ಮಾಗಡಿ: ಮಾಗಡಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಕೆಶಿಪ್ ವತಿಯಿಂದ ಹೊಸಪೇಟೆ ಮುಖ್ಯರಸ್ತೆಯಿಂದ ಸೋಮೇಶ್ವರ ಕಾಲೊನಿವರೆಗೂ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದ್ದು, ಹಲವು ತಿಂಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಜೊತೆಗೆ ಕಾಮಗಾರಿ ತಾತ್ಕಾಲಿಕವಾಗಿ ನಿಂತಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಕಷ್ಟವಾಗುತ್ತಿದೆ. ಮಳೆ ಬಂದಾಗ ಮಣ್ಣಿನ ರಸ್ತೆಯಲ್ಲಿ ಸವಾರರು ಸಂಚರಿಸುವಾಗ ಬೀಳುವ ಪ್ರಕರಣಗಳೂ ಹೆಚ್ಚಾಗಿವೆ. ಹಾಗಾಗಿ ರಸ್ತೆಯ ಒಂದು ಬದಿಗಾದರೂ ಡಾಂಬರು ಹಾಕಿ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಏಕಕಾಲದಲ್ಲಿ ಎರಡು ರಸ್ತೆ ಕಾಮಗಾರಿ: ಪಟ್ಟಣದಲ್ಲಿ ಏಕಕಾಲದಲ್ಲಿ ಹೊಸಪೇಟೆ ಮತ್ತು ಎನ್‌ಇಎಸ್ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು ಮತ್ತು ಗುಡೆಮಾರನಹಳ್ಳಿಗೆ ತೆರಳುವವರಿಗೆ ತೊಂದರೆಯಾಗುತ್ತಿದೆ. ಹೊಸಪೇಟೆ ಮುಖ್ಯರಸ್ತೆ ಅಗಲೀಕರಣದ ನಂತರ ಎನ್ಇಎಸ್ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದರೆ ವಾಹನ ಸವಾರರಿಗೆ ಪರ್ಯಾಯ ರಸ್ತೆ ಇರುವುದು. ಈಗ ಎರಡು ಕಡೆ ಕಾಮಗಾರಿ ಆರಂಭವಾಗಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ.
ಎನ್ಇಎಸ್ ಮುಖಾಂತರ ಕೆಂಪೇಗೌಡ ವೃತ್ತದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಎನ್ಇಎಸ್ ಮುಖ್ಯರಸ್ತೆಯಲ್ಲಿ ದೊಡ್ಡ ಕಾಲುವೆ ಹಾಗೂ ಪೈಪ್‌ಗಳನ್ನು ಹಾಕುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಇದರಿಂದ ಕೆಂಪೇಗೌಡ ವೃತ್ತದಲ್ಲಿ ದೊಡ್ಡ ಗುಂಡಿಯಾಗಿ ಮಳೆ ಬಿದ್ದಾಗ ಕೆರೆಯಂತಾಗುತ್ತಿದೆ. ಹಾಗಾಗಿ ಗುಂಡಿಗಳಿಗೆ ಜಲ್ಲಿ ಹಾಕಿ ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗೆ ಸಂಪೂರ್ಣ ಬೆಂಬಲವಿದೆ. ಆದರೆ, ಏಕಕಾಲದಲ್ಲಿ ಎರಡು ಮುಖ್ಯರಸ್ತೆ ಅಗಲೀಕರಣದ ಅನಿವಾರ್ಯತೆ ಇರಲಿಲ್ಲ. ಹೊಸಪೇಟೆ ಮುಖ್ಯರಸ್ತೆಯಲ್ಲಿ ಶನಿವಾರ ಮತ್ತು ಭಾನುವಾರ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ಕೆಶಿಪ್ ಅಧಿಕಾರಿಗಳು ಕಾಮಗಾರಿಯನ್ನು ಬೇಗ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ.
ಮಹೇಶ್, ಪುರಸಭೆ ಸ್ಥಾಯಿ ಸಮಿತಿ, ಮಾಜಿ ಅಧ್ಯಕ್ಷ ಮಾಗಡಿ
ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಸವಾರಿಗೆ ತೊಂದರೆಯಾಗುತ್ತಿದೆ. ಪಟ್ಟಣದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ಸಂಬಂಧಪಟ್ಟ ಇಲಾಖೆಯವರು ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ಇಲ್ಲವಾದರೆ ರಸ್ತೆ ಅಪಘಾತಗಳು ಹೆಚ್ಚಾಗಲಿವೆ.
ಶಿವಲಿಂಗಯ್ಯ, ನಿವೃತ್ತ ಸೈನಿಕರು ಮಾಗಡಿ
ಮಾಗಡಿ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಕಾಮಗಾರಿ ವಿಳಂಬವಾಗಿದ್ದು ಸಾರ್ವಜನಿಕರು ಸಹಕಾರ ನೀಡಬೇಕು. ಕಾಮಗಾರಿ ಅರ್ಧರಷ್ಟು ಮುಗಿದಿದ್ದು, ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದೇವೆ. ಅದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲತೆ ಮಾಡಿಕೊಡುತ್ತೇವೆ.
ಎಚ್.ಸಿ.ಬಾಲಕೃಷ್ಣ, ಶಾಸಕರು ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.