವಾಸ್‌, ಲತಾಪ್ರಕಾಶ್‌, ಮಾದಿಗೊಂಡನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಾರತಿಗೌಡ, ಜೆಡಿಎಸ್‌ ಮುಖಂಡರಾದ ಮರೂರು ವೆಂಕಟೇಶ್‌, ಟೈಲರ್‌ ಬಾಲಿ, ಪುಟ್ಟರಾಜು, ಮುನಿರಾಜು, ಕೃಷ್ಣಪ್ಪ, ಬಸವರಾಜು, ಕುದೂರಿನ ಪುರುಷೋತ್ತಮ್‌, ಸಾಗರ್‌ ಗೌಡ, ಕೃಷ್ಣಮೂರ್ತಿ, ಗಂಗಭೈರಯ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಣ್ಣ, ಗುತ್ತಿಗೆದಾರ ಪ್ರಸನ್ನ, ಸುಗ್ಗನಹಳ್ಳಿ ಪಾಳೇಗಾರ ಮಹೇಂದ್ರನಾಯಕ ಹಾಗೂ ಮಾರಪ್ಪನ ಪಾಳ್ಯದ ಗ್ರಾಮಸ್ಥರು ಇದ್ದರು. ಡಾಂಬರೀಕರಣಕ್ಕೆ ಚಾಲನೆ ನೀಡಿದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.